ISSN (Print) - 0012-9976 | ISSN (Online) - 2349-8846
Reader Mode

ಜಾತಿ ಎಂಬುದು ವಾಸ್ತವವಾಗಿರುವಾಗ ಜಾತಿ ದೌರ್ಜನ್ಯಗಳು ಕಲ್ಪಿತವೇ?

ಕಾನೂನಿನ ದುರುಪಯೋಗದ ಸಂಭಾವ್ಯತೆಯನ್ನು ಮುಂದುಮಾಡಿ ಜಾತಿ ದೌರ್ಜನ್ಯಗಳನ್ನು ತಡೆಗಟ್ಟಲು ಬೇಕಾದ ಬಲವಾದ ಕಾನೂನಿನ ಅಗತ್ಯವನ್ನು ಮರೆಮಾಚಲು ಸಾಧ್ಯವಿಲ್ಲ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಗ್ರಹ) ಕಾಯಿದೆ-೧೯೮೯ ಅಥವಾ ಅಟ್ರಾಸಿಟಿ ವಿರೋಧಿ ಕಾಯಿದೆ-೧೯೮೯ರ ಬಗ್ಗೆ ಸುಪ್ರೀಂ ಕೋರ್ಟು ಇತ್ತೀಚೆಗೆ ನೀಡಿರುವ ಆದೇಶವು ಜಾತಿ ದೌರ್ಜನ್ಯಕ್ಕೆ ಬಲಿಯಾದವರಿಗೆ ತತ್‌ಕ್ಷಣದ ಕಾನೂನು ರಕ್ಷಣೆ ದೊರೆಯುವಂತೆ ಮಾಡುತ್ತಿದ್ದ ಕಾಯಿದೆಯೊಂದನ್ನು ದುರ್ಬಲಗೊಳಿಸುವ ಕ್ರಮವೆಂದು ಸಂಬಂಧಪಟ್ಟವರೆಲ್ಲಾ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಆದೇಶವು ನಿರೀಕ್ಷಣಾ ಜಾಮೀನನ್ನು ಪಡೆದುಕೊಳ್ಳಲು ಕಠಿಣವಾಗಿದ್ದ ಮೂಲ ಕಾನೂನಿನ ಅಂಶಗಳನ್ನು ದುರ್ಬಲಗೊಳಿಸಿರುವುದಲ್ಲದೆ ಪ್ರಥಮ ವರ್ತಮಾನ ವರದಿಯನ್ನು (ಎಫ್‌ಐಆರ್) ದಾಖಲು ಮಾಡುವುದಕ್ಕೆ ಮುನ್ನ ಪೂರ್ವಭಾವಿ ತನಿಖೆಯಾಗಬೇಕಿರುವುದನ್ನು ಕಡ್ಡಾಯಗೊಳಿಸುತ್ತದೆ. ಈ ಪೂರ್ವ ಶರತ್ತುಗಳು ಈ ದೇಶದ ನ್ಯಾಯವ್ಯವಸ್ಥೆಯ ಬಗ್ಗೆ ದಲಿತರು ಮತ್ತು ಆದಿವಾಸಿಗಳು ಇಟ್ಟ ವಿಶ್ವಾಸಕ್ಕೆ ಧಕ್ಕೆ ತಂದಿದೆ.

ಸಾಮಾಜಿಕ ದಮನದ ಅಧಿಕಾರವನ್ನು ಕೊಡಮಾಡುವ ಜಾತಿ ವ್ಯವಸ್ಥೆಯ  ಮೂರ್ತರೂಪವಾಗಿರುವ ಜಾತಿ ದೌರ್ಜನ್ಯಕೋರರ ವಿರುದ್ಧ ಧ್ವನಿ ಎತ್ತುವಷ್ಟು ಬಲವನ್ನು ಈ ಅಟ್ರಾಸಿಟಿ ನಿಗ್ರಹ ಕಾನೂನು ತನ್ನ ಮೂಲ ರೂಪದಲ್ಲಿ ದಲಿತರಿಗೆ ಮತ್ತು ಆದಿವಾಸಿಗಳಿಗೆ ಕೊಡಮಾಡಿತ್ತು. ಅಲ್ಲದೆ ನ್ಯಾಯದಾನ ವ್ಯವಸ್ಥೆಯಲ್ಲಿ ಮಾನವ ಸಹಜ ಲೋಪಗಳಿಂದಾಗಬಹುದಾದ ಪ್ರಮಾದಗಳಿಂದ ರಕ್ಷಣೆಯನ್ನೂ ಒದಗಿಸಿತ್ತು. ಇಷ್ಟೆಲ್ಲಾ ಇದ್ದರೂ ಈ ಕಾನೂನಿನ್ವಯ ಶಿಕ್ಷೆಗೊಳಗಾದವರ ಪ್ರಮಾಣ ಮಾತ್ರ ನಿರಾಶೆ ಹುಟ್ಟಿಸುವಷ್ಟು ಕಡಿಮೆಯೇ ಇದೆ. ಉದಾಹರಣೆಗೆ ೨೦೧೬ರಲ್ಲಿ ಪರಿಶಿಷ್ಟ ಜಾತಿಗಳಿಗೆ ಸಂಬಂಧಪಟ್ಟ ಶೇ.೮೯.೭ನಷ್ಟು ಕೇಸುಗಳು ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದ್ದವು. ಅದೇ ವರ್ಷದಲ್ಲಿ ಪರಿಶಿಷ್ಟ ಪಂಗಡಗಳಿಗೆ ಸಂಬಂಧಪಟ್ಟ ಶೇ. ೮೭.೧ ರಷ್ಟು ಕೇಸುಗಳು ಬಾಕಿ ಉಳಿದಿದ್ದವು. ಈ ಕಾಯಿದೆಯಲ್ಲಿ ದಾಖಲಾಗುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕೆಂಬ ಅಂಶವಿದ್ದರೂ ಅದರ ಉದ್ದೇಶಪೂರ್ವಕ ಉಲ್ಲಂಘನೆಯಿಂದಾಗಿಯೇ ಇಷ್ಟೊಂದು ದೊಡ್ಡ ಪ್ರಮಾಣದಷ್ಟು ಪ್ರಕರಣಗಳು ಬಾಕಿ ಉಳಿಸಲ್ಪಟ್ಟಿವೆ.

 ಈ ಕಾಯಿದೆಗೆ ಸಂಬಂಧಪಟ್ಟಂತೆ ಪ್ರಾಥಮಿಕ ವಿಧಿವಿಧಾನಗಳನ್ನು ಅನುಸರಿಸುವಾಗ ಅಯಾ ಅಧಿಕಾರಿಗಳ ಜಾತಿ ಪೂರ್ವಗ್ರಹಗಳು ಕೆಲಸ ಮಾಡದೇ ಇರುವ ಬಗ್ಗೆ ಸುಪ್ರೀಂ ಕೋರ್ಟು ಖಾತರಿ ನೀಡಬಲ್ಲದೇ? ಈಗ ಸುಪ್ರೀಂ ಕೋರ್ಟು ಆದೇಶಿಸಿರುವ ತಿದ್ದುಪಡಿಯಂತೆ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸುವ ಮುಂಚೆ ಪ್ರಾಥಮಿಕ ತನಿಖೆಯನ್ನು ಕಡ್ಡಾಯಗೊಳಿಸುವ ಕ್ರಮದಿಂದಾಗಿ ದೂರು ಕೊಡುತ್ತಿರುವ ವ್ಯಕ್ತಿಯಲ್ಲಿ (ಈ ಪ್ರಕರಣದಲ್ಲಿ ದಲಿತರ) ಕಾನೂನುನನ್ನು ದುರುಪಯೋಗ ಪಡಿಸಿಕೊಳ್ಳುವಂಥ ಧೋರಣೆಯು ಇರುವುದರಿಂದ ಅಂಥಾ ದೂರಿನಲ್ಲಿ ಅಗತ್ಯವಿರುವಷ್ಟು ನೈತಿಕ ಸ್ಥೋಮತೆ ಇರುವುದಿಲ್ಲವೆಂಬ ಅಭಿಪ್ರಾಯವು ವ್ಯಕ್ತವಾಗಿಲ್ಲವೇ?

ಸುಪ್ರೀಂ ಕೋರ್ಟು ಎಫ್‌ಐಆರ್ ದಾಖಲಿಸುವ ಮುನ್ನ ಪ್ರಾಥಮಿಕ ತನಿಖೆಗೆ ಆದೇಶಿಸುತ್ತಾ ದಲಿತರು ಮತ್ತು ಆದಿವಾಸಿಗಳಲ್ಲಿ ಇದೆ ಎಂದು ಭಾವಿಸಲಾಗುವ ನೈತಿಕತೆಯ ಕೊರತೆಗೆ ಒಂದು ಕಾನೂನು ಪರಿಹಾರವನ್ನು ಸೂಚಿಸಿದೆಯಷ್ಟೆ. ಕೆಲವರಿಗೆ ಕೋರ್ಟಿನ ಈ ವ್ಯಾಖ್ಯಾನದಲ್ಲಿ ಅಷ್ಟೋಂದು ಸಮಸ್ಯೆ ಕಂಡು ಬರದು. ಆದರೆ ಸುಪ್ರೀಂಕೋರ್ಟು ಭಾರತೀಯ ಸಮಾಜದ ದಲಿತೇತರ ಸದಸ್ಯರುಗಳಲ್ಲಿ ದೊಡ್ಡ ಮಟ್ಟದಲ್ಲಿ ಕರಗುತ್ತಿರುವ ನೈತಿಕತೆಯ ಅಂಶವನ್ನೂ ಪರಿಗಣಿಸಬೇಕಿತ್ತೆಂದು ನಾವು ಬಯಸುತ್ತೇವೆ. ಭಾರತೀಯ ಸಮಾಜವು ಕಳೆದುಕೊಳ್ಳುತ್ತಿರುವ ನೈತಿಕತೆಯು ಗುಜರಾತಿನ ಊನಾದಲ್ಲಿ ದಲಿತರ ಮೇಲೆ ನೇರವಾಗಿ ಎಸಗಲಾದ ದೌರ್ಜನ್ಯಗಳಲ್ಲೂ ಮತ್ತು ಜಾತಿ ದೌರ್ಜನ್ಯಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವ ಮೂಲಕ ದಲಿತೇತತರು ಎಸಗುವ ಪರೋಕ್ಷ ದೌರ್ಜನ್ಯಗಳಲ್ಲೂ ವ್ಯಕ್ತವಾಗುತ್ತಲೇ ಇದೆ.

ಒಂದು ಉದಾರವಾದಿ ಚೌಕಟ್ಟಿನೊಳಗಿರುವ ನ್ಯಾಯದಾನ ವ್ಯವಸ್ಥೆಯು ನಿರ್ಲಕ್ಷ್ಯವನ್ನು ಒಂದು ಅಪರಾಧವನ್ನಾಗಿ ಪರಿಗಣಿಸುವುದಿಲ್ಲ. ಏಕೆಂದರೆ ಅದು ಸಾಮಾಜಿಕ ಅಪರಾಧಕ್ಕೆ ಅಥವಾ ಕಾನೂನಿನ ದುರುಪಯೋಗದಂಥ ನೈತಿಕ ಅಪರಾಧಕ್ಕೆ ವ್ಯಕ್ತಿಯನ್ನು ಹೊಣೆಗಾರನಾಗಿಸುತ್ತದೆಯೇ ವಿನಃ ಸಾಮಾಜಿಕ ಗುಂಪನ್ನಲ್ಲ. ಹೀಗಾಗಿ ಎಫ್‌ಐಆರ್‌ಗೆ ಮುನ್ನ ಪ್ರಾಥಮಿಕ ತನಿಖೆ ಮಾಡಬೇಕೆಂಬ ತೀರ್ಮಾನದ ಸಮರ್ಥನೆಯು ಒಂದು ನಿರ್ದಿಷ್ಟ ಕಾನೂನೊಂದರ ಸಂಭವನೀಯ ದುರ್ಬಳಕೆಯ ವಿರುದ್ಧ ವ್ಯಕ್ತಿಯೊಬ್ಬನನ್ನು ರಕ್ಷಿಸ ಬೇಕಿರುವ ಮತ್ತು ಫಿರ್ಯಾದುದಾರ ಮತ್ತು ಆರೋಪಿಗಳಿಬ್ಬರಿಗೂ ನ್ಯಾಯದಾನದ ದೃಷ್ಟಿಯಿಂದ ಸರಿಸಮಾನ  ಪರಿಸ್ಥಿತಿಯನ್ನು ಕಟ್ಟಿಕೊಡಬೇಕಾದ ಅಗತ್ಯತೆಯಿಂದ ಹುಟ್ಟುತ್ತದೆ.

ಹೀಗೆ ಕಾನೂನು ದೃಷ್ಟಿಯಿಂದ ಗುಂಪಿಗಿಂತ ವ್ಯಕ್ತಿಯನ್ನು ಕಾನೂನು ಮಾನ್ಯ ಮಾಡುವ ಪರಿಕಲ್ಪನೆ ಸಮಾಜದ ಕೆಲವು ವರ್ಗಗಳಿಗೆ ಸಮ್ಮತವಾಗಿದ್ದರೂ ಅದು ಎರಡು ಮೂಲಭೂತ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಮೊದಲಿಗೆ ಒಂದು ಸಂಭವನೀಯ ಕಾನುನು ದುರುಪಯೋಗದಿಂದ ವ್ಯಕ್ತಿಯನ್ನು ರಕ್ಷಿಸಬೇಕೆಂಬ ಉಮೇದಿನಿಂದ ಹೊರಡುವ ಈ ಪರಿಕಲ್ಪನೆಯು ಎಲ್ಲ ಇತರ ನೈಜ ದೌರ್ಜನ್ಯಗಳನ್ನೂ ಸಹ ಸಂದೇಹದ ವಲಯಕ್ಕೆ ದೂಡುವುದಲ್ಲದೆ ಇಡೀ ಸಂದರ್ಭದಲ್ಲೇ ಒಂದು ಬಗೆಯ ಅನಿಶ್ಚಿತತೆಯನ್ನು ಸೃಷ್ಟಿಸಿಬಿಡುತ್ತದೆ. ವಾಸ್ತವವಾಗಿ ದೌರ್ಜನ್ಯಗಳ ನಿರ್ದಿಷ್ಟ ಭೂಮಿಕೆಯ ಬಗ್ಗೆಯೇ ಅದು ಇಲ್ಲದ ಗೊಂದಲವನ್ನು ಹುಟ್ಟುಹಾಕುತ್ತದೆ. ಇದರಿಂದ ಅಂತಿಮವಾಗಿ ಈ ದೇಶದ ಘನಘೋರ ಸತ್ಯವಾಗಿರುವ ಜಾತಿ ದೌರ್ಜನ್ಯಗಳ ವಾಸ್ತವವೇ ಬುಡರಹಿತ ಪ್ರತಿಪಾದನೆ ಎಂಬಂತಾಗಿಬಿಡುತ್ತದೆ.

ಎರಡನೆಯದಾಗಿ ದೂರುದಾರ ಮತ್ತು ಆರೋಪಿಗಳಿಬ್ಬರೂ ಕಾನೂನು ಪುಸ್ತಕಗಳಿಂದಾಚೆಗಿರುವ ಮತ್ತು ಆ ನಿರ್ದಿಷ್ಟ ಕೋರ್ಟಿನ ದೃಷ್ಟಿಗೆ ನಿಲುಕದ ಶಕ್ತಿಗಳ ಬಾಹ್ಯ ಅಭಿವ್ಯಕ್ತಿಗಳಷ್ಟೇ ಆಗಿದ್ದಾರೆ. ಈ ಶಕ್ತಿಗಳು ಆಯಾ ಪ್ರದೇಶಗಳಲ್ಲಿನ ದಲಿತೇತರ ಬಲಾಢ್ಯ ಶಕ್ತಿಗಳ ನಡುವಿನ ಒಂದು ಬಣಕ್ಕೆ ಸೇರಿದವರಾಗಿರುತ್ತಾರೆ. ಒಮ್ಮೊಮ್ಮೆ ಈ ಬಲಾಢ್ಯ ಬಣಗಳ ನಡುವಿನ ಸ್ಪರ್ಧೆಯ ಭಾಗವಾಗಿ ದಲಿತರು ಈ ಕಾನೂನನ್ನು ಒಳಗೊಂಡಂತೆ ಎಲಾ ಕಾನೂನುಗಳನ್ನು ದುರ್ಬಳಕೆ ಮಾಡಲೇ ಬೇಕಾದ ಪರಿಸ್ಥಿಗೆ ದೂಡಲ್ಪಡುತ್ತಾರೆ.

ಈ ಕಾನೂನನ್ನು ಒಂದು ನೈತಿಕ ರಕ್ಷಾ ಕವಚದಂತೆ ತಮ್ಮ ಬೆನ್ನಿಗೆ ಕಟ್ಟಿಕೊಂಡೇ ಓಡಾಡಬೇಕಾಗಿದೆಯೆಂಬ ದಲಿತರ ನೋವುಗಣ್ಣನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಅಂದರೆ ಒಂದು ನೈತಿಕ ದೃಷ್ಟಿಕೋನದಲ್ಲಿ ನೋಡುವುದಾದರೆ ಈ ಕಾನೂನು ದಲಿತರಲ್ಲಿ ಒಂದು ಅಸಂತೋಷದ ಪ್ರಜ್ನೆಯನ್ನೇ ಹುಟ್ಟುಹಾಕಿದೆ. ಹೀಗಾಗಿ ದಲಿತರು ಅದನ್ನು ದುರ್ಬಳಕೆ ಮಾಡಿಕೊಳ್ಳೂತ್ತಾರೆಂದು ನಾವು ಕಲ್ಪಿಸಿಕೊಳ್ಳಬಾರದು.

ಇಂಥಾ ಒಂದು ಕಾನೂನನ್ನು ಜಾರಿಗೆ ತರಲೇ ಬೇಕಾದ ಸನ್ನಿವೇಶವನ್ನು ಸೃಷ್ಟಿಸಿದವರಾರೆಂಬ ಪ್ರಶ್ನೆಯನ್ನು ನಾವು ಕೇಳಬೇಕಾಗುತ್ತದೆ. ಏಕೆಂದರೆ ಸಮಾಜದಲ್ಲಿ ತಮ್ಮ ಮೇಲಾಧಿಪತ್ಯವನ್ನು ದಿನನಿತ್ಯ ಸಾಧಿಸಬೇಕೆಂಬ ದಲಿತೇತರ ಜಾತಿಗಳ ಸಾಮಾಜಿಕ ಅಗತ್ಯದಿಂದಲೇ ದಲಿತರ ಮೇಲೆ ದೌರ್ಜನ್ಯಗಳು ಸಂಭವಿಸುತ್ತವೆ. ಆದರಿಂದ ಯಾವುದೇ ಕಾನೂನಿನ ದುರ್ಬಳಕೆಯನ್ನು ಮಾಡುವಂಥ ಅಗತ್ಯವನ್ನೇ ಇಲ್ಲವಂತೆ ಮಾಡುವ ನೈತಿಕ ನಾಯಕತ್ವವನ್ನು ದಲಿತೇತರ ಜಾತಿಗಳೇ ವಹಿಸಬೇಕಾಗುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಜಾತಿಯೆಂಬುದು ಒಂದು ವಾಸ್ತವವಲ್ಲದೆ ಕೇವಲ ಪುಕಾರು ಮಾತ್ರವಾಗಿದ್ದರೆ ಅಟ್ರಾಸಿಟಿ ತಡೆಯಂಥ ಕಾನೂನುಗಳ ಅಗತ್ಯವೇ ಬರುತ್ತಿರಲಿಲ್ಲ. ಹೀಗಾಗಿ ಯಾವುದೇ ಸಮಾಜವು ತನ್ನಂತೆ ತಾನು ಒಂದು ಶಿಷ್ಟ ಮತ್ತು ಸಭ್ಯ ಸಮಾಜವಾಗಿರುವುದಿಲ್ಲವಾದ್ದರಿಂದ ಮತ್ತು ಜಾತಿ ಆಚರಣೆಯೆಂಬುದು ಬಹುಸಂಖ್ಯಾತ ಭಾರತೀಯರ ಹವ್ಯಾಸವೇ ಆಗಿಬಿಟ್ಟಿರುವುದರಿಂದಲೇ ಕಠಿಣ ಕ್ರಮಗಳ ಅವಕಾಶಗಳುಳ್ಳ ಬಲವಾದ ಕಾನೂನೊಂದು ಅನಿವಾರ್ಯವಾಗಿದೆ.

ಆದ್ದರಿಂದ ವ್ಯಕ್ತಿಯ ಸುತ್ತಾ ಹೆಣೆಯಲಾಗಿರುವ ನಮ್ಮ ನ್ಯಾಯಾಲಯಗಳ ನಿರ್ದೇಶನಗಳು ಕ್ರಮೇಣವಾಗಿಯಾದರೂ ವ್ಯಕ್ತಿಯಿಂದಾಚೆಗೆ ಸಮಾಜದ ಸರ್ವರ ಸಮಾನ ಮಾನವೀಯ ಕಾಳಜಿಗಳನ್ನು ಪರಿಗಣಿಸಲು ಹಾತೊರೆಯುವಂಥ ಸಮಾಜವೊಂದರ ಸಾಮೂಹಿಕ ನೈತಿಕ ಅಭಿವ್ಯಕ್ತಿಯಾಗಬೇಕಿದೆ. ಇದರರ್ಥ ಭಾರತದ ಕಾನೂನು ವ್ಯವಸ್ಥೆಯು ಈ ಆಶಯಗಳಿಗೆ ಕುರಾಡಾಗಿದೆ ಎಂದಲ್ಲ. ತಮ್ಮ ದೈನಂದಿನ ನ್ಯಾಯಾದೇಶಗಳ ಮೂಲಕ ಮಧ್ಯಪ್ರವೇಶ ಮಾಡುವ ಪ್ರಗತಿಪರ ನ್ಯಾಯಾಂಗ ಕ್ರಿಯಾಶೀಲತೆಯು ಇಡೀ ಸಮಾಜದ ಸಾಮೂಹಿಕ ಅಭಿವ್ಯಕ್ತಿಯಾಗಬೇಕು. ನಿರ್ದಿಷ್ಟ ಪ್ರಕರಣಗಳ ನ್ಯಾಯಸಮ್ಮತೆಯನ್ನು ಮಾತ್ರ ಗಮನಿಸುವ ಸೀಮಿತ ದೃಷ್ಟಿಕೋನವು ಮೂಲ ಕಾನೂನಿನ ಮೂಲಕ ದಲಿತರು ಪಡೆದುಕೊಂಡಿದ್ದ ಸಣ್ಣಪುಟ್ಟ ರಕ್ಷಣೆಗಳನ್ನು ಕಿತ್ತುಕೊಳ್ಳುತ್ತದೆ. ಕಾನೂನುನೆಂಬುದು ಸಾಮಾಜಿಕ ಸಮುದಾಯದ ಅಭಿವ್ಯಕ್ತಿಯಾಗಲು ಅತ್ಯಗತ್ಯವಾಗಿ ಬೇಕಿರುವ ಸಾಮೂಹಿಕ ನೈತಿಕ ಪ್ರಜ್ನೆಯ ಬೆಳವಣಿಗೆಗೆ ಈ ಸೀಮಿತ ದೃಷ್ಟಿಕೋನ ಅಡ್ಡಿಯಾಗುತ್ತದೆ.

 

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top