ISSN (Print) - 0012-9976 | ISSN (Online) - 2349-8846

ತಡೆಗಟ್ಟಬಹುದಾದ ಆರೋಗ್ಯ ಬಿಕ್ಕಟ್ಟು

ಬಹು ಔಷಧ ನಿರೋಧಕ ಗುಣವನ್ನು ಬೆಳೆಸಿಕೊಂಡಿರುವ ಕ್ಷಯ ರೋಗದ ವಿರುದ್ಧದ ಹೋರಾಟದ ರಣತಂತ್ರವನ್ನು ಸರ್ಕಾರವು ಸರಿಯಾಗಿ ರೂಪಿಸಬೇಕು ಮತ್ತು ಅದಕ್ಕೆ ಅಗತ್ಯವಿರುವಷ್ಟು ಧನಸಹಾಂiiವನ್ನೂ ಒದಗಿಸಬೇಕು.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

೨೦೨೫ರ ವೇಳೆಗೆ ಭಾರತವನ್ನು  ಕ್ಷಯರೋಗ ಮುಕ್ತ ಭಾರತವನ್ನಾಗಿಸಬೇಕೆಂದು ಪ್ರಧಾನಿ ಮೋದಿಯವರು ಈ ತಿಂಗಳ ಮೊದಲ ಭಾಗದಲ್ಲಿ ಕರೆನೀಡಿದ್ದಾರೆ. ಆದರೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯು ನಡೆಸಿದ ಸರ್ವೇಕ್ಷಣೆಯ ಪ್ರಕಾರ ಈ ವಿನಾಶಕಾರಿ ಖಾಯಿಲೆಯು ದೇಶದ ಉದ್ದಗಲಕ್ಕೂ ಹರಡಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ೨೦೧೬ರ ವೇಳೆಗೆ ಜಗತ್ತಿನ ೧ ಕೋಟಿ ಕ್ಷಯ ರೋಗಿಗಳಲ್ಲಿ ೨೮ ಲಕ್ಷ ರೋಗಿಗಳು ಭಾರತೀಯರಾಗಿದ್ದರು. ಅದರಲ್ಲಿ ೧,೪೦,೦೦೦ ರೋಗಿಗಳು ಬಹು ಔಷಧಿ ನಿರೊಧಕ (ಮಲ್ಟಿ ಡ್ರಗ್ ರೆಸಿಸ್ಟೆಂಟ್- ಎಂಡಿಆರ್) ಕ್ಷಯ ರೋಗಕ್ಕೆ ತುತ್ತಾಗಿದ್ದರು. ಅದೇ ವರ್ಷ ಈ ರೋಗಕ್ಕೆ ಬಲಿಯಾಗಿ ೪,೨೩,೦೦೦ ರೋಗಿಗಳು ಸಾವಿಗೀಡಾದರು. ನಮ್ಮ ದೇಶದಲ್ಲಿ ಬಹು ಔಷಧಿ ನಿರೋಧಕ ಕ್ಷಯ ಪೀಡಿತರು, ಅತಿ ಔಷಧಿ ನಿರೋಧಕ ಕ್ಷಯ (ಎಕ್ಸ್ಟೆನ್ಸೀವ್ ಡ್ರಗ್ ರೆಸಿಸ್ಟೆಂಟ್- ಇಡಿಆರ್) ರೋಗಿಗಳು, ಸಮಗ್ರ ಔಷಧ ನಿರೋಧಕ (ಟೋಟಲ್ ಡ್ರಗ್ ರೆಸಿಸ್ಟೆಂಟ್- ಟಿಡಿಆರ್) ಕ್ಷಯ ರೋಗಿಗಳು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆನ್ನುವುದೇ ಈ ರೋಗವು ಎಷ್ಟು ವ್ಯಾಪಕವಾಗಿ ಹಬ್ಬಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಸರ್ಕಾರದ ಇತ್ತೀಚಿನ ಅಂಕಿಅಂಶಗಳ ಪ್ರಕಾರ ದೇಶದ ಕ್ಷಯ ರೋಗಿಗಳಲ್ಲಿ ಕಾಲು ಭಾಗಕ್ಕಿಂತಲೂ ಹೆಚ್ಚು ಜನ ಔಷಧಿ ನಿರೋಧಕ ಕ್ಷಯಕ್ಕೆ ತುತ್ತಾಗಿದ್ದಾರೆ. ಕ್ಷಯ ರೋಗಕ್ಕೆ ತುತ್ತಾಗುವವರು ಪ್ರಧಾನವಾಗಿ ಬಡವರೇ ಆಗಿದ್ದರೂ ನಗರದ ಮಧ್ಯಮ ವರ್ಗವೂ ಸಹ ಕ್ಷಯ ರೋಗದ ಹಲವು ಇತರ ಬಗೆಗಳಿಗೆ ತುತ್ತಾಗುತ್ತಿದ್ದಾರೆ. ಹೆಚ್ಚುತ್ತಿರುವ ಸಕ್ಕರೆ ಖಾಯಿಲೆ ಮತ್ತಿತರ ಕಾರಣಗಳಿಂದಜನತೆಯ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿರುವುದು ಇದಕ್ಕೆ ಒಂದು ಕಾರಣವಾಗಿದೆ. ಬಹಳಷ್ಟು ಪ್ರಕರಣಗಳಲ್ಲಿ ಎಚ್.ಐ.ವಿ/ ಏಡ್ಸ್ ಸೋಂಕು ಪೀಡಿತರಿಗೆ ಕ್ಷಯ ರೋಗವೂ ಜೊತೆಜೊತೆಯಲ್ಲಿ ಅಂಟಿಕೊಳ್ಳುವುದು ಇದಕ್ಕೆ ಮತ್ತೊಂದು ಕಾರಣ. ಸರ್ಕಾರಿ ವರದಿಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕ್ಷಯ ರೋಗದ ಇಲಾಜು ತೆಗೆದುಕೊಳ್ಳುತ್ತಿರುವವರ ಮತ್ತು ಪತ್ತೆಯಾಗದ ಮತ್ತು ಘೋಷಿಸಿಲ್ಲದ ಪ್ರಕರಣಗಳ ಲೆಕ್ಕಾಚಾರ ಇರುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಪವಾಡವೇ ಸಂಭವಿಸಿದರೂ ಮುಂದಿನ ಏಳೇ ವರ್ಷಗಳಲ್ಲಿ ಭಾರತವು ಕ್ಷಯ ಮುಕ್ತ ದೇಶವಾಗಲು ಸಾಧ್ಯವೇ ಇಲ್ಲ.

ಈ ಖಾಯಿಲೆಯ ಸಾಮಾಜಿಕ ಅರ್ಥಿಕ ಪರಿಣಾಮಗಳು, ಅದರಲ್ಲೂ ವಿಶೇಷವಾಗಿ ಬಡವರ ಮೇಲಿನ ಪರಿಣಾಮಗಳು ಹಾಗೂ ಕ್ಷಯ ರೋಗದ ಬಗ್ಗೆ ಪ್ರಚಲಿತದಲ್ಲಿರುವ ಸಾಮಾಜಿಕ ಕಳಂಕದ ಧೋರಣೆಗಳು ಈ ರೋಗವನ್ನು ಪ್ರಾರಂಭದಲ್ಲೇ ಪತ್ತೆ ಮಾಡಿ ನಿವಾರಿಸುವ ಅವಕಾಶಗಳನ್ನು ಹೇಗೆ ತಡೆಗಟ್ಟುತ್ತದೆ ಎಂಬ ವಿಷಯವಂತೂ ವಿಸ್ತೃತ ದಾಖಲಾಗಿದೆ. ಕ್ಷಯ ರೋಗದ ಬಗೆಗಿನ ಅರಿವು ಮತ್ತು ಇಲಾಜುಗಳು ಹೆಚ್ಚಲು ದೊಡ್ಡ ಪಾತ್ರ ವಹಿಸಿದ್ದ ರಾಷ್ಟ್ರೀಯ ಕ್ಷಯ ನಿಯಂತ್ರಣ ಕಾರ್ಯಕ್ರಮವನ್ನು ಇದೀಗ ಪರಿಷ್ಕೃತ ರಾಷ್ಟ್ರೀಯ ಕ್ಷಯ ನಿಯಂತ್ರಣ ಕಾರ್ಯಕ್ರಮವನ್ನಾಗಿ ಪುನರ್ರೂಪಿಸಲಾಗಿದೆ. ಆದರೆ ಈ ಪರಿಷ್ಕೃತ ಯೋಜನೆಯ ವಿನ್ಯಾಸ ಮತ್ತು ಅನುಷ್ಠಾನ ಎರಡರಲ್ಲೂ ಲೋಪದೋಷಗಳಿವೆ. ಆರು ತಿಂಗಳ ನೇರ ನಿಗಾ ಅಲ್ಪಾವಧಿ ಚಿಕಿತ್ಸೆ ಕಾರ್ಯಕ್ರಮ  (ಡೈರೆಕ್ಟ್ಲಿ ಅಬ್ಸರ್ವ್ಡ್ ಟ್ರೀಟ್‌ಮೆಂಟ್ ಶಾರ್ಟ್ ಕೋರ್ಸ್- ಡಾಟ್ಸ್) ಈ ಪರಿಷ್ಕೃತ ಯೋಜನೆಯ ಪ್ರಧಾನ ಕಾರ್ಯಕ್ರಮವಾಗಿದ್ದರೂ ಸಿಬ್ಬಂದಿ ಮತ್ತು ಔಷಧಿಗಳ ಕೊರತೆಯಿಂದಾಗಿ ಅದು ಅನುಷ್ಠಾನದಲ್ಲಿ ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಯೋಜನೆಯು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೊಡನೆ ಸರಿಯಾಗಿ ಬೆಸೆದುಕೊಂಡಿಲ್ಲ. ಇದರ ಪರಿಣಾಮವಾಗಿ ಬಹಳಷ್ಟು ರೋಗಿಗಳಿಗೆ ಈ ಪರಿಷ್ಕೃತ ಯೋಜನೆಯಲ್ಲಿ ಲಭ್ಯವಾಗುವ ಉಚಿತ ರೋಗ ಪತ್ತೆ ಮತ್ತು ಚಿಕಿತ್ಸೆ ಸೌಲಭ್ಯಗಳ ಬಗ್ಗೆ ತಿಳಿದೇ ಇರುವುದಿಲ್ಲ. ಹೀಗಾಗಿ ಬಹಳಷ್ಟು ರೋಗಿಗಳು ಖಾಸಗಿ ಆಸ್ಪತ್ರೆಗಳ ಮೊರೆಹೋಗುತ್ತಾರೆ. ವಾಸ್ತವವಾಗಿ ಕ್ಷಯ ಚಿಕಿತ್ಸೆಯ ಶೇ.೬೦ರಷ್ಟು ಭಾಗವು ಖಾಸಗಿಯವರ ಹಿಡಿತದಲ್ಲೇ ಇದ್ದು ಬಹಳಷ್ಟು ಸಿಬ್ಬಂದಿಗಳಿಗೆ ಇದರ ಬಗ್ಗೆ ಸೂಕ್ತ ತರಬೇತಿಯಾಗಲಿ ತಿಳವಳಿಕೆಯಾಗಲೀ ಇರುವುದಿಲ್ಲ. ಅದರೂ ಕೆಲವು ಖಾಸಗಿ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಶ್ಲಾಘನೀಯ ಕೆಲಸವನ್ನು ಮಾಡುತ್ತಿವೆ. ರೋಗ ಪತ್ತೆಯಲ್ಲಿ ಮಾಡುವ ತಪ್ಪುಗಳು,   ಆಂಟಿಬಯಾಟಿಕ್ಸ್ ಮತ್ತು  ಔಷಧಗಳ ಬೇಕಾಬಿಟ್ಟಿ ಬಳಕೆ ಮತ್ತು ಚಿಕಿತ್ಸೆಯನ್ನು ಬಿಟ್ಟೂಬಿಡದೆ ತೆಗೆದುಕೊಳ್ಳದಿರುವುದು ಸಹ ಎಂಡಿಆರ್ ಮತ್ತು ಎಕ್ಸ್‌ಡಿಆರ್ ಕೇಸುಗಳು ಹೆಚ್ಚುತ್ತಿರುವುದಕ್ಕೆ ಕಾರಣ.

ಒಂದು ಬಹು ದೊಡ್ಡ ಸಾರ್ವಜನಿಕ ಆರೋಗ್ಯದ ಬಿಕ್ಕಟ್ಟಾಗಿ ಪರಿಣಮಿಸಬಹುದಾದ ಈ ಸಮಸ್ಯೆಯ ಪರಿಹಾರಗಳ ಬಗ್ಗೆ ಹಲವಾರು ಸಲಹೆಗಳನ್ನು ನೀಡಲಾಗಿದೆ. ದೇಶಾದ್ಯಂತ ಒಂದೇ ಬಗೆಯ ರೋಗ ಪತ್ತೆ ಮತ್ತು ಚಿಕಿತ್ಸೆ ವಿಧಾನಗಳನ್ನು ಅನುಸರಿಸುವ ಬದಲಿಗೆ ದೇಶದ ವಿವಿಧ ಪ್ರದೇಶಗಳಲ್ಲಿ ಇರುವ ಮೂಲಭೂತ ಸೌಕರ್ಯಗಳ ಮತ್ತು ಸಾಮಾಜಿಕ -ಆರ್ಥಿಕ ಭಿನ್ನತೆಗಳ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕ್ಷಯರೋಗ ನಿವಾರಣೆಯ ರಣತಂತ್ರವನ್ನು ಯೋಜಿಸಬೇಕೆಂಬುದು ಅಂಥಾ ಸಲಹೆಗಳಲ್ಲಿ ಒಂದು. ರೋಗಪತ್ತೆ ಮಾಡಲು ಈಗಲೂ ಬಳಸುತ್ತಿರುವ ಬಹಳಷ್ಟು ಹಳೆಯದಾದ ಉಗುಳು ಪರೀಕ್ಷೆಗೆ ಬದಲಿಗೆ ಇನ್ನೂ ಉತ್ತಮ ವಿಧಾನಗಳನ್ನು ಬಳಸಬೇಕಿರುವುದು ಈ ಕ್ಷೇತ್ರದಲ್ಲಿ ಆಗಬೇಕಿರುವ ಮತ್ತೊಂದು ಸುಧಾರಣೆ. ವೈದ್ಯಕೀಯ ಪರಿಣಿತರ ಪ್ರಕಾರ ಈ ಭೀಕರ ರೋಗಾಣುವನ್ನು ಪತ್ತೆ ಹಚ್ಚಲು ಮೊದಲು ಜೀನೆಕ್ಸ್‌ಪರ್ಟ್ (ಅಣು ಪರೀಕ್ಷೆ) ಪರೀಕ್ಷೆಯನ್ನು ಮಾಡಬೇಕು.

ಕ್ಷಯರೋಗದ ಪತ್ತೆ ಮತ್ತು ಚಿಕಿತ್ಸೆಗಳ ಬಗ್ಗೆ ಜನರ ತಿಳವಳಿಕೆಯನ್ನು ಹೆಚ್ಚಿಸಲು ಸಮುದಾಯ ಆರೋಗ್ಯ ಕಾರ್ಯಕರ್ತರನ್ನು ಒಳಗೊಳ್ಳುವ ಸಲಹೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕ್ಷಯ ರೋಗಕ್ಕೆ ತುತ್ತಾದವರು ಇರುವ ಮನೆಗಳ ಮಕ್ಕಳನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡಿ ಈ ರೋಗವು ಶೀಘ್ರವಾಗಿ ಹರಡುವುದನ್ನು ತಡೆಯಬೇಕು. ಸಕ್ಕರೆ ಖಾಯಿಲೆ ಮತ್ತು ಎಚ್‌ಐವಿ ಸೋಂಕಿತರಿಗೂ ಕ್ಷಯ ರೋಗವು ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕು. ಉಸಿರುಗಟ್ಟಿಸುವ ಮತ್ತು ನೈರ್ಮಲ್ಯ ಸಮಸ್ಯೆಗಳನ್ನು ಉಂಟುಮಾಡುವ ಯೋಜನಾ ರಹಿತ ನಗರ ಅಭಿವೃದ್ಧಿ, ಖಾಸಗಿ ಆರೋಗ್ಯ ಸೇವಾ ಕ್ಷೇತ್ರದಲ್ಲಿನ ಲಾಭಕೋರ ವರ್ಗದ ನಿಯಂತ್ರಣ ಮತ್ತು ಕ್ಷಯರೋಗದ ಬಗ್ಗೆ ಹಬ್ಬಿಕೊಂಡಿರುವ ಸಾಮಾಜಿಕ ಕಳಂಕದಂಥ ಮನೋಭಾವಗಳಂಥ ವೈದ್ಯಕೀಯೇತರ ಕಾರಣಗ ಬಗ್ಗೆಯೂ ಗಮನಹರಿಸಬೇಕಿದೆ.

ಇವುಗಳಲ್ಲಿ ಅಪೌಷ್ಟಿಕತೆ ಮತ್ತು ಬಡತನವೇ ಕ್ಷಯ ರೋಗವು ಹರಡಲು ಅತ್ಯಂತ ಪ್ರಧಾನವಾದ ಮತ್ತು ಕರುಣಾಜನಕ ಕಾರಣವಾಗಿದೆ. ಡಾಟ್ಸ್ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಿರುವ ರೋಗಿಗಳಿಗೆ ಉತ್ತಮ ಪೌಷ್ಟಿಕಾಂಶಗಳನ್ನು ಒದಗಿಸುವ ಮೂಲಕ ಕೊಡುತ್ತಿರುವ ಚಿಕಿತ್ಸೆ ಪರಿಣಾಮಕಾರಿಯಾಗುವಂತೆ ನೋಡಿಕೊಳ್ಳಬೇಕಿದೆ. ಮತ್ತು ರಾಜ್ಯ ಸರ್ಕಾರಗಳು ಪೌಷ್ಟಿಕಾಂಶಗಳನ್ನು ಡಾಟ್ಸ್ ಕಾರ್ಯಕ್ರಮದ ಭಾಗವಾಗಿಯೇ ಒದಗಿಸುವ ಯೋಜನೆಗಳನ್ನು ರೂಪಿಸಬೇಕು.

 ಕ್ಷಯ ರೋಗದ ವಿರುದ್ಧದ ಹೋರಾಟವು ಗುಣಮಟ್ಟದ ರೋಗಪತ್ತೆ ಮತ್ತು ಚಿಕಿತ್ಸೆಗಳ ಜೊತೆಗೆ ಸರಿಯಾದ ಪೌಷ್ಟಿಕತೆ ಮತ್ತು ಮೂಲಭೂತ ನೈರ್ಮಲ್ಯ ಸೌಕರ್ಯಗಳು ಒಳಗೊಳ್ಳಬೇಕು. ಮೇಲ್ನೋಟಕ್ಕೆ ಇವೆಲ್ಲಾ ಸರಳ ಮತ್ತು ಸುಲಭ ಎಂದೆನಿಸಬಹುದು. ಆದರೂ ವಾಸ್ತವವೇನೆಂದರೆ ಭಾರತದ ಬಹುಸಂಖ್ಯಾತ ರೋಗಿಗಳು ಈಗಲೂ ಈ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿಯೇ ಇದ್ದಾರೆ. ಸಾರ್ವಜನಿಕ ಆರೋಗ್ಯ ಸೇವೆಯೂ ಅತ್ಯಂತ ಕೀಲಕ ಪ್ರಶ್ನೆಯಾಗಿದೆ. ಒಂದೆಡೆ ಸರ್ಕಾರವು ೨೦೨೫ರ ವೇಳೆಗೆ ಕ್ಷಯ ರೋಗವನ್ನು ದೇಶದಿಂದ ನಿರ್ಮೂಲನೆ ಮಾಡುವ ರಾಷ್ಟ್ರೀಯ ರಣತಂತ್ರ ಯೋಜನೆಯನ್ನು ಘೊಷಿಸಿದ್ದರೂ ಅರೋಗ್ಯ ಸೇವೆಗಳ ಮೇಲೆ ಒಟ್ಟಾರೆ ರಾಷ್ಟ್ರೀಯ ಉತ್ಪನ್ನದ ಕೇವಲ ಶೇ. ೧.೪ರಷ್ಟನ್ನು ಮಾತ್ರ ವ್ಯಯ ಮಾಡುತ್ತಿದೆ. ಈ ದೇಶದಲ್ಲಿರುವ ಕ್ಷಯ ರೋಗಿಗಳ ಸಂಖ್ಯೆ ಮತ್ತು ಅವರಿಗೆ ಚಿಕಿತ್ಸೆನೀಡಲು ವೆಚ್ಚವಾಗಬಹುದಾದ ಮೊತ್ತವನ್ನು ಗನದಲ್ಲಿಟ್ಟುಕೊಂಡಾಗ, ಈ ರೋಗವು ಹರಡದಂತೆ ನಿಗ್ರಹ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಜೊತೆಗೆ ಇನ್ನು ಎರಡೂ ಪ್ರಮುಖ ಕ್ಷೇತ್ರಗಳ ಕುರಿತು ಸರ್ಕಾರವು ತನ್ನ ರಾಜಕೀಯ ಇಚ್ಚಾಶಕ್ತಿಯನ್ನು ಪ್ರದರ್ಶಿಸಬೇಕಿದೆ. ಮೊದಲನೆಯದಾಗಿ ಅದು ಒಟ್ಟಾರೆ ಆರೋಗ್ಯ ಸೇವೆಯ ಮೇಲೆ ಮತ್ತು ನಿರ್ದಿಷ್ಟವಾಗಿ ಕ್ಷಯ ನಿರ್ಮೂಲನ ಕಾರ್ಯಕ್ರಮದ ಮೇಲೆ ಮಾಡುತ್ತಿರುವ ವೆಚ್ಚದ ಮೊತ್ತವನ್ನು ಹೆಚ್ಚಿಸಬೇಕಿದೆ. ಎರಡನೆಯದಾಗಿ ಎಂಡಿಆರ್ ಬಗೆಯ ಕ್ಷಯ ರೋಗಿಗಳಿಗೆ ಅತ್ಯಗತ್ಯವಾದ ಎರಡು ಔಷಧಿಗಳನ್ನು ಉತ್ಪಾದಿಸಲು ಭಾರತದ ಜನರಿಕ್ ಔಷಧ ಉತ್ಪಾದಕರಿಗೆ ಅವಕಾಶ ಮಾಡಿಕೊಡುವ ಮೂಲಕ ಆ ಔಷಧಗಳು ಅಗ್ಗದ ದರದಲ್ಲಿ ದೊರೆಯುವಂತೆ ಮಾಡಬೇಕು.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top