ISSN (Print) - 0012-9976 | ISSN (Online) - 2349-8846

ಒಂದು ವಾಣಿಜ್ಯ ಯುದ್ಧದ ಹಾದಿಯಲ್ಲಿ..

೧೯೩೦ರಲ್ಲಿ ಜಾಗತಿಕ ಆರ್ಥಿಕ ಹಿಂದ್ಸರಿತಕ್ಕೆ  ಕಾರಣವಾದ ಸಂಗತಿಗಳು ಮರುಕಳಿಸುತ್ತಿವೆಯೇ?

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಇದೇ ಮಾರ್ಚ್ ೧ ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಅವರು ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಸ್ಟೀಲಿನ ಆಮದಿನ ಮೇಲೆ ಶೇ.೨೫ರಷ್ಟು ಆಮದು ಸುಂಕವನ್ನೂ, ಅಲ್ಯುಮಿನಿಯಂ ಆಮದಿನ ಮೇಲೆ ಶೇ. ೧೦ರಷ್ಟು ಆಮದು ಸುಂಕ ಹೆಚ್ಚಳವನ್ನು ಘೋಷಿಸಿದರು. ಇದು ನಿಧಾನವಾಗಿ ಜಗತ್ತಿನಲ್ಲಿ ಒಂದು ವಾಣಿಜ್ಯ ಯುದ್ಧಕ್ಕೆ ಎಡೆಮಾಡಿಕೊಡಬಹುದೆಂಬ ಆತಂಕವನ್ನು ಎಲ್ಲೆಡೆ ಹುಟ್ಟುಹಾಕಿದೆ. ಪತ್ರಿಕೆಯು ಅಚ್ಚಿಗೆ ಹೋಗುವ ವೇಳೆಗೆ ಅಂಥಾ ವಾಣಿಜ್ಯ ಯುದ್ಧವಿನ್ನೂ ಪ್ರಾರಂಭವಾಗಿಲ್ಲ. ವಿಶ್ವದ ಪ್ರಮುಖ ಅರ್ಥಿಕತೆಗಳ ನಡುವೆ ನಡೆಯಬಹುದಾದ ಇಂಥಾ ವಾಣಿಜ್ಯ ಯುದ್ಧವು ವಿಶ್ವದ ವ್ಯಾಪಾರ-ವಹಿವಾಟಿನಲ್ಲಿ ಗಮನಾರ್ಹ ಸಂಕುಚನವನ್ನು ಉಂಟುಮಾಡುತ್ತದೆಂಬುದು ಕೇವಲ ಆತಂಕದ ಮಾತಲ್ಲ. ಅಲ್ಲದೆ ಇದು ವಿಶ್ವದ ಆರ್ಥಿಕತೆಯ ಮೇಲೂ ಹಿಂದ್ಸರಿತದ ಪರಿಣಾಮವನ್ನುಂಟುಮಾಡಬಹುದು. ಇದು ಈಗಾಗಲೇ ನಡೆಯುತ್ತಿರುವ ಭೌಗೋಳಿಕ-ರಾಜಕೀಯ ಸಂಘರ್ಷಗಳ ಮೇಲೆ ಮತ್ತಷ್ಟು ಒತ್ತಡವನ್ನು ಹಾಕುವುದಂತೂ ಖಂಡಿತಾ.  ಈಗಾಗಲೇ ರಾಷ್ಟ್ರೀಯವಾದದ ಅಲೆಯ ಮೇಲೆ ಸವಾರಿ ಮಾಡುತ್ತಾ ಅಮೆರಿಕ ಮೊದಲು ಎಂಬ ಆಕ್ರಮಣಶಿಲ ನೀತಿಯನ್ನು ಅನುಸರಿಸುತ್ತಿರುವ ಟ್ರಂ ಅವರ ಉದ್ದೇಶವೂ ಅದೇ ಆಗಿದ್ದರಲ್ಲಿ ಆಶ್ಚರ್ಯವಿಲ್ಲ. ತಮ್ಮ ದೇಶದ ಅಲ್ಯುಮಿನಿಯಂ ಮತ್ತು ಸ್ಟೀಲ್ ಉದ್ದಿಮೆಗಳನ್ನು ನಾಶ ಮಾಡಿರುವ ದೇಶಗಳನ್ನು ಹೆಸರಿಸದೇ ದೂಷಿಸುತ್ತಾ ತಾನು ವಿಧಿಸಿರುವ ಈ ಅತ್ಯಧಿಕ ಪ್ರಮಾಣದ ಆಮದು ಸುಂಕವನ್ನು ಸಮರ್ಥಿಸಿಕೊಂಡ ಟ್ರಂಪ್ ಅವರು: ಒಂದು ದೇಶವು ತನಗೆ ಬೇಕಾದ ಅಲುಮಿನಿಯಂ ಮತ್ತು ಸ್ಟೀಲ್ ಅನ್ನು ಉತ್ಪಾದಿಸಿಕೊಳ್ಳಲು ಅಶಕ್ಯವಾಗಿದೆಯೆಂದರೆ ಆ ದೇಶ ತನ್ನ ಬಹುಪಾಲು ಅಸ್ಥಿತ್ವವನ್ನು ಕಳೆದುಕೊಂಡಿದೆಯೆಂದೇ ಅರ್ಥ ಎಂದು ಗುಡುಗಿದರು. 

ಈ ಆಮದು ಸುಂಕದ ಹೆಚ್ಚಳದ ಘೋಷಣೆಯು ಹೊರಬಿದ್ದದ್ದು ಅಮೆರಿಕದ ಅಲ್ಯುಮಿನಿಯಂ ಮತ್ತು ಸ್ಟೀಲ್ ಉದ್ದಿಮೆದಾರರ ಉನ್ನತ ಮಟ್ಟದ ಸಭೆಯಲ್ಲಿ. ಹೀಗಾಗಿ ದೇಶೀಯ ಅಲ್ಯುಮಿನಿಯಂ ಮತ್ತು ಸ್ಟೀಲ್ ಉತ್ಪನ್ನಗಳ ಬೆಲೆ ಮತ್ತು ಲಾಭದ ದರಗಳೇ ಈ ನಿರ್ಧಾರದ ಹಿಂದಿನ ಪ್ರಧಾನ ಒತ್ತಾಸೆಗಳೆಂಬುದು ಅರ್ಥವಾಗುತ್ತದೆ. ಆದರೆ ಈ ಆಮದು ಸುಂಕದ ಹೆಚ್ಚಳವು ವಾಹನ ಯಂತ್ರೋಪಕರಣಗಳು, ವಾಯುಯಾನ, ನಿರ್ಮಾಣ ಸಾಮಗ್ರಿ, ಯಂತ್ರೋತ್ಪಾದನೆ ಹಾಗೂ ಇನ್ನಿತರ ಅಲ್ಯುಮಿನಿಯಂ ಮತ್ತು ಸ್ಟೀಲ್ ಅನ್ನು ಆಧಾರಿಸಿದ ಕೈಗಾರಿಕೆಗಳ ಮೇಲೆ ಮತ್ತು ಅದರಿಂದಾಗಿ ಅವುಗಳ ಅಂತರರಾಷ್ಟ್ರೀಯ ಸ್ಪರ್ಧಾತ್ಮಕತೆಯ ಮೇಲೆ ಏನು ಪರಿಣಾಮ ಬೀರಬಹುದೆಂಬುದು ಪರಿಗಣನೆಯಲ್ಲೇ ಇರಲಿಲ್ಲವೆಂಬುದು ಸ್ಪಷ್ಟ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆಗಳಲ್ಲಿ ಅಪಾರ ಪ್ರಮಾಣದ ಕಡಿತವನ್ನು ಮಾಡಿಸುವುದರಲ್ಲಿ ಯಶಸ್ವಿಯಾಗಿದ್ದ ಟ್ರಂಪ್ ಅವರ ಪ್ರಧಾನ ಆರ್ಥಿಕ ಸಲಹೆಗಾರ ಮತ್ತು ರಾಷ್ಟ್ರೀಯ ಆರ್ಥಿಕ ಪರಿಷತ್ತಿನ ಮುಖ್ಯಸ್ಥರೂ ಆಗಿದ್ದ ಗ್ಯಾರಿ ಕೋಹನ್ ಅವರು ಮಾರ್ಚ್ ೬ರಂದು ರಾಜೀನಾಮೆ ನೀಡಿದರು. ಈ ಹಿಂದೆ  ಗೋಲ್ದ್‌ಮನ್ ಸಾಶೆ ಕಂಪನಿಯ ಮಾಜಿ ಮುಖ್ಯಸ್ಥರಾಗಿದ್ದ ಈ ಕೋಹೆನ್ ಅವರು, ಆಮದು ಸುಂಕ ಹೆಚ್ಚಳದ ಚರ್ಚೆಯಲ್ಲಿ,  ಭಾಗವಹಿಸುತ್ತಾ, ಆಮದು ಸುಂಕ ಹೆಚ್ಚಳವು ಅಮೆರಿಕವನ್ನು ತನ್ನ ಭದ್ರತಾ ಕ್ಷೇತ್ರದ ಮಿತ್ರವೃಂದವಾದ ಜರ್ಮನಿ, ಫ್ರಾನ್ಸ್, ಕೆನಡಾ ಮತ್ತು ದಕ್ಷಿಣ ಕೊರಿಯಾಗಳಿಂದ ದೂರಸರಿಸುಬಹುದೆಂಬ ಆತಂಕವನ್ನು ವ್ಯಕ್ತಪಡಿಸಿದ್ದರು. ಮತ್ತು ಆ ತೀರ್ಮಾನವನ್ನು ವಿರೋಧಿಸಿದ್ದ ಟ್ರಂಪ್ ಸರ್ಕಾರದ ರಾಷ್ಟ್ರೀಯ ಭದ್ರತಾ ತಂಡದ ಸದಸ್ಯರಾದ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಚ್. ಆರ್. ಮ್ಯಾಕ್ ಮಾಸ್ಟರ್, ಗೃಹ ಕಾರ್ಯದರ್ಶಿ ರೆಕ್ಸ್ ಟಿಲ್ಲರ್‌ಸನ್ ಮತ್ತು ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಅವರುಗಳ ಜೊತೆಗೂಡಿದ್ದರು ಎಂದು ವರದಿಗಳು ಹೇಳುತ್ತವೆ.

ಈ ಆಮದು ಸುಂಕ ಹೆಚ್ಚಳಕ್ಕೆ ಐರೋಪ್ಯ ಒಕ್ಕೂಟದಿಂದ ಮತ್ತು ಉತ್ತರ ಅಮೆರಿಕ ಮುಕ್ತ ವಾಣಿಜ್ಯ ಒಪ್ಪಂದ ದ ಸದಸ್ಯ ರಾಷ್ಟ್ರಗಳಾದ ಕೆನಡಾ ಮತ್ತು ಮೆಕ್ಸಿಕೋಗಳಿಂದ ತೀವ್ರ ಪ್ರತಿಕ್ರಿಯೆಗಳು ಬಂದಿವೆ. ಐರೋಪ್ಯ ಒಕ್ಕೂಟದ ವಾಣಿಜ್ಯ ಆಯುಕ್ತರಾದ ಸಿಸಿಲಾ ಮಾಮ್‌ಸ್ಟ್ರೋಮ್ ಅವರು ತಾವು ಈ ಕ್ರಮವನ್ನು ವಿಶ್ವ ವಾಣಿಜ್ಯ ಸಂಸ್ಥೆಯ ವಾಣಿಜ್ಯ ತಗಾದೆ ಪರಿಹಾರ ವ್ಯವ್ವಸ್ಥೆಯಲ್ಲಿ ಪ್ರಶ್ನಿಸುವುದಷ್ಟೇ ಅಲ್ಲದೆ ಪ್ರತಿಕ್ರಮವಾಗಿ ಅಮೆರಿಕಾದ ಹಲವಾರು ಸರಕುಗಳ ಮೇಲೆ ವಿಶ್ವ ವಾಣಿಜ್ಯ ಸಂಸ್ಥೆಯ ಚೌಕಟ್ಟಿನೊಳಗೆ ಪ್ರತೀಕಾರ ರೂಪದ ಆಮದು ಸುಂಕಗಳನ್ನು ಹೇರುವ ಸೂಚನೆಗಳನ್ನು ಕೊಟ್ಟಿದ್ದಾರೆ. ಅವರು ಈ ಕ್ರಮಗಳನ್ನು ವಾಣಿಜ್ಯ ಯುದ್ಧ ಎಂದು ಕರೆಯಲು ಒಪ್ಪಲಿಲ್ಲ. ಆದರೇನು ಐರೋಪ್ಯ ಒಕ್ಕೂಟವೇನಾದರೂ ಹಾಗೆ ಮಾಡಿದಲ್ಲಿ ಅದರ ಕಾರುಗಳ ಮೇಲೆ ಸುಂಕ ಹೆಚ್ಚಿಸುವುದಾಗಿ  ಟ್ರಂಪ್ ತತ್‌ಕ್ಷಣವೇ ಗುಡುಗಿದ್ದಾರೆ. ಐರೋಪ್ಯ ಒಕ್ಕೂಟವು ಪ್ರತೀಕಾರರೂಪದಲ್ಲಿ ಸುಂಕ ಹೆಚ್ಚಿಸಲು ಮಾಡಿರುವ ಅಮೆರಿಕದ ಸರಕುಗಳ ಪಟ್ಟಿಯಲ್ಲಿ ಅಮೆರಿಕಾದ ಹಾರ್ಲಿ ಡೇವಿಡ್‌ಸನ್ ಮೋಟಾರ್ ಸೈಕಲ್ಗಳೂ ಇದ್ದದ್ದೇ ಟ್ರಂಪ್ ಅವರು ಯೂರೋಪಿನ ಕಾರುಗಳ ಮೇಲೆ ನಿರ್ಭಂಧಕಾರಿ ಎನಿಸುವಷ್ಟು ಸುಂಕವನ್ನು ಹೆಚ್ಚಿಸಲು ಕಾರಣವಿರಬೇಕು. ಅಮೆರಿಕಾದ ಅಧ್ಯಕ್ಷರ ಕಾರ್ಯಾಲಯದಲ್ಲಿರುವ ಅಮೆರಿಕವೇ ಪ್ರಥಮ ಎನ್ನುವ ಆರ್ಥಿಕ ರಾಷ್ಟ್ರಿಯವಾದಿಗಳಾದ ರಾಷ್ಟ್ರೀಯ ವಾಣಿಜ್ಯ ಪರಿಷತ್ತಿನ ನಿರ್ದೇಶಕ ಪೀಟರ್ ನವಾರೋ ಮತ್ತು ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರೋಸ್ ಅವರುಗಳು ಆ ವೇಳೆಗಾಗಲೇ ರಾಜೀನಾಮೆ ನೀಡಿದ್ದ ಕೋಹನ್ ಅವರ ಮೇಲೆ ಮೇಲುಗೈ ಸಾಧಿಸಿದ್ದರು. ಆದರೆ ಈ ನೀತಿಯನ್ನು ಹಲವಾರು ರಿಪಬ್ಲಿಕನ್ ಸಂಸದರೇ ವಿರೋಧಿಸಿದರು. ಅದರಲ್ಲಿ ಮುಖ್ಯರಾದವರು ಸಂಸತ್ತಿನ ಸಭಾಧ್ಯಕ್ಷರಾದ ಪಾಲ್ ಡಿ ರಾನ್ ಅವರು.

ಕೆನಡಾ ಮತ್ತು ಮೆಕ್ಸಿಕೋಗಳು ಈ ಆಮದು ಸುಂಕ ಹೆಚ್ಚಳದಿಂದ ತಮಗೆ ವಿನಾಯತಿ ಕೊಡಬೇಕೆಂದು ಕೋರಿವೆ. ಆದರೆ ಉತ್ತರ ಅಮೆರಿಕ ಮುಕ್ತ ವ್ಯಾಪಾg (ನಾಫ್ತಾ) ಒಪ್ಪಂದದ ಮುಂದಿನ ಮಾತುಕತೆಯಲ್ಲಿ ಆ ದೇಶಗಳು ತಮ್ಮ ಎಲ್ಲಾ ಶರತ್ತುಗಳುಗೆ ಒಪ್ಪುವುದಾದರೆ ಮಾತ್ರ ವಿನಾಯತಿಯನ್ನು ಕೊಡಲಾಗುವುದೆಂದು ಆ ದೇಶಗಳ ವಾಣಿಜ್ಯ ಪ್ರತಿನಿಧಿಗಳಿಗೆ ಅಮೆರಿಕವು ಸ್ಪಷ್ಟಪಡಿಸಿಬಿಟ್ಟಿದೆ. ಒಬ್ಬ ವಾಣಿಜ್ಯ ಪ್ರತಿನಿಧಿಯು ಬಣ್ಣಿಸಿದಂತೆ ಅಮೆರಿಕವು ಮೆಕ್ಸಿಕೋ ಮತ್ತು ಕೆನಡಾಗಳ ತಲೆಗೆ ಬಂದೂಕಿಟ್ಟು ತನ್ನ ಶರತ್ತುಗಳನ್ನು ಒಪ್ಪಿಕೊಳ್ಳುವಂತೆ ಮಾಡುತ್ತಿದೆ. ಕುತೂಹಲಕಾರಿಯಾದ ಅಂಶವೇನೆಂದರೆ ಬಿಡಿಬಿಡಿ ದೇಶಗಳಿಗೆ ವಿನಯತಿ ಸಿಗುವುದಿಲ್ಲವಾದರೂ ಅಲ್ಲಿನ ಕಂಪನಿಗಳು ಬೇಕಾದರೆ ವಿನಾಯತಿಯನ್ನು ಕೇಳಬಹುದೆಂದು ವಾಣಿಜ್ಯ ಮತ್ತು ಉತ್ಪಾದಕಾ ನೀತಿಗಳ ಕಾರ್ಯಾಲಯದ ಅಧ್ಯಕ್ಷರೂ ಆಗಿರುವ ನೋವಾರೋ ಅವರು ಹೇಳಿದ್ದಾರೆ.  ಮತ್ತು ಆ ಮೂಲಕ ತೀವ್ರತರವಾದ ವಶೀಲಿಬಾಜಿಗಳಿಗೆ ದಿಡ್ಡಿ ಬಾಗಿಲನ್ನು ತೆರೆದಿಟ್ಟಿದ್ದಾರೆ. 

ಮತ್ತೊಂದು ಕುತೂಹಲಕಾರಿಯಾದ ಅಂಶವೇನೆಂದರೆ ಇಷ್ಟೆಲ್ಲ ಮತಬೇಧ ಮತ್ತು ಭಿನ್ನಾಭಿಪ್ರಾಯಗಳ ನಡುವೆಯೂ ಒಂದು ವಿಷಯದ ಸುತ್ತಾ ಸರ್ವಸಮ್ಮತಿ ಏರ್ಪಡುತ್ತಿರುವಂತೆ ಕಾಣುತ್ತಿದೆ. ಅದೇನೆಂದರೆ ಟ್ರಂಪ್ ಅವರು ತಮ್ಮ ಮೇಲೆ ಈ ರೀತಿ ವಾಣಿಜ್ಯ ಯುದ್ಧವನ್ನು ಮಾಡುವ ಬದಲಿಗೆ ಚೀನಾದ ವಿರುದ್ಧ ವಾಣಿಜ್ಯ ಯುದ್ಧ ಮಾಡಬೇಕು ಮತ್ತು ಚೀನಾದ ಸರ್ವಭಕ್ಷಕ ವಾಣಿಜ್ಯ ವರ್ತನೆಯ ವಿರುದ್ಧ ತನ್ನ ನೇತೃತ್ವದಲ್ಲಿ ಒಂದು ಮೈತ್ರಿಕೂಟವನ್ನೇ ರಚಿಸಬೇಕೆಂಬುದರ ಬಗ್ಗೆ ಎಲ್ಲರ ಸಮ್ಮತಿಯೂ ಇದ್ದಂತಿದೆ. ಚೀನಾದ ವಿರುದ್ಧ ಅಂಥ ವಾಣಿಜ್ಯ ಯುದ್ಧವನ್ನು ಅಮೆರಿಕ ನಡೆಸುವುದೇ ಆದಲ್ಲಿ ಅದರ ಮೈತ್ರಿಕೂಟದಲ್ಲಿ ಕಡ್ಡಾಯವಾಗಿ ಸದಸ್ಯರಾಗುವ ತಮ್ಮಂಥ ದೇಶಗಳ ಮೇಲೇಕೆ ಅಮೆರಿಕ ಈ ವಾಣಿಜ್ಯ ಯುದ್ಧವನ್ನು ನಡೆಸುತ್ತಿದೆ ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿದೆ. ಚೀನಾದ ಸಾಫ್ತ್‌ವೇರ್ ಕಳ್ಳ ಸಾಗಾಣಿಕೆ, ವಾಣಿಜ್ಯ ರಹಸ್ಯಗಳ ಕಳ್ಳತನ, ಮತ್ತು ಅದು ನಡೆಸುತ್ತಲೇ ಬಂದಿರುವ  ನಿರ್ಬಂಧಿತ ಸರಕುಗಳ ವಹಿವಾಟುಗಳು ಅವರೆಲ್ಲರ ದಾಳಿಗಳ ನಿರ್ದಿಷ್ಟ ಗುರಿಗಳಾಗಿವೆ. ಪ್ರಧಾನ ಶತ್ರು ಚೀನಾ ಅಗಿರುವುದರಿಂದ ೧೯೮೮ರ ಸರ್ವವ್ಯಾಪಿ ವಾಣಿಜ್ಯ ಮತ್ತು ಸ್ಪರ್ಧಾತ್ಮಕತೆಯ ಕಾಯಿದೆಯ ೩೦೧ನೇ ಸೆಕ್ಷನ್ ಅನ್ನು ಬಳಸಬೇಕು. ಚೀನಾ ನಡೆಸುತ್ತಿರುವ ತಂತ್ರಜ್ನಾನದ ಕಾನೂನುಬಾಹಿರ ವರ್ಗಾವಣೆ ಮತ್ತು ಬೌದ್ಧಿಕ ಸ್ವಮ್ಯ ಹಕ್ಕುಗಳ ಕಳ್ಳತನಗಳಿಂದ ಅಮೆರಿಕದ ವಾಣಿಜ್ಯ ಹಿತಾಸಕ್ತಿಗಳಿಗಾಗಿರುವ ಹಾನಿಗಾಗಿ ಶಿಕ್ಷಿಸಬೇಕು. ಅಷ್ಟು ಮಾತ್ರವಲ್ಲದೆ ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳಾದ ಪಾದರಕ್ಷೆಗಳು, ಜವಳಿ ಮತ್ತು ವಸ್ತ್ರಗಳು ಹಾಗೂ ಎಲೆಕ್ಟ್ರಾನಿಕ್ ಗ್ರಾಹಕ ಸರಕುಗಳ ಮೇಲೆ ನಿರ್ಬಂಧಕಾರಿ ಮಟ್ಟಕ್ಕೆ ಆಮದು ಸುಂಕವನ್ನು ಹೆಚ್ಚಿಸಬೇಕೆಂಬ ಕೂಗೂ ಸಹ ದೊಡ್ಡ ಮಟ್ಟದಲ್ಲಿ ಎದ್ದಿದೆ.

ಆದರೆ ಚೀನಾ ಇದರಿಂದ ವಿಚಲಿತಗೊಳ್ಳುತ್ತಿಲ್ಲ. ಟ್ರಂಪ್ ಅರ ಈ ಪ್ರಾರಂಭಿಕ ಹಂತದ ಸ್ವ ರಕ್ಷಣಾ ನೀತಿಗಳನ್ನು ವಿಶ್ವ ವಾಣಿಜ್ಯ ಸಂಸ್ಥೆಯ ನಿಯಮಗಳಿಗೊಳಪಟ್ಟ ಬಹುಪಕ್ಷೀಯ ವಾಣಿಜ್ಯ ವ್ಯವಸ್ಥೆಯ ಯೋಜಿತ ಉಲ್ಲಂಘನೆಯ ಭಾಗವಾಗಿಯೇ ಪರಿಗಣಿಸಬೇಕು. ಇದೇ ರೀತಿ ಅಮೆರಿಕವು ೧೯೩೦ರ ಜೂನ್‌ನಲ್ಲಿ ಸ್ಮೂತ್-ಹಾಲೀ ಸುಂಕ ಕಾಯಿದೆಯೊಂದನ್ನು ಜಾರಿಗೆ ತಂಂದಿತ್ತು. ಅದರ ಮೂಲಕ ಅಮೆರಿಕವು ೨೦೦೦೦ ಸರಕುಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕದೊಂದಿಗೆ ವಾಣಿಜ್ಯ ಸಂಬಂಧ ಹೊಂದಿದ್ದ ಎಲ್ಲಾ ಪ್ರಮುಖ ದೇಶಗಳು ಅಮೆರಿಕದ ಸರಕುಗಳ ವಿರುದ್ಧ ತಮ್ಮ ದೇಶದ ಆಮದು ಸುಂಕಗಳನ್ನು ಹೆಚ್ಚಿಸಿದವು. ಇದು ಒಂದು ತೀವ್ರ ವಾಣಿಜ್ಯ ಯುದ್ಧಕ್ಕೂ, ವಿಶ್ವ ವಾಣಿಜ್ಯ ವಹಿವಾಟಿನ ಪ್ರಮಾಣ ಕಡಿತಗೊಳ್ಳುವುದಕ್ಕೂ ಮತ್ತು ಆ ಮೂಲಕ ಜಗತ್ತಿನಲ್ಲಿ  ಒಂದು ಮಹಾನ್ ಆರ್ಥಿಕ ಕುಸಿತ ಉಂಟಾಗುವುದಕ್ಕೂ ಕಾರಣವಾಯಿತು.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top