ISSN (Print) - 0012-9976 | ISSN (Online) - 2349-8846

ಅಂದಿನ ಪೇಶ್ವೆಗಳು ಮತ್ತು ಇಂದಿನ ಪೇಶ್ವೆಗಳು

ಭೀಮಾ-ಕೋರೆಗಾಂವ್‌ನಲ್ಲಿ ದಲಿತರು ಹಿಂದುತ್ವದ ವಿರುದ್ಧವಾಗಿ ಒಂದುಗೂಡುತ್ತಿರುವುದು ಮೇಲ್ಜಾತಿಗಳ ಹಿಂಸಾಚಾರಕ್ಕೆ ಪ್ರಚೋದನೆಯನ್ನು ನೀಡಿದೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

೨೦೧೮ರ ಜನವರಿ ೧ ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಭೀಮ-ಕೋರೆಗಾಂವ್ ಕದದ ದ್ವಿಶತಮಾನೋತ್ಸವದ ನೆನಪಿನಲ್ಲಿ ರಾಜ್ಯದೆಲ್ಲೆಡೆಯಿಂದ  ಬಂದು ಸೇರಿದ್ದ ದಲಿತ ಜನಸಮೂಹದ ಹಲವಾರು ಕಡೆ ಸಂಘಟಿತ ದಾಳಿಗಳು ನಡೆದವು. ಇದಕ್ಕೆ ಪ್ರತಿಯಾಗಿ ಅಕ್ರೋಶಿತರಾದ ದಲಿತ ಸಮುದಾಯವು ಈ ದಾಳಿಯ ವಿರುದ್ಧ ಮಹಾರಾಷ್ಟ್ರದ ಹಲವಾರು ನಗರ ಮತ್ತು ಪಟ್ಟಣಗಳಲ್ಲಿ ದೊಡ್ಡ ಪ್ರತಿಭಟನೆಗಳನ್ನು ನಡೆಸಿದರು. ಪ್ರಾಯಶಃ ದ್ವಿಶತಮಾನೋತ್ಸವದ ನೆನಪಿನ ಹಿನ್ನೆಲೆಯಲ್ಲಿ ಸ್ಪಷ್ಟವಾದ ಹಿಂದೂತ್ವವಾದ ವಿರೋಧಿ ಸಾರವಿದ್ದದ್ದು ಮತ್ತು ಇಂದು ಬಲಪಂಥೀಯ ವಿರೋಧಿ ಪಾಳಯದ ಪ್ರಮುಖ ದಲಿತ ಮತ್ತು ಮುಸ್ಲಿಂ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದು ದಲಿತರ ಮೇಲೆ ನಡೆದ ದಾಳಿಗೆ ಕಾರಣವಾಗಿರಬಹುದು.

 ೧೮೧೮ರಲ್ಲಿ ಭೀಮಾ-ಕೋರೆಗಾಂವ್‌ನಲ್ಲಿ ಬ್ರಿಟಿಷ ವಸಾಹತು ಸೈನ್ಯಕ್ಕೂ ಮತ್ತು ಪೇಶ್ವೆಗಳಿಗೂ ಮಧ್ಯೆ ನಡೆದ ಕದನವನ್ನು ದಲಿತ ಇತಿಹಾಸದ ಮಹತ್ವದ ಸಂದರ್ಭವೆಂದು ಪರಿಗಣಿಸಲಾಗುತ್ತದೆ. ಆ ಕದನದಲ್ಲಿ ಪ್ರಧಾನವಾಗಿ ಮಹರ್ ಪಡೆಗಳ ಹೋರಾಟದಿಂದಾಗಿಯೇ ಬ್ರಿಟಿಷರು ವಿಜಯವನ್ನು ಸಾಧಿಸಿದರು ಮತ್ತು ಅದು ಬ್ರಾಹ್ಮಣೀಯ ಪೇಶ್ವೆ ಆಳ್ವಿಕೆಯ ಅಂತ್ಯಕ್ಕೂ ನಾಂದಿಯನ್ನು ಹಾಡಿತು. ದಮನಕಾರಿ ಶಕ್ತಿಗಳ ವಿರುದ್ಧ ದಲಿತ ಶೌರ್ಯದ ಮತ್ತು ವಿಜಯದ ಸಂಕೇತವಾಗಿ ಸಾಕ್ಷಾತ್ ಅಂಬೇಡ್ಕರ್ ಅವರೇ ಈ ಸಾಂಸ್ಕೃತಿಕ ನೆನಪನ್ನು ಪುನರುದ್ಧರಿಸಿದ್ದರು. ಹೀಗಾಗಿ ಸವರ್ಣೀಯ ಹಿಂದೂ ಸಂಸ್ಕೃತಿಗೆ ಪ್ರತಿಯಾಗಿ ಕಟ್ಟಿಕೊಳ್ಳಲಾಗುತ್ತಿರುವ ಅಂಬೇಡ್ಕರ್‌ವಾದಿ ಪ್ರತಿಸಂಸ್ಕೃತಿಗಳ ಭಾಗವಾಗಿರುವ  ವರ್ಷಾಚರಣೆಗಳು, ಮಹತ್ವದ ದಿನಗಳ ಸುದೀರ್ಘ ಪಟ್ಟಿಯಲ್ಲಿ ಕೋರೆಗಾಂವ್ ಕದನವೂ ಸೇರಿಕೊಂಡಿತು. ದಲಿತ ಅಸ್ಮಿತೆಯ ಪುನರ್ ನಿರ್ಮಾಣದ ಭಾಗವಾಗಿ ಡಿಸೆಂಬರ್-ಜನವರಿಯಲ್ಲಿಘಲವು ಮಹತ್ವದ ಆಚರಣೆಗಳು ನಡೆಯುತ್ತವೆ- ಡಿಸೆಂಬರ್ ೬ ರಂದು ಮುಂಬೈನ ಚೈತ್ಯಭೂಮಿಯಲ್ಲಿ ಪ್ರತಿವರ್ಷ ಅಗಲಿದ ನಾಯಕ ಅಂಬೇಡ್ಕರ್ ಸ್ಮರಣೆಯಲ್ಲಿ ಸಾವಿರಾರು ದಲಿತರು ನೆರೆಯುತ್ತಾರೆ; ಅಂಬೇಡ್ಕರ್ ಮನುಸ್ಮೃತಿಯನ್ನು ಬಹಿರಂಗವಾಗಿ ದಹಿಸಿದ  ಡಿಸೆಂಬರ್ ೨೫- ಅದನ್ನು ದಲಿತ-ಬಹುಜನ ಸ್ತ್ರೀವಾದಿಗಳು ಭಾರತೀಯ ಸ್ತ್ರೀ ವಿಮೋಚನಾ ದಿನವೆಂದೂ ಕೂಡಾ ಆಚರಿಸುತ್ತಾರೆ; ಜನವರಿ ೧ ರಂದು ಭೀಮಾ ಕೋರೆಗಾಂವ ಬಳಿ ಒಟ್ಟುಸೇರಿ ಕೋರೆಗಾಂವ್ ಕದನದ ಸ್ಮರಣೆ; ಸಾವಿತ್ರಿ ಭಾಯಿ ಫುಲೆ ಅವರ ಹುಟ್ಟಿದ ದಿನವಾದ ಜನವರಿ ೩ ನ್ನು ಶಿಕ್ಷಕರ ದಿನವನಾಗಿ ಆಚರಿಸುವುದು; ಮತ್ತು ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಭಾರತವು ಅಳವಡಿಸಿಕೊಂಡ ದಿನವಾದ ಜನವರಿ ೨೬. ಈ ಸರಣಿ ಆಚರಣೆಗಳಲ್ಲಿ ಭಾಗವಹಿಸುವುದರಿಂದಾಗಿ ರಾಜ್ಯದ ದಲಿತ ಸಮುದಾಯ ಅಂಬೇಡ್ಕರ್‌ವಾದಿ ಅಸ್ಮಿತೆ ಮತ್ತು ಪ್ರಜ್ನೆಯನ್ನು ಪಡೆದುಕೊಂಡಿರುವುದಲ್ಲದೆ ಅದನ್ನು ಅಂತರ್ಗತಗೊಳಿಸಿಕೊಂಡಿದ್ದಾರೆ.

ಆದರೆ ಈ ವರ್ಷ ಭೀಮಾ-ಕೋರೆಗಾಂವ್‌ನಲ್ಲಿ ನಡೆದ ಆಚರಣೆಗಳಲ್ಲಿ ಸ್ಪಷ್ಟವಾದ ಹಿಂದೂತ್ವವಾದ ವಿರೋಧಿ ರಾಜಕೀಯ ಭಿತ್ತಿಯಿತ್ತು. ಅಂಬೇಡ್ಕರ್ ಅವರ ಮೊಮ್ಮಗ ಹಾಗೂ ಭಾರಿಪ ಬಹುಜನ್ ಮಹಾಸಂಘರ್ಶ್ ಪಕ್ಷದ ಅಧ್ಯಕ್ಷರೂ ಆದ ಪ್ರಕಾಶ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ದಲಿತ ನಾಗರಿಕ ಸಮಾಜದ ಹಲವಾರು ಸಂಘಟನೆಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳು ಭೀಮ್-ಕೋರೆಗಾಂವ್ ಶೌರ್ಯ ದಿನ್ ಪ್ರೇರಣಾ ಅಭಿಯಾನ್ ಎಂಬ ಹೆಸರಿನಡಿ ಒಟ್ಟುಗೂಡಿ ದ್ವಿಶತಮಾನೋತ್ಸವ ಸಮಾರಂಭದ ಹಿಂದಿನ ದಿನವಾದ ೨೦೧೭ರ ಡಿಸೆಂಬರ್ ೩೧ರಂದು ಒಂದು ಎಲ್ಗಾರ್ ಪರಿಷದ್ (ಜಾಗೃತಿ ಘೋಷಣಾ ಸಮ್ಮೇಳನ)ಅನ್ನು ಆಯೋಜಿಸಿದ್ದವು. ಅದು ನಡೆದ ಜಾಗ ಈ ಹಿಂದೆ ಪೇಶ್ವೆಗಳು ರಾಜ್ಯಭಾರ ಮಾಡುತ್ತಿದ್ದ ಶನವಾರವಾಡ. ಮತ್ತು ಸಭೆಯ ಮುಖ್ಯ ಆಶಯ ನವ ಪೇಶ್ವೆಗಿರಿ (ಅಥವಾ ನವ ಫ್ಯಾಸಿಸಂ) ವಿರುದ್ಧ ಧ್ವನಿ ಎತ್ತೋಣ (ಸ್ಪೀಕ್ ಅಪ್ ಅಗೇನ್‌ಸ್ಟ್ ನಿಯೋ ಪೇಶ್ವಾಯಿ) ಎಂಬುದಾಗಿತ್ತು. ಸಭೆಯ ಸಾರೋದ್ದೇಶವು ಆಡಳಿತರೂಢ ರಾಜಕೀಯ ಶಕ್ತಿಗಳ ವಿರುದ್ಧ ಮತ್ತು ಅವರ ಹಿಂದೂ ಬಲಪಂಥೀಯ ರಾಜಕೀಯದ ವಿರುದ್ಧದ ರಾಜಕೀಯ ದಾಳಿಯಾಗಿತ್ತು. ಸಭೆಯಲ್ಲಿ ಭಾಷಣ ಮಾಡಿದ ಪ್ರಮುಖರೆಂದರೆ ಪ್ರಕಾಶ ಅಂಬೇಡ್ಕರ್, ಜಿಗ್ನೇಶ್ ಮೆವಾನಿ (ದಲಿತ ನಾಯಕ ಮತ್ತು ಇತ್ತೀಚೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಗುಜರಾತ್ ವಿಧಾನಸಭೆಗೆ ಆಯ್ಕೆಯಾದ ಶಾಸಕ), ಚತ್ತೀಸ್‌ಘಡದ ಸಾಮಾಜಿಕ ಕಾರ್ಯಕರ್ತೆ ಸೋನಿ ಸೂರಿ, iಹಾರಾಷ್ಟ್ರದ ಉಲ್ಕಾ ಮಹಾಜನ್, ವಿದ್ಯಾರ್ಥಿ ನಾಯಕ ರೋಹಿತ್ ವೇಮುಲಾ ಅವರ ತಾಯಿ ರಾಧಿಕಾ ವೇಮುಲ ಮತ್ತು ವಿದ್ಯಾರ್ಥಿ ನಾಯಕರಾದ ದೋಂತಾ ಪ್ರಶಾಂತ್ ಮತ್ತು ಉಮರ್ ಖಲೀದ್. ಈ ಎಲ್ಲಾ ಭಾಷಣಕಾರರು ಹಿಂದೂತ್ವ ರಾಜಕೀಯದ ಮತ್ತು ದೇಶವನ್ನು ಆಳುತ್ತಿರುವ ಬಿಜೆಪಿ ಸರ್ಕಾರದ ಕಟು ಟೀಕಾಕಾರರೇ ಆಗಿದ್ದಾರೆ. ಈ ವರ್ಷದ ಆಚರಣೆಯಲ್ಲಿ ಎದ್ದುಕಾಣುತ್ತಿದ್ದ ಈ ಹಿಂದೂತ್ವ ವೀರೋಧೀ ಧ್ವನಿಯೇ ಮೇಲ್ಜಾತಿ ಶಕ್ತಿಗಳನ್ನು ಕೆರಳಿಸಿ ದಾಳಿಗೆ ಪ್ರೇರೇಪಿಸಿದೆ. ದ್ವಿಶತಮಾನೋತ್ಸವದ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದ ವ್ಯಕ್ತಿಗಳು ಮತ್ತು ಗುಂಪುಗಳ ಮೇಲೆ  ಮತ್ತು ಅವರ ಆಸ್ತಿಪಾಸ್ತಿಗಳ ಮೇಲೆ ೨೦೧೭ರ ಡಿಸೆಂಬರ್ ೩೧ರಂದು ಮತ್ತು ೨೦೧೮ರ ಜನವರಿ ೧ರಂದು ದಾಳಿಗಳು ನಡೆದವು. ಒಬ್ಬರು ಸತ್ತು ಹಲವರು ಗಾಯಗೊಂಡು ಹಲವಾರು ಕಾರುಗಳು ತೀವ್ರವಾಗಿ ಹಾನಿಗೊಳಗಾದವು.

ಏಲ್ಗಾರ್ ಸಭೆಯ ಘೋಷಣೆಯನ್ನೇ ಪುಣೆಯ ಬ್ರಾಹ್ಮಣ ಸಮುದಾಯ ವಿರೋಧಿಸಿತ್ತು. ಆ ನಂತರದಲ್ಲಿ ಸಾರ್ವಜನಿಕ ಒತ್ತಡಕ್ಕೆ ಮಣಿದು ಭೀಮ್-ಕೋರೆಗಾಂವ್ ಇತಿಹಾಸದ ಬಗ್ಗೆ ಬಹಿರಂಗ ಚರ್ಚೆಗೆ ಬರಲು ಪರಿಷದ್‌ನ ಸಂಘಟಕರಿಗೆ ಕರೆನೀಡಿದರು. ಇದೇ ಬ್ರಾಹ್ಮಣ ಸಮುದಾಯ ಕೆಲವು ತಿಂಗಳ ಹಿಂದೆ ಇನ್ನೊಂದು ಪ್ರಕರಣದಲ್ಲೂ ಅಪಾರಾವಾದ ಸಾರ್ವಜನಿಕ ಒತ್ತಡಕ್ಕೆ ಗುರಿಯಾಗಿದ್ದರು. ಆಗ ಮೇಧಾ ಖೋಳೆ ಎಂಬ ವಿಜ್ನಾನಿಯು ತನ್ನ ಅಡುಗೆ ಸಹಾಯಕಿಯು ತನ್ನ ಜಾತಿಯನ್ನು ಬಚ್ಚಿಟ್ಟು ತನ್ನ ಮನೆಯ ಪಾವಿತ್ರ್ಯತೆಯನ್ನು ಹಾಳುಮಾಡಿದ್ದಾಳೆಂದು ದೂರುಕೊಡಲು ಮುಂದಾಗಿದ್ದರು. ಬಿಜೆಪಿ ಪಕ್ಷವು ಕಾಂಗೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮೈತ್ರಿಕೂಟದ ಅಬ್ರಾಹ್ಮಣ ಮರಾಠ ರಾಜಕೀಯವನ್ನು ಸೋಲಿಸಿ ರಾಜ್ಯದಲ್ಲಿ ಬ್ರಾಹ್ಮಣ ಮತ್ತು ಇತರ ಹಿಂದುಳಿದ ಜಾತಿಗಳ ಸಾಮಾಜಿಕ ಮೈತ್ರಿಕೂಟವನ್ನು ಅಸ್ಥಿತ್ವಕ್ಕೆ ತಂದಿದೆ. ಶಿವ ಪ್ರತಿಷ್ಟಾನದ ಸಾಂಭಾಜಿ ಭೀಡೆ ಮತ್ತು ಹಿಂದೂ ಏಕತಾ ಮಂಚ್‌ನ ಮಿಳಿಂದ್ ಏಕ್‌ಬೋಟೆ ಇವರುಗಳೆ ಈ ದಾಳಿಗಳ  ಹಿಂದಿನ ಪ್ರಧಾನ ಸಂಚುಕೋರರೆಂದು ಗುರುತಿಸಲಾಗಿದೆ. ಈ ಇಬ್ಬರಿಗೂ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಆಡಳಿತರೂಢ ಪಕ್ಷಗಳ ಕೊತೆ ನಿಕಟ ಸಂಬಂಧವಿದ್ದು ಇಬ್ಬರ ಮೇಲೂ ದಲಿತ ಸಮುದಾಯದ ಮೇಲೆ ದಾಳಿ ನಡೆಸಿದ ಮತ್ತು ದಾಳಿ ಪ್ರಚೋದಿಸಿದ ಹಲವಾರು ಪ್ರಕರಣಗಳು ಈಗಾಗಲೇ ದಾಖಲಾಗಿವೆ.

ದೊಡ್ಡದಾಗಿ ಸ್ಪೋಟಗೊಂಡಿರುವ ಈ ದಲಿತ ಪ್ರತಿರೋಧದಿಂದ ಬಿಜೆಪಿಯ ಪರಿಸ್ಥಿತಿ ಸಂಧಿಗ್ಧಕ್ಕೊಳಗಾಗಿದೆ. ದಲಿತ ಸಮುದಾಯವು ಒಟ್ಟಾರೆ ಮಹಾರಾಷ್ಟ್ರ ಜನಸಂಖ್ಯೆಯ ಕೇವಲ ಶೇ.೧೦ರಷ್ಟು ಮಾತ್ರವೇ ಇದ್ದರೂ ಆ ಸಮುದಾಯ ಆಳವಾದ ರಾಜಕೀಯ ಪ್ರಜ್ನೆಯನ್ನು ಪಡೆದುಕೊಂಡಿದೆ ಮತ್ತು ನಗರ ಹಾಗೂ ಗ್ರಾಮಪ್ರದೇಶಗಳೆರಡರಲ್ಲೂ ಉತ್ತಮವಾದ ಸಂಘಟನಾ ಜಾಲವನ್ನು ಕಟ್ಟಿಕೊಂಡಿದೆ. ಹೀಗಾಗಿ ಗೂಂಡಾ ಪ್ರವೃತ್ತಿಯ ಈ ಹಿಂದೂ ಗುಂಪುಗಳನ್ನು ನಿಯಂತ್ರಿಸಲಾದ ಬಿಜೆಪಿಯ ಅಸಮರ್ಥತೆ ಬಿಜೆಪಿಯನ್ನು ಕಷ್ಟಕ್ಕೆ ಸಿಲುಕಿಸಲಿದೆ. ಕಳೆದೆರಡು ವರ್ಷಗಳಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ದಲಿತವಿರೋಧಿ ಮರಾಠರ ಸಂಘಟಿತ ಪ್ರತಿರೋಧವನ್ನು ಮುಂದುಮಾಡಿ ದಲಿತ ಸಮುದಾಯದ ಬೆಂಬಲವನ್ನು ಗಳಿಸಿಕೊಳ್ಳಲು ಬಿಜೆಪಿ ಯೋಚಿಸಿತ್ತು. ಈ ಬೆಂಬಲವು ಅದರ ವಿಸ್ತೃತ ರಾಜಕೀಯ  ಯೋಜನೆಯಾದ ಹಿಂದೂ ಐಕ್ಯತೆಗೂ ಅತ್ಯಗತ್ಯವಾಗಿದೆ. ಅದೇನೇ ಇದ್ದರೂ ಮಹಾರಾಷ್ಟ್ರದ ರಾಜಕೀಯ  ಕ್ಷೇತ್ರದಲ್ಲಿರುವ ಮರಾಠರ ಮೇಲಾಳ್ವಿಕೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿರುವ ಬ್ರಾಹ್ಮಣರ ಹಿಡಿತದ ನಡುವೆ ರಾಜ್ಯದಲ್ಲಿ ತಮ್ಮ ನಿಜವಾದ ಮತ್ತು ವ್ಯೂಹಾತ್ಮಕ ಮಿತ್ರರಾರು ಎಂಬ ಬಗ್ಗೆ ದೊಡ್ಡ ಆಯ್ಕೆಗಳೇನೂ ಇಲ್ಲದ ಪರಿಸ್ಥಿತಿಯನ್ನು ದಲಿತರು ಎದುರಿಸುತ್ತಿದ್ದಾರೆ. ನಿತಿನ್ ಆಗೆ ಮತ್ತು ಕೋಪಾರ್ಡಿ ಪ್ರಕರಣಗಳ ಫಲಿತಾಂಶದಲ್ಲಿರುವ ತೀವ್ರ ವೈರುಧ್ಯಗಳು ಅಥವಾ ರಜಪೂತರು ಪದ್ಮಾವತಿ ಚಿತ್ರದ ಬಗ್ಗೆ ನಡೆಸಿದ ಪ್ರತಿಭಟನೆಗಳ ಬಗ್ಗೆ ಹಾಗೂ ದಲಿತರು ಭೀಮಾ ಕೋರೆಗಾಂವ್‌ನಲ್ಲಿ ನಡೆಸಿದ ಪ್ರತಿಭಟೆನೆಗಳ ಬಗ್ಗೆ ಸಾರ್ವಜನಿಕರ ಪ್ರತಿಕ್ರಿಯೆಗಳಲ್ಲಿರುವ ವೈರುಧ್ಯಗಳು ನ್ಯಾಯಾಂಗದಿಂದ ಹಿಡಿದು ಬೀದಿಗಳವರೆಗೆ ದಲಿತರು ಎದುರಿಸಬೇಕಿರುವ ನಿರಂತರ ಜಾತಿ ಪೂರ್ವಗ್ರಹಗಳನ್ನು ಎತ್ತಿತೋರಿಸುತ್ತದೆ. ಅದೇನೇ ಇದ್ದರೂ ನವ ಪೇಶ್ವೆಗಳೆಂಬ ನೆಲೆಯಲ್ಲಿ ದಲಿತರು ಹಿಂದೂತ್ವವಾದಿಗಳ ವಿರುದ್ಧ ಯಶಸ್ವಿಯಾಗಿ ಒಂದುಗೂಡುವುದರಿಂದ ಭಾರತದಲ್ಲಿ ಹಿಂದೂ ಬಲಪಂಥೀಯ ರಾಜಕೀಯ ಮತ್ತು ಸಾಂಸ್ಕೃತಿಕ ಅಜೆಂಡಾಗಳು ದೊಡ್ಡ ಹೊಡೆತ ತಿನ್ನುವ ಸಾಧ್ಯತೆಯಂತೂ ಇದ್ದೇ ಇದೆ. 

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top