ಯುದ್ಧಭೂಮಿಯಾಗಿರುವ ವಿಶ್ವವಿದ್ಯಾಲಯಗಳು
ಭಾರತೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರಜಾಪ್ರಭುತ್ವವೆಂದರೆ ಭಿನ್ನಮತವೆಂಬುದನ್ನು ನಮಗೆ ನೆನಪಿಸುತ್ತಿದ್ದಾರೆ.
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
ಪ್ರಜಾತಂತ್ರದ ಮುಂಚೂಣಿ ನಾಯಕರು ನಮ್ಮ ವಿಶ್ವವಿದ್ಯಾಲಯಗಳ ಯುದ್ಧಭೂಮಿಯಲ್ಲಿದ್ದಾರೆ. ವಿಶ್ವವಿದ್ಯಾಲಯಗಳೆಂದರೆ ಯುವ ಮತ್ತು ಕುತೂಹಲದಿಂದ ಕೂಡಿದ ಮನಸ್ಸುಗಳು ವಿವಿಧ ಮತ್ತು ವಿಭಿನ್ನ ವಿಷಯಗಳನ್ನು ಅನ್ವೇಷಿಸುವ, ಅಭಿವ್ಯಕ್ತಿಸುವ ಮತ್ತು ವಾಗ್ವಾದ ಮಾಡುವ ವೈಚಾರಿಕ ಸಂಘರ್ಷದ ತಾಣವೆಂದು ಪರಿಭಾವಿಸುವಂಥವರು, ಆಡಳಿತರೂಢರ ಅಧಿಕೃತ ಸಿದ್ಧಾಂತಗಳಿಗೆ ಪೂರಕವಾಗಿರದ ಎಲ್ಲಾ ಬಗೆಯ ಅಭಿವ್ಯಕಿಗಳನ್ನು ದೇಶದ್ರೋಹವೆಂದು ಪರಿಗಣಿಸಿ ಅದನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ಸೆಣೆಸಾಡುತ್ತಿದ್ದಾರೆ. ಅಂಥಾ ಒಂದು ಸಂಘರ್ಷ ಇತ್ತೀಚೆಗೆ ದೆಹಲಿ ವಿಶ್ವವಿದ್ಯಾಲಯದ ರಾಮ್‌ಜಾಸ್ ಕಾಲೇಜಿನಲ್ಲಿ ನಡೆಯಿತು. ಅಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ)ದಿಂದ ಬೆಂಬಲಿತವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ಪ್ರತಿರೋಧದ ಸಂಸ್ಕೃತಿ ಎಂಬ ವಿಷಯದ ಕುರಿತು ನಡೆಯಬೇಕಿದ್ದ ಒಂದು ವಿಚಾರ ಸಂಕಿರಣವನ್ನು ಬಹಿರಂಗವಾಗಿ ಬೆದರಿಕೆಯನ್ನು ಒಡ್ಡಿ ಮತ್ತು ಗಲಭೆ ಮಾಡಿ ತಡೆಗಟ್ಟಿದರು. ಈ ವಿಚಾರ ಸಂಕಿರಣದಲ್ಲಿ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಡಾಕ್ಟೋರಲ್ ವಿದ್ಯಾರ್ಥಿಯಾಗಿರುವ ಉಮರ್ ಖಲೀದ್ ಅವರನ್ನು ಭಾಷಣಕಾರರನ್ನಾಗಿ ಆಹ್ವಾನಿಸಲಾಗಿತ್ತು. ಮರುದಿನ ಎಬಿವಿಪಿ ಎಬ್ಬಿಸಿದ ಈ ಗಲಭೆಯ ವಿರುದ್ಧ ಪ್ರತಿಭಟನೆ ಮಾಡಲು ನೆರೆದಿದ್ದ ವಿದ್ಯಾರ್ಥಿ ಮತ್ತು ಅಧ್ಯಾಪಕರ ಮೇಲೆ ಎಬಿವಿಪಿ ಗೂಂಡಾಗಳು ಕಲ್ಲು ಮತ್ತು ಬಾಟಲ್‌ಗಳಿಂದ ಹಲ್ಲೆ ಮಾಡಿದರು. ಘಟನೆಯನ್ನು ವರದಿ ಮಾಡಲು ಹೋಗಿದ್ದ ಪತ್ರಕರ್ತರೂ ದಾಳಿಗೊಳಗಾದರು. ಆದರೆ ಭಾರಿ ಸಂಖ್ಯೆಯಲ್ಲಿ ಹಾಜರಿದ್ದ ದೆಹಲಿ ಪೊಲೀಸರು ಮಾತ್ರ ಇದನ್ನು ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳದೆ ಮೌನವಾಗಿ ನಿಂತಿದ್ದರು. ಅಷ್ಟು ಮಾತ್ರವಲ್ಲ, ಎಬಿವಿಪಿ ಸದಸ್ಯರ ಮೇಲೆ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರು. ಅಲ್ಲದೆ ದೂರು ದಾಖಲಿಸಿಕೊಳ್ಳಬೇಕೆಂದು ಮಾರಿಸ್ ನಗರ್ ಪೊಲೀಸ್ ಠಾಣೆಯೆದುರು ಆಗ್ರಹಿಸುತ್ತಿದ್ದ ಗುಂಪಿನ ಮೇಲೆ ಲಾಠಿ ಚಾರ್ಜ್ ಕೂಡಾ ನಡೆಸಿದರು.
ಈ ಘಟನೆಯು ಬಿಡಿಯಾಗಿ ನಡೆದದ್ದೇನಲ್ಲ. ಅದು ತನ್ನ ಸೈದ್ಧಾಂತಿಕ ಅಜೆಂಡಾಗಳನ್ನು ಒಪ್ಪಿಕೊಳ್ಳದ ಎಲ್ಲಾ ಧ್ವನಿಗಳನ್ನು ಸುಮ್ಮನಾಗಿಸಲು ಆಳುವ ಸರ್ಕಾರವು ಅನುಸರಿಸುತ್ತಿರುವ ಸ್ಪಷ್ಟ ಮಾದರಿಯ ಭಾಗವೇ ಆಗಿದೆ. ಅಲ್ಲದೆ, ವಾಗ್ವಾದ, ಚರ್ಚೆ ಅಥವಾ ತರ್ಕಗಳ ಬದಲಿಗೆ ಬೆದರಿಕೆ, ಕಿರುಕುಳ ಮತ್ತು ಹಿಂಸೆ ಹಾಗೂ ಪ್ರಭುತ್ವದ ಯಂತ್ರಾಂಗಗಳ ಸಹಕಾರದ ಮೂಲಕ ಉನ್ನತ ವಿದ್ಯಾ ಸಂಸ್ಥೆಗಳನ್ನು ವಶಕ್ಕೆ ಪಡೆಯುವ ಮತ್ತು ಬೌದ್ಧಿಕ ಸ್ಥಳಾವಕಾಶಗಳನ್ನು ಬುಡಮೇಲು ಮಾಡುವ ಸಂಘಪರಿವಾರದ ದೀರ್ಘಕಾಲೀನ ವ್ಯೂಹತಂತ್ರದ ಭಾಗವೂ ಆಗಿದೆ. ಈ ವರ್ಷದ ಮೊದಲಲ್ಲಿ ಜೆಎನ್‌ಯು ವಿಶ್ವವಿದ್ಯಾಲಯದ ಕಾಂಪಾರೇಟೀವ್ ಗವರ್ನೆನ್ಸ್ ಮತ್ತು ಪೊಲಿಟಿಕಲ್ ಥಿಯರಿ ವಿಭಾಗದ ಪ್ರೊಫೆಸರ್ ಆಗಿರುವ ನಿವೇದಿತಾ ಮೆನನ್ ಅವರು ಕ್ಯಾಂಪಸ್ಸಿನಲ್ಲಿ ಮಾಡಿದ ಭಾಷಣವೊಂದರಲ್ಲಿ ಕಾಶ್ಮೀರದ ಬಗ್ಗೆ ಮಾಡಲೆನ್ನಲಾದ ಟಿಪ್ಪಣಿಯ ವಿರುದ್ಧ ಜೋಧಪುರದ ಜೈ ನಾರಾಯಣ ವ್ಯಾಸ್ ವಿಶ್ವವಿದ್ಯಾಲಯ (ಜೆಎನ್‌ವಿಎಸ್)ದ ರಿಜಿಸ್ಟ್ರಾರ್ ಅವರು ಪೊಲೀಸ್ ದೂರೊಂದನ್ನು ದಾಖಲಿಸಿದಾಗಲೂ ಇದೇ ಬಗೆಯ ಪರಿಸ್ಥಿತಿ ಉದ್ಭವವಾಗಿತ್ತು. ಎಂದಿನಂತೆ ಮೆನನ್ ಅವರ ಭಾಷಣವು ದೇಶದ್ರೋಹವೆಂದು ಎಬಿವಿಪಿ ಸದಸ್ಯರು ಗಲಭೆ ಎಬ್ಬಿಸಿದರು. ಇದು ಅಂತಿಮವಾಗಿ ಆ ಕಾರ್ಯಕ್ರಮದ ಪ್ರಮುಖ ಸಂಘಟಕರಾಗಿದ್ದ ಜೆಎನ್‌ವಿಎಸ್ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆದ ರಾಜಶ್ರೀ ರನಾವತ್ ಅವರ ಅಮಾನತ್ತಿಗೂ ಕಾರಣವಾಯಿತು. ೨೦೧೬ರ ಸೆಪ್ಟೆಂಬರನಲ್ಲಿ ಮಹಾಶ್ವೇತಾ ದೇವಿಯವರ ದೋಪ್ದಿ ಕಥೆಯ ರಂಗ ರೂಪಾಂತರವನ್ನು ಪ್ರದರ್ಶಿಸಿದ್ದಕ್ಕಾಗಿ ಹರಿಯಾಣದ ಕೇಂದ್ರ ವಿಶ್ವವಿದ್ಯಾಲಯದ ಅಧ್ಯಾಪಕರಾದ ಸ್ನೇಹ್‌ಸತ ಮನಯ್ ಮತ್ತು ಮನೋಜ್ ಕುಮಾರ್ ಅವರನ್ನು ಅಮಾನತ್ತುಗೊಳಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂಬ ಹುಯಿಲನ್ನು ಎಬ್ಬಿಸಲಾಗಿತ್ತು. ಈ ಕೃತಿಯನ್ನು ಬರೆದ ಮಹಾಶ್ವೇತ ದೇವಿಯವರು ಇತ್ತೀಚಿಗೆ ನಿಧನರಾದ ಬಳಿಕ ಅವರ ಜೀವಮಾನ ಸಾಧನೆಗೆ ದೇಶಾದ್ಯಂತ ಗೌರವ ಸಮರ್ಪಣೆಗಳು ನಡೆಯುತ್ತಿದೆ. ಆದರೆ ಎಬಿವಿಪಿಯು ಮಾತ್ರ ದೋಪ್ದಿಯು ಸೈನ್ಯವನ್ನು ಕೀಳಾಗಿ ತೋರಿಸುತ್ತದಾದ್ದರಿಂದ ಅದು ದೇಶದ್ರೋಹೀ ನಾಟಕವೆಂದು ಘೋಷಿಸಿದೆ.
ಕಳೆದೊಂದು ವರ್ಷದಿಂದ ರಣರಂಗವಾಗಿ ಪರಿವರ್ತನೆಗೊಂಡಿರುವ ಹೈದರಾಬಾದ್ ವಿಶ್ವವಿದ್ಯಾಲಯ ಮತ್ತು ಜೆಎನ್‌ಯು ಗಳ ಸಾಲಿಗೆ ಈ ಎಲ್ಲಾ ವಿಶ್ವವಿದ್ಯಾಲಯಗಳು ಸೇರಿಕೊಂಡಿವೆ. ಜೆಎನ್‌ಯು ನಲ್ಲಿ ೨೦೧೬ರ ಫೆಬ್ರವರಿ ೯ರಂದು ವಿದ್ಯಾರ್ಥಿಗಳ ತಂಡವೊಂದು ಅಫ್ಜಲ್‌ಗುರುವನ್ನು ನೇಣಿಗೇರಿಸಿದ ಸಂದರ್ಭz ನೆನಪಿನಲ್ಲಿ ಆಚರಿಸಿದ ವಾರ್ಷಿಕ ಸ್ಮರಣಾಚರಣೆಯು ದೇಶಾದ್ಯಂತ ದೇಶಭಕ್ತ ಮತ್ತು ದೇಶದ್ರೋಹಿ ಗಳೆಂಬ ಪರಸ್ಪರ ವಿರೋಧಿ ಗುಂಪುಗಳನ್ನು ಹುಟ್ಟುಹಾಕಿತು. ಆದರೆ ಅದಕ್ಕೆ ಮೊದಲೇ, ೨೦೧೫ರಲ್ಲಿ, ದೆಹಲಿ ವಿಶ್ವವಿದ್ಯಾಲಯದ ಕಿಶೋರಿ ಮಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಮುಜಫ್ಫರ್‌ನಗರ್ ಬಾಕಿ ಹೈ ಎಂಬ ಚಿತ್ರ ಪ್ರದರ್ಶನ ನಡೆಯುತ್ತಿದ್ದ ಸ್ಥಳದಲ್ಲಿ ಎಬಿವಿಪಿ ಗುಂಡಾಗಳು ಗಲಭೆ ಎಬ್ಬಿಸಿದ್ದಲ್ಲದೆ ಚಿತ್ರವು ಪ್ರದರ್ಶನವಾಗದಂತೆ ತಡೆದಿದ್ದರು. ಇಂದಿನಂತೆ ಆಗಲೂ ಸಹ ಅವರು ಚಿತ್ರವನ್ನು ಧರ್ಮ ವಿರೋಧಿ ಎಂದು ಕರೆದಿದ್ದಲ್ಲದೆ ಚಿತ್ರದ ಆಶಯಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಎಲ್ಲಾ ಘಟನೆಗಳು ಬಿಡಿಬಿಡಿಯಾಗಿಯೂ ಮತ್ತು ಇಡಿಯಾಗಿಯೂ ಒಂದನ್ನಂತೂ ಹೇಳುತ್ತಿದೆ. ನರೇಂದ್ರ ಮೋದಿ ಸರ್ಕಾರವು ೨೦೧೪ರಲ್ಲಿ ಅಧಿಕಾರಕ್ಕೆ ಬಂದ ಮರುಗಳಿಗೆಯಿಂದ ಉನ್ನತ ವಿದ್ಯಾ ಸಂಸ್ಥೆಗಳನ್ನು ಒಂದೇ ವಿಚಾರಧಾರೆಯ ಪ್ರಭಾವದಡಿಗೆ ತರಲು ಏನನ್ನು ಬೇಕಾದರೂ ಮಾಡುತ್ತಿದೆ. ಈ ಗುರಿಯನ್ನು ಸಾಧಿಸಲು ಭಿನ್ನ ಭಿನ್ನ ಮಾರ್ಗಗಳನ್ನು ಅನುಸರಿಸಲಾಗಿದೆ. ಅದು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್, ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ನವ ದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಗಳಂಥ ಸಂಸ್ಥೆಗಳಿಗೆ ಆರೆಸ್ಸೆಸ್ ಗೆ ಆಪ್ತರಾಗಿರುವವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡುವುದಿರಬಹುದು. ಅಥವಾ ಹೈದರಾಬಾದ್ ವಿಶ್ವವಿದ್ಯಾಲಯ ಮತ್ತು ಜೆಎನ್‌ಯು ವಿಶ್ವವಿದ್ಯಾಲಯಗಳಿಗೆ ಎಬಿವಿಪಿ ಮತ್ತು ಕೇಂದ್ರ ಸರ್ಕಾರಗಳ ಕಣ್ಸನ್ನೆಗೆ ತಕ್ಕಂತೆ ಕುಣಿಯುವ ಉಪಕುಲಪತಿಗಳನ್ನು ನೇಮಕ ಮಾಡುವುದಿರಬಹುದು. ಮಾರ್ಗವೇನೇ ಇದ್ದರೂ ಒಟ್ಟಿನಲ್ಲಿ ವಿಶ್ವವಿದ್ಯಾಲಯಗಳಲ್ಲಿ ಭಿನ್ನಮತ ಅಥವಾ ಪ್ರಶ್ನೆ ಮಾಡುವ ಧ್ವನಿಗಳಿಗೆ ವಿರುದ್ಧವಾಗಿರುವ ಪರಿಸರವನ್ನು ನಿರ್ಮಿಸಲೆಂದೇ ವಿಶ್ವವಿದ್ಯಾಲಯಗಳ ಮತ್ತು ಉನ್ನತ ವಿದ್ಯಾ ಸಂಸ್ಥೆಗಳ ಬೌದ್ಧಿಕ ಸ್ಥಾನಮಾನಗಳೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆ. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಒಂದೋ ಅಧಿಕಾರಸ್ಥರೊಂದಿಗೆ ಸಹಕರಿಸಬೇಕು ಇಲ್ಲವೇ ಅಮಾನತ್ತನ್ನು ಎದುರಿಸಬೇಕು ಎಂಬಂಥ ವಾತಾರಣವನ್ನು ಅನುದಿನವೂ ಸೃಷ್ಟಿಸಲಾಗುತ್ತಿದೆ. ಸರ್ಕಾರ ಮತ್ತು ಅದರ ಮಂತ್ರಿಗಳು ನಿರಂತರವಾಗಿ ದೇಶದ್ರೋಹದ ಮಾತುಗಳನ್ನು ಪದೇಪದೇ ಹೇಳುವ ಮೂಲಕ ಅವರ ವಿದ್ಯಾರ್ಥಿ ಘಟಕವು ವಿಶ್ವವಿದ್ಯಾಲಯಗಳಲ್ಲಿ ಮಾಡುವ ರಂಪಾಟಕ್ಕೆ ಮತ್ತು ತೋಳುಬಲದ ಬಳಕೆಗೆ ಮಾನ್ಯತೆಯನ್ನು ಒದಗಿಸಿದೆ. ಅವರು ನೀಡುತ್ತಿರುವ ಸಂದೇಶ ಸ್ಪಷ್ಟವಾಗಿದೆ: ಆಳುವ ಸರ್ಕಾರಕ್ಕೆ ವಿರುದ್ಧವಾಗಿರುವುದು ದೇಶಕ್ಕೆ ವಿರುದ್ಧವಾಗಿರುವುದಕ್ಕೆ ಸಮ. ಈ ಹಿಂಸೆಯ ಮತ್ತು ಬೆದರಿಕೆಯ ಸಂಸ್ಕೃತಿಯು ಸ್ವತಂತ್ರ ಚಿಂತನೆಗೂ ಮತ್ತು ಆಳುವ ಸರ್ಕಾರದ ಬಹುಸಂಖ್ಯಾತಪರ ಸಿದ್ಧಾಂತಕ್ಕೆ ವಿರುದ್ಧವಿರುವರಲ್ಲೂ ಭೀತಿ ಹುಟ್ಟಿಸುತ್ತಿದೆ.
ಈ ಬೆದರಿಕೆಯ ತಂತದಲ್ಲಿ ಆರೆಸೆಸ್-ಬಿಜೆಪಿಗಳು ಪರಿಣಿತರೇ ಆಗಿದ್ದರೂ ಈ ತಂತ್ರ ಕೇವಲ ಅವರ ಸ್ವತ್ತಾಗಿಯೇನೂ ಉಳಿದಿಲ್ಲ. ಉದಾಹರಣೆಗೆ ಅವರ ವಿದ್ಯಾರ್ಥಿ ಘಟಕಗಳು ದೆಹಲಿ, ರಾಜಸ್ಥಾನ, ಹರ್ಯಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಕಿಡಿಗೇಡಿತನ ಮಾಡಿದರೆ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯು ಇತ್ತೀಚೆಗೆ ತನ್ನ ಕ್ಯಾಂಪಸ್ಸಿನಲ್ಲಿ ನಡೆಯಬೇಕಿದ್ದ ವಿದ್ಯಾರ್ಥಿ ಕಾರ್ಯಕರ್ತರ ಸಭೆಯೊಂದನ್ನು ರದ್ದುಗೊಳಿಸಿದೆ. ಮಾತ್ರವಲ್ಲ ಫೇಸ್‌ಬುಕ್‌ನ ಪೋಸ್ಟ್ ಒಂದರಲ್ಲಿ ಜೆಎನ್‌ಯು ವಿನ ವಿದ್ಯಾರ್ಥಿನಿ ಕಾರ್ಯಕರ್ತೆಯಾದ ಶೈಲಾ ರಷೀದ್ ಅವರು ಪ್ರವಾದಿ ಮೊಹಮದರನ್ನು ಅವಹೇಳನೆ ಮಾಡಿದ್ದಾರೆಂದು ಪೊಲೀಸ್ ದೂರನ್ನು ಸಹ ನೀಡಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಹೆಚ್ಚುತ್ತಿರುವ ಈ ಬಗೆಯ ಘರ್ಷಣೆಗಳು ಮತ್ತು ಕುಗ್ಗುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯಗಳು ಯಾವ ಸಂಕುಚಿತ ಮನೋಧರ್ಮಕ್ಕೆ ವ್ಯತಿರಿಕ್ತವಾದ ಆಶಯಗಳನ್ನು ವಿಶ್ವವಿದ್ಯಾಲಯಗಳು ಪ್ರತಿನಿಧಿಸುತ್ತವೋ ಅಂಥಾ ಸಂಕುಚಿತ ಮನೋಧರ್ಮವೇ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಾಗುತ್ತಿರುವ ವಿಷಾದ ಗಾಥೆಯನ್ನು ಹೇಳುತ್ತಿವೆ. ವಿಶ್ವವಿದ್ಯಾಲಯಗಳು ವಿಭಿನ್ನ ಚಿಂತನಗೆಳನ್ನು ಚರ್ಚಿಸುವ, ಹೊಸ ಚಿಂತನೆಗಳನ್ನು ರೂಪಿಸಿಕೊಳ್ಳುವ ಮತ್ತು ಈಗಾಗಲೇ ಸಮ್ಮತವಾಗಲ್ಪಟ್ಟ ತಿಳವಳಿಕೆಗಳ ಕ್ಷಿತಿಜಗಳಿಗೆ ಸವಾಲೆಸೆಯುವ ತಾಣಗಳಾಗಿವೆ. ಪ್ರಭುತ್ವದ ಸಂಸ್ಥೆಗಳು ಅಥವಾ ಅವರ ಕೃಪಾಪೋಷಿತ ದೊಂಬಿ ಗುಂಪುಗಳು ಅಂಥಾ ತಾಣಗಳನ್ನು ಧ್ವಂಸಗೊಳಿಸಲು ಯತ್ನಿಸುತ್ತಿರುವಾಗ ನಮ್ಮ ಪ್ರಜಾಪ್ರಭುತ್ವದ ಮೂಲತತ್ವವಾದ ಪ್ರಜಾತಾಂತ್ರಿಕ ಭಿನ್ನಮತದ ಅಳಿವನ್ನು ತಡೆಗಟ್ಟಲು ಶ್ರಮಿಸುತ್ತಿರುವವರ ಜೊತೆಗೆ ನಾವು ನಿಲ್ಲಬೇಕಿದೆ.