ISSN (Print) - 0012-9976 | ISSN (Online) - 2349-8846

ಮಾಡು ಇಲ್ಲವೇ ಮಡಿ

ಉತ್ತರಪ್ರದೇಶದ ಚುನಾವಣಾ ಫಲಿತಾಂಶವು ಭಾರತದ ರಾಜಕೀಯದ ರೂಪುರೇಷೆಯನ್ನು ನಿರ್ಧರಿಸಲಿದೆ

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

ಉತ್ತರಪ್ರದೇಶದ ಶಾಸನಾ ಸಭಾ ಚುನಾವಣೆಗಳ ಫಲಿತಾಂಶವು ಭಾರತದ ರಾಜಕಾರಣದ ಸದ್ಯಭವಿಷ್ಯದ ಮೇಲೆ ನಿರ್ಣಾಯಕ ಪ್ರಭಾವನ್ನು ಬೀರಲಿದೆ ಎಂಬುದು ಎಲ್ಲರೂ ಬಲ್ಲ ಸಂಗತಿಯೇ ಆಗಿಬಿಟ್ಟಿದೆ. ಪ್ರತಿ ಆರು ಭಾರತೀಯರಲ್ಲಿ ಒಬ್ಬರು ಉತ್ತರ ಪ್ರದೇಶದಲ್ಲಿ ವಾಸಿಸುತ್ತಾರೆ ಎಂಬುದೂ ಮತ್ತು ಅದು ಪ್ರತ್ಯೇಕ ರಾಷ್ಟ್ರವಾಗಿದ್ದಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಐದನೇ ರಾಷ್ಟ್ರವಾಗಿರುತ್ತಿತ್ತೆಂಬುದೇ ಅದರ ಮಹತ್ವವನ್ನು ಹೇಳುತ್ತದೆ. ಆದರೆ ಇತಿಹಾಸದಲ್ಲಿ ಒಮ್ಮೊಮ್ಮೆ ಉತ್ತರ ಪ್ರದೇಶದ ಚುನಾವಣೆಗಳಿಗೆ ಅದರ ಬೃಹತ್ ಗಾತ್ರಕ್ಕೂ ಮಿಗಿಲಾದ ಮಹತ್ವವಿರುವ ಗಳಿಗೆಯು ಬರುತ್ತದೆ. ಈ ಚುನಾವಣೆಯ ನಡೆಯುತ್ತಿರುವ ಸಂದರ್ಭ ಮತ್ತು ಸಮಯದ ಕಾರಣದಿಂದ ಅಂಥಾ ಗಳಿಗೆ ಎದುರಾಗಿದೆ.

ಮೊದಲಿಗೆ, ಇವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ೨೦೧೬ರ ನವಂಬರ್ ೮ರಂದು ಅಧಿಕ ಮೌಲ್ಯದ ನೋಟುಗಳನ್ನು ರದ್ದುಗೊಳಿಸುವ ಮೂಲಕ ದೇಶದಲ್ಲಿ ಚಲಾವಣೆಯಲ್ಲಿದ್ದ ಶೇ.೮೬ರಷ್ಟು ನಗದನ್ನು ಹಿಂಪಡೆದು ಇಡೀ ದೇಶಕ್ಕೆ ಶಾಕ್ ನೀಡಿದ ನಂತರದಲ್ಲಿ ನಡೆಯುತ್ತಿರುವ ಮೊದಲ ಶಾಸನಾಸಭಾ ಚುನಾವಣೆಗಳಾಗಿವೆ.. ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಉತ್ತರ ಪ್ರದೇಶವು ಅತ್ಯಂತ ದೊಡ್ಡ ರಾಜ್ಯವಾಗಿರುವುದರಿಂದ ಇಲ್ಲಿನ ಫಲಿತಾಂಶವನ್ನು ಪೂರ್ಣವಾಗಿಯಲ್ಲದಿದ್ದರೂ ಪಾಕ್ಷಿಕವಾಗಿ ನೋಟು ನಿಷೇಧದ ಬಗೆಗಿನ ಜನಾಭಿಪ್ರಾಯವೆಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಭಾರತೀಯ ಜನತಾ ಪಕ್ಷವು (ಬಿಜೆಪಿ) ಈ ಚುನಾವಣೆಯಲ್ಲಿ ಗೆದ್ದರೆ ಅಥವಾ ಅತಿ ದೊಡ್ಡ ಪಕ್ಷವಾಗಿ ಚುನಾಯಿತವಾದರೂ ಅದನ್ನು ಮೋದಿಯ ಪರವಾದ ಜನಾಭಿಪ್ರಾಯವೆಂದೇ ನೋಡಲಾಗುತ್ತದೆ. ಹೀಗಾದಲ್ಲಿ ಅದು ನರೇಂದ್ರಮೋದಿಯವರು ಭಾರತೀಯ ಜನತಾ ಪಕ್ಷದಲ್ಲಿರುವ ಅತ್ಯಂತ ವರ್ಚಸ್ವೀ ರಾಜಕಾರಣಿಯೆಂದು ಮಾತ್ರವಲ್ಲದೆ ಭಾರತದ ರಾಜಕೀಯದ ನಾಡಿಮಿಡಿತವನ್ನು ಬಲ್ಲ ಅತ್ಯಂತ ಚಾಣಾಕ್ಷ ರಾಜಕಾರಣಿಯೆಂಬುದಕ್ಕೆ ಮತ್ತೊಂದು ಪುರಾವೆಯೆಂದು ಭಾವಿಸಲ್ಪಡುತ್ತದೆ. ಪಕ್ಷದ ಅಧ್ಯಕ್ಷ ಮತ್ತು ಮೋದಿಯ ಆಪ್ತ ಅಮಿತ್ ಶಾಗೆ ಕೂಡ ಇದರಿಂದ ಮೋದಿಯಷ್ಟಲ್ಲವಾದರೂ ಲಾಭವಂತೂ ಆಗಿಯೇ ಆಗುತ್ತದೆ. ಜನರಿಂದ ದಕ್ಕುವ ಅಂಥಾ ಅನುಮೋದನೆಯು ವಿರೋಧಿಗಳ ಬಗ್ಗೆ ಮೋದಿ ಮತ್ತಷ್ಟು ಕಠಿಣವಾದ ಮತ್ತು  ಸಂಘರ್ಷಾತ್ಮಕ ನಿಲುವನ್ನು ತಾಳುವಂತೆ ಮಾಡಬಹುದು. ಅದು ಈಗಾಗಲೇ ಅಸಹಾಯಕರಾಗಿರುವ ವಿರೋಧ ಪಕ್ಷಗಳನ್ನು ಮತ್ತಷ್ಟು ಅಸಹಾಯಕಗೊಳಿಸಬಹುದು.

ಒಂದು ವೇಳೆ ಬಿಜೆಪಿಯು ಎರಡನೇ ಅಥವಾ ಮೂರನೇ ಸ್ಥಾನಕ್ಕಿಳಿದಲ್ಲಿ ಮೋದಿ ಮತ್ತು ಶಾ ಇಬ್ಬರ ವರ್ಚಸ್ಸಿಗೂ ದೊಡ್ಡ ಪೆಟ್ಟು ಬೀಳುತ್ತದೆ. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ೪೦೩ ಅಸೆಂಬ್ಲಿ ಕ್ಷೇತ್ರಗಳಲ್ಲಿ ೩೨೮ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಹೀಗಾಗಿ ಅದಕ್ಕೆ ಹೋಲಿಸಿದಲ್ಲಿ ಎರಡನೇ ಅಥವಾ ಮೂರನೇ ಸ್ಥಾನಕ್ಕಿಳಿಯುವಂಥಾ ಫಲಿತಾಂಶವನ್ನು ಪಕ್ಷಕ್ಕಾದ ಹಿನ್ನೆಡೆಯೆಂದೇ ಭಾವಿಸಲಾಗುವುದು. ಪ್ರಾಯಶಃ, ಅಂಥಾ ಸಂದರ್ಭದಲ್ಲಿ ಪಕ್ಷದೊಳಗೆ ಮೂಲೆಗುಂಪಾಗಿರುವ ಮೋದಿ ವಿರೋಧಿಗಳು ತಮ್ಮ ಹತಾಶೆಯ ಸ್ಥಿತಿಯಿಂದ ಹೊರಬಂದು,  ನೋಟು ನಿಷೇಧದಂಥ ದುಡುಕಿನ ರಾಜಕೀಯ ಜೂಜಾಟಗಳಲ್ಲಿ ತೊಡಗಿರುವ ವ್ಯಕ್ತಿಯ ಕೈಯಲ್ಲಿ ಬಿಜೆಪಿಯ ಭವಿಷ್ಯ ಎಷ್ಟರಮಟ್ಟಿಗೆ ಸುರಕ್ಷಿತವಾಗಿರುತ್ತದೆಂಬ ಪ್ರಶ್ನೆಗಳನ್ನೆತ್ತಬಹುದು. ಅಂಥದೇ ಪ್ರಶ್ನೆಗಳು ಮೋದಿಯ ಅವಳಿಯಾಗಿರುವ ಶಾ ಅವರ ಮೇಲೂ ತೂರಿಬರಬಹುದು. ಆದರೆ ಉತ್ತರಪ್ರದೇಶದಲ್ಲಿ ಬಿಜೆಪಿಯ  ಚುನಾವಣಾ ಪರಾಜಯವು ಆ ಪಕ್ಷದಾಚೆಗೂ ಪರಿಣಾಮ ಬೀರುತ್ತದೆ.  ಮೊದಲನೆಯದಾಗಿ, ಬಿಜೆಪಿಯ ವಿರೋಧಿ ಬಣಗಳಾದ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಕೂಟ ಅಥವಾ ಬಿಎಸ್‌ಪಿ ಇವುಗಳಲ್ಲಿ ಯಾವುದು ಉತ್ತರ ಪ್ರದೇಶದಲ್ಲಿ ಮೊದಲ ಸ್ಥಾನ ಪಡೆದುಕೊಂಡರೂ ಅವುಗಳಿಗೆ ಉತ್ತರಪ್ರದೇಶದ ರಾಜಕಾರಣದಲ್ಲಿ ಹೆಚ್ಚಿನ ಕಸುವು ದೊರೆಯುವುದು ಮಾತ್ರವಲ್ಲದೆ, ಅವುಗಳ ರಾಷ್ಟ್ರೀಯ ಆಶೋತ್ತರಗಳಿಗೂ ಈ ಫಲಿತಾಂಶವು ಚಿಮ್ಮುಹಲಗೆಯಾಗಲಿದೆ. ೨೦೧೫ರ ಅಕ್ಟೋಬರ್‌ನ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಗೆಲುವನ್ನು ಸಾಧಿಸಿದ ನಂತರದಲ್ಲಿ,  ಅವರು ೨೦೧೯ರಲ್ಲಿ ಮೋದಿಯನ್ನು ಸೋಲಿಸಲು ವಿರೋಧ ಪಕ್ಷಗಳ ಸರ್ವಸಮ್ಮತಿಯಾದ ಅಭ್ಯರ್ಥಿಯಾಗಬಹುದೆಂಬ ಮಾತುಗಳು ಹರಿದಾಡುತ್ತಿದ್ದವು. ಇವತ್ತಿನ ಸಂದರ್ಭದಲ್ಲಿ ಬಿಜೆಪಿಯನ್ನು ಉತ್ತರಪ್ರದೇಶದಲ್ಲಿ ಸೋಲಿಸುವುದು ಅಂಥಾ ಒಂದು ಪಾತ್ರಕ್ಕೆ ಅಖಿಲೇಶ್ ಅಥವಾ ಮಾಯಾವತಿಯವರನ್ನು ಹುರಿಯಾಳುಗಳನ್ನಾಗಿಸುತ್ತದೆ.

ಅಂಥಾ ಚಿತ್ರಣವು ಬಿಹಾರ ರೀತಿಯ ಮಹಾನ್ ಒಕ್ಕೂಟಗಳು ಮಾತ್ರ ಬಿಜೆಪಿಯನ್ನು ಸೋಲಿಸಬಲ್ಲ ಪರ್ಯಾಯವನ್ನು ಒದಗಿಸಬಲ್ಲದೆಂಬ ತಿಳವಳಿಕೆಯನ್ನೂ ಪ್ರಶ್ನಿಸುವಂತೆ ಮಾಡುತ್ತದೆ. ಒಂದು ವೇಳೆ ಸಮಾಜವಾದಿ ಪಕ್ಷವು ಗೆದ್ದರೆ ಅಥವಾ ಮೊದಲನೇ ಸ್ಥಾನಕ್ಕೆ ಬಂದುನಿಂತರೂ ಅದು ಯಾವುದೇ ಮಹಾನ್ ಒಕ್ಕೂಟದ ಬೆಂಬಲವಿಲ್ಲದೆ, ಉತ್ತರಪ್ರದೇಶದಲ್ಲಿ ರಾಜಕಾರಣದ ರಂಗಮಂಚದಲ್ಲಿ ಪೋಷಕ ಪಾತ್ರವನ್ನು ಬಿಟ್ಟರೆ ಬೇರೇನನ್ನು ಮಾಡಲಾಗದ ಪರಿಸ್ಥಿತಿಯಲ್ಲಿರುವ ಕಾಂಗ್ರೆಸ್‌ನೊಂದಿಗೆ ಸೀಮಿತ ಕೂಟವನ್ನು ಮಾಡಿಕೊಂಡೇ ಆ ಗೆಲುವನ್ನು ಸಾಧಿಸಿರುತ್ತದೆ. ಹಾಗಾದಲ್ಲಿ ಅಖಿಲೇಶ್ ತಾನು ಕುಟುಂಬ ರಾಜಕಾರಣದ ಸಿಕ್ಕುಸುಳಿಗಳ ನಡುವೆಯೂ ದೊಡ್ಡ ಸಂಖ್ಯೆಯ ಮತದಾರರನ್ನು ತನ್ನೊಡನೆ ಕರೆದೊಯ್ಯಬಲ್ಲ ಸಾಮರ್ಥ್ಯವಿರುವ ರಾಜಕಾರಣಿಯೆಂದು ಸಾಬೀತುಪಡಿಸಿರುತ್ತಾರೆ. ಇನ್ನೂ ಚಿಕ್ಕ ವಯಸ್ಸಿನ ನಾಯಕನಾಗಿರುವುದರಿಂದ ದೀರ್ಘ ಕಾಲದವರೆಗೂ ಆಟದಲ್ಲಿರುವ ದೀರ್ಘ ಪಂದ್ಯದ ಕುದುರೆಯೆಂದೂ ಪರಿಗಣಿಸಲ್ಪಡುತ್ತಾರೆ. ಒಂದು ಹಂತದಲ್ಲಿ ಪಕ್ಷವನ್ನು ಅಳಿವಿನಂಚಿಗೆ ತಂದಿದ್ದ ಕ್ಷುಲ್ಲಕ ದಾಯಾದಿ ಕಲಹಗಳಿಂದ ಮೇಲೆದ್ದು ನಿಂತ ಅಖಿಲೇಶ್ ಈಗಂತೂ ನಾಯಕನಾಗಿದ್ದಾರೆ. ೨೦೧೪ರ ಏಪ್ರಿಲ್-ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಗಳು ಭಾರತದ ಬಹುಪಕ್ಷೀಯ ಪ್ರಜಾತಂತ್ರದಲ್ಲಿ ತಾನು ಪ್ರತಿನಿಧಿಸುವ ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯವಾಗುವ ರಾಜಕೀಯದ ವ್ಯಕ್ತೀಕರಣದ ಹಂತವನ್ನು ಕಂಡಿತೆಂದು ಹೇಳಬಹುದು. ಹೆಚ್ಚೂ ಕಡಿಮೆ ಅಮೆರಿಕದ ಶೈಲಿಯ ಅಧ್ಯಕ್ಷೀಯ ಚುನಾವಣೆಯ ಮಾದರಿಯಲ್ಲಿ ಮೋದಿ ಮತ್ತು ರಾಹುಲ್ ಗಾಂಧಿಯ ನಡುವಿನ ಸ್ಪರ್ಧೆಯಂತೆ ನಡೆದ ಚುನಾವಣೆಯಲ್ಲಿ ಮೋದಿ ಗೆದ್ದರು. ಆದರೆ ಕತ್ತಿಗೆ ಎರಡು ಅಲುಗಿರುತ್ತದೆ. ಮತ್ತು  ಅದು ಎರಡೂ ಕಡೆಯಲ್ಲೂ ಕತ್ತರಿಸುತ್ತದೆ.  ೨೦೧೫ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಕಿರಣ್ ಬೇಡಿಯವರ ನಡುವೆ ಪೈಪೋಟಿ ನಡೆದಾಗ ಆಮ್ ಆದ್ಮಿ ಪಕ್ಷ ಗೆಲುವನ್ನು ಸೂರೆಮಾಡಿತು. ಹಾಗೆಯೇ ೨೦೧೫ರ ಅಕ್ಟೋಬರ್‌ನಲ್ಲಿ ನಡೆದ ಬಿಹಾರ ಚುನಾವಣೆಗಳಲ್ಲಿ ನಿತೀಶ್‌ಕುಮಾರ್ ಗೆದ್ದರು. ಆದರೆ ಇದೀಗ ಉತ್ತರಪ್ರದೇಶದಲ್ಲಿ ಅಖಿಲೇಶ್ ಮತ್ತು ಮಾಯಾವತಿಯವರ ಎದಿರು ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಪರ್ಧಾಳುವಿಲ್ಲವೆಂಬುದು ಗಮನಾರ್ಹ ಸಂಗತಿಯಾಗಿದೆ. ಒಂದು ವೇಳೆ ಚುನಾವಣೆಯಲ್ಲಿ ಬಿಎಸ್‌ಪಿ ಗೌರವಯುತವಾದ ಸಾಧನೆ ಮಾಡಿದರೆ ಅದು ಮಾಯಾವತಿಯವರ ಸ್ವಂತ ಶಕ್ತಿಯಿಂದ ಮಾಡಿದ ಸಾಧನೆಯಾಗಿರುತ್ತದೆ; ಒಂದು ವೇಳೆ,  ಐದು ವರ್ಷ ಮುಖ್ಯಮಂತ್ರಿಯಾದ ನಂತರವೂ ಆಡಳಿತ ಪಕ್ಷ ವಿರೋಧಿ ಭಾವನೆಗಳನ್ನು ಹಿಮ್ಮೆಟ್ಟಿಸಿ ಚುನಾವಣೆಯನ್ನು ಗೆದ್ದಲ್ಲಿ ಅಖಿಲೇಶ್‌ಗೂ ಇದೇ ಅನ್ವಯಿಸುತ್ತದೆ. ಇದರ ಜೊತೆಜೊತೆಗೆ ಉತ್ತರಪ್ರದೇಶದ ಚುನಾವಣಾ ಫಲಿತಾಂಶಗಳು ವೋಟ್ ಬ್ಯಾಂಕ್ ರಾಜಕಾರಣ ಮತ್ತು ಅಸ್ಮಿತೆಯಾಧರಿಸಿದ ರಾಜಕಾರಣದ ಪ್ರಭಾವಗಳು ಹಿಂದಿನಷ್ಟೇ ಗಟ್ಟಿಯಾಗಿವೆಯೇ ಎಂಬುದನ್ನೂ, ಮತ್ತು ಮುಸ್ಲಿಮರು. ದಲಿತರು ಮತ್ತು ಇತರೆ ಹಿಂದುಳಿದ ವರ್ಗಕ್ಕೆ ಸೇರಿದವರು ನಿರೀಕ್ಷಿತ ರೀತಿಯಲ್ಲೇ ಮತದಾನ ಮಾಡುತ್ತಾರೆಯೇ ಎಂಬುದನ್ನು ಬಯಲುಮಾಡಲಿವೆ.

೨೦೧೯ರ ಲೋಕಸಭಾ ಚುನಾವಣೆಗಳಿಗೆ ಇನ್ನೆರಡು ವರ್ಷಗಳು ಮಾತ್ರ ಉಳಿದಿರುವಾಗ ಬಿಜೆಪಿಗೆ ಆಗಬಹುದಾದ ಸೋಲು ಮೋದಿ ಮತ್ತು ಶಾ ಅವರ ಕಾರ್ಯಶೈಲಿಯಲ್ಲಿ ಯಾವ ಬದಲಾವಣೆಯನ್ನು ತರಬಹುದು? ಮೋದಿಯವರು ಈಗಾಗಲೇ ಅನಿರೀಕ್ಷಿತ ಅಚ್ಚರಿಗಳನ್ನು ನೀಡಲು ಸಮರ್ಥರೆಂಬುದನ್ನು ಸಾಬೀತುಪಡಿಸಿರುವುದರಿಂದ ಅವರ ವರ್ತನೆಗಳು ನಿರ್ದಿಷ್ಟ ರೀತಿಯಲ್ಲೇ ಬದಲಾಗಬಲ್ಲದೆಂದು ಊಹಿಸುವುದು ಅಪಾಯಕಾರಿ. ಅವರು ಪಕ್ಷದೊಳಗಿನ ಮತ್ತು ಹೊರಗಿನ ವಿರೋಧಿಗಳ ಜೊತೆಗೆ ಒಂದಷ್ಟು ಸಂಧಾನ ಮಾದರಿ ಶೈಲಿಯನ್ನು ಅನುಸರಿಸುವರೇ?  ಅಥವಾ ಮೊದಲಿಂದ ಇರುವ ರೀತಿಯಲ್ಲೇ ಆಕ್ರಮಣಕಾರಿ ಮನೋಧರ್ಮವನ್ನು ಮುಂದುವರೆಸುತ್ತಾ ಮತ್ತಷ್ಟು ಧೃವೀಕರಣಗೊಳಿಸುವ ರಾಜಕಾರಣವನ್ನು ಅಳವಡಿಸಿಕೊಳ್ಳುವರೇ? ಅದೇ ಹೇಗೇ ಆದರೂ ಈ ಮಾರ್ಚ್ ೧೧ ಭಾರತದ ರಾಜಕಾರಣದ ಗತಿಯನ್ನು ಬದಲಿಸಲಿದೆ. 

Updated On : 13th Nov, 2017

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top