ISSN (Print) - 0012-9976 | ISSN (Online) - 2349-8846

ಒಂದು ಅಪಾಯಕಾರಿ ಕುತಂತ್ರ

ಮೋದಿಯವರ ದೇಶವಿರೋಧಿ ಸಂಚುಗಾರಿಕೆಯ ಹೇಳಿಕೆಗಳು ಯಾವುದೇ ಮಾರ್ಗದಿಂದಲಾದರೂ ಸರಿಯೇ ಚುನಾವಣೆಯನ್ನು ಗೆದ್ದೇತೀರಬೇಕೆಂಬ ಉದ್ದೇಶದಿಂದ ಹೆಣದಿರುವ ಕುತಂತ್ರವಷ್ಟೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಚುನಾವಣೆಯ ಸಮಯದಲ್ಲಿ ರಾಜಕಾರಣಿಗಳು ನಿಜವನ್ನು ಹೇಳುವುದಿಲ್ಲ. ಉತ್ಪ್ರೇಕ್ಷೆಗಳು, ಸುಳ್ಳುಗಳು, ಎಲ್ಲೆಮೀರಿದ ಮಾತುಗಳು, ಇವುಗಳೇ ಎಲ್ಲಾ ಚುನಾವಣಾ ಪ್ರಚಾರಗಳ ಒಟ್ಟು ಸಾರಾಂಶವಾಗಿದೆ. ಆದರೆ ಆ ರಾಜಕಾರಣಿಯು ಒಬ್ಬ ಪ್ರಧಾನಮಂತ್ರಿಯೂ ಆಗಿದ್ದಾಗ ಇದಕ್ಕಿಂತ ಸ್ವಲ್ಪ ಉತ್ತಮ ಪರಿಸ್ಥಿತಿಯನ್ನು ನಿರೀಕ್ಷಿಸುವುದರಲ್ಲಿ ತಪ್ಪೇನು ಇಲ್ಲ. ಆದರೆ ಅವರು ಕಳೆದ ವಾರ ಗುಜರಾತಿನ ಬನಸ್‌ಕಾಂಟಾ ಪ್ರಾಂತ್ಯದಲ್ಲಿ ಡಿಸೆಂಬರ್ ೧೦ರಂದು ನೀಡಿದ ಹೇಳಿಕೆಯ ಮೂಲಕ ಆ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ.

ಮೋದಿಯವರು ತಮ್ಮ ನಾಟಕೀಯ ಹಾಗೂ ಅಬ್ಬರದ ಮಾತಿನ ಶೈಲಿಗೆ ಪ್ರಸಿದ್ದರೆಂಬುದು ನಿಜವಾದರೂ ಅಂದು ಅವರಾಡಿದ ಮಾತುಗಳು ಚುನಾಯಿತ ಸರ್ಕಾರದ ಮುಖ್ಯಸ್ಥರೊಬ್ಬರಿಂದ ನಿರೀಕ್ಷಿಸಲೇ ಬೇಕಾದ ಶಿಷ್ಟಾಚಾರಗಳೆಲ್ಲವನ್ನೂ ಮೀರಿತ್ತು. ದೇಶದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಮಾಜಿ ಸೇನಾ ಮುಖ್ಯಸ್ಥ ದೀಪಕ್ ಕಪೂರ್ ಅವರ ಮೇಲೆ ದೇಶದ್ರೋಹದ ಆರೋಪವನ್ನು ಹೊರಿಸಿದರು. ಈ ಮೂವರು ಶತೃ ದೇಶದ ಜೊತೆ ಸೇರಿ, ಎಂದರೆ ಪಾಕಿಸ್ತಾನದ ಜೊತೆ ಸೇರಿ, ಗುಜರಾತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಸೋಲಿಸಿ ಕಾಂಗ್ರೆಸ್‌ನ ಮುಸ್ಲಿಂ ನಾಯಕರಾದ ಅಹ್ಮದ್ ಪಟೇಲರನ್ನು ಮುಖ್ಯಮಂತ್ರಿ ಮಾಡಲು ಸಂಚು ನಡೆಸಿದ್ದಾರೆಂದು ಪ್ರಧಾನಿಗಳು ಅಂದು ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಆರೋಪ ಹೊರಿಸಿದರು. ಮೇಲ್ನೋಟಕ್ಕೆ ಇದು ಒಂದು ಕಪೋಲಕಲ್ಪಿತ ಹೇಳಿಕೆಯೆಂಬಂತೆ ಕಂಡುಬರುತ್ತದ್ದೆ. ಆದರೆ ಪ್ರಧಾನಿಯವರು ಈ ಹೇಳಿಕೆಯನ್ನು ಗುಜರಾತಿನ ಕೊನೆಯ ಹಂತದ ಚುನಾವಣೆಯ ಸಂದರ್ಭದಲ್ಲಿ ಮತಗಳನ್ನು ಕೋಮುವಾದೀಕರಿಸಿ ಧೃವೀಕರಣಗೊಳಿಸಲೆಂದೇ ಬಹಳ ಲೆಕ್ಕಾಚಾರದಿಂದ ಮಾಡಿದ್ದಾರೆಂಬುದು ಸ್ಪಷ್ಟ. ಅವರ ಪ್ರಕಾರ ಈ ಸಂಚೆಲ್ಲವೂ  ಡಿಸೆಂಬರ್ ೬ ರಂದು ಕಾಂಗ್ರೆಸ್ಸಿಗರಾದ ಮಣಿಶಂಕರ ಅಯ್ಯರ್ ಅವರ ಮನೆಯಲ್ಲಿ ನಡೆದ ಮೂರು ಗಂಟೆಗಳ ಗುಪ್ತ ಸಭೆಯಲ್ಲಿ ರೂಪಿಸಲಾಯಿತು. ಆದರೆ ಪ್ರಧಾನಿಯವರ ಹೇಳಿಕೆಯಲ್ಲಿ ಇದ್ದ ಒಂದೇ ಒಂದು ಆ ಸಭೆ ಮೂರು ಗಂಟೆಗಳಾ ಕಾಲ ನಡೆಯಿತೆಂಬುದೊಂದೆ; ಅದರಲ್ಲಿ ಯಾವುದೇ ಗುಪ್ತತೆ ಇರಲಿಲ್ಲ. ಏಕೆಂದರೆ ಅದು ಮಣಿಶಂಕರ್ ಅಯ್ಯರ್ ಅವರು ತಮ್ಮ ದೀರ್ಘಕಾಲದ ಸ್ನೇಹಿತ  ಮತ್ತು ಪಾಕಿಸ್ತಾನದ ಮಾಜಿ ರಾಯಭಾರಿ ಖುರ್ಷಿದ್ ಮಹಮದ್ ಖಸೂರಿ ಅವರಿಗೆ ಕೊಟ್ಟ ಔತಣಕೂಟವಾಗಿತ್ತು.

ಮೋದಿಯವರು ಹೇಳಿದ್ದನ್ನು ಯಾರೂ ನಂಬುವುದಿಲ್ಲವಾದರೂ ಈ ವಿಕೃತ ಸುಳ್ಳಿನ ಹೃದಯಲ್ಲಿದ್ದದ್ದು ಪಾಕಿಸ್ತಾನ, ಮುಸ್ಲಿಮ್ ಮತ್ತು ಕಾಂಗ್ರೆಸ್ ಪಕ್ಷವನ್ನು ಒಟ್ಟುಗೂಡಿಸಿ ಒಂದೇ ಉಸಿರಿನಲ್ಲಿ ಮಾಡಿರುವ ಆರೋಪ. ನಿಜವಾದ ಅಪಾಯವಡಗಿರುವುದು ಈ ಸಮೀಕರಣದಲ್ಲಿ. ಮೊದಲಿಗೆ ಅವರು ಈ ದೇಶದ ಚುನಾಯಿತ ಪ್ರಧಾನಿ. ಅಂದರೆ ಈ  ದೇಶದ ಎಲ್ಲರ ಪ್ರಧಾನಮಂತ್ರಿಯೇ ವಿನಃ ತನ್ನನ್ನು ಅಥವಾ ತನ್ನ ಪಕ್ಷವನ್ನು ಬೆಂಬಲಿಸುವ ಜನರಿಗೆ ಮಾತ್ರ ಪ್ರಧಾನಿಯಲ್ಲ. ಅಂಥವರು ಸಾಂವಿಧಾನಿಕ ಹುದ್ದೆಯಲ್ಲಿದ್ದ ಮತ್ತೊಬ್ಬರ ಮೇಲೆ ಪಾಕಿಸ್ತಾನದ ಜೊತೆ ಕೈಜೋಡಿಸಿ ಭಾರತದ ಅಂತರಿಕ ವ್ಯವಹಾರದೊಳಗೆ ಮೂಗುತೂರಿಸಲು ಅವಕಾಶ ಮಾಡಿಕೊಟ್ಟರೆಂಬ ಕುತ್ಸಿತ ಆಪಾದನೆಯನ್ನು ಮಾಡಿದ್ದಾರೆ. ಅದರ ಜೊತೆಗೆ ಭಾರತದ ಮುಸ್ಲಿಮರನ್ನು ಸದಾ ಪಾಕಿಸ್ತಾನದ ಜೊತೆ ಸಮೀಕರಿಸುವ ಮೂಲಕ ಅವರ ದೇಶನಿಷ್ಟೆಯ ಬಗ್ಗೆ ಪ್ರಶ್ನೆಯನ್ನು ಎತ್ತುತ್ತಿದ್ದಾರೆ. ಭಾರತೀಯ ಮುಸ್ಲಿಮರಂತೂ ಸ್ವಾತಂತ್ರ್ಯ ಬಂದ ೭೦ ವರ್ಷಗಳಿಂದಲೂ ತಮ್ಮ ದೇಶನಿಷ್ಟೆಯನ್ನು ಪದೇಪದೇ ಸಾಬೀತುಪಡಿಸುತ್ತಲೇ ಇರಬೇಕಾದ ಒತ್ತಡದಲ್ಲಿ ಬದುಕಿದ್ದಾರೆ. ಮೂರನೆಯದಾಗಿ ತನ್ನ ಪ್ರಧಾನ ಎದುರಾಳಿಯಾದ ಕಾಂಗ್ರೆಸ್ ಪಕ್ಷ ತನ್ನನ್ನು ಪದಚ್ಯುತಗೊಳಿಸಲು ಶತೃವಿನೊಂದಿಗೆ ಕೈಜೋಡಿಸಿದೆ ಎಂಬ ರೀತಿಯಲ್ಲಿ ಪ್ರಧಾನಿಯವರು ಮಾತನಾಡಿದ್ದಾರೆ. ಮತ್ತೊಂದು ಕಡೆ ಇದೇ ಡಿಸೆಂಬರ್ ೬ ರಂದು ರಾಜಸ್ಥಾನದ ರಾಜಸ್ಮಂಡ್ ನಲ್ಲೆ ನಡೆದ ಅಪ್ರಜುಲ್ ಅವರ ಘೋರ ಹತ್ಯೆಯಂತೆ ದೇಶದೆಲ್ಲೆಡೆ ಲವ್ ಜೆಹಾದ್ ಹೆಸರಿನಲ್ಲಿ ಮತ್ತು ಗೋ ರಾಜಕರಾಣದ ಹೆಸರಿನಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಿಂಸಾಚಾರಗಳ ಬಗ್ಗೆ ಪ್ರಧಾನಿಗಳು ಪ್ರಜ್ನಾಪೂರ್ವಕ ಮೌನವಹಿಸಿದ್ದಾರೆ. ಇವೆಲ್ಲವೂ ಒಟ್ಟು ಸೇರಿ ಒಂದು ಪಾತಕ ದ್ವೇಷ ರಾಜಕಾರಣವನ್ನು ಹುಟ್ಟುಹಾಕುತ್ತಿದೆ. ಅದು ಒಂದೆಡೆ ಭಾರತೀಯ ಮುಸ್ಲಿಮರನ್ನು ಪ್ರಧಾನಧಾರೆಯಿಂದ ಅಂಚಿಗೆ ದೂಡುತ್ತಿದ್ದರೆ ಮತ್ತೊಂದೆಡೆ ಪ್ರಜಾತಂತ್ರದ ತಳಪಾಯಕ್ಕೆ ಕನ್ನ ಹಾಕುತ್ತಿದೆ. ದುರದೃಷ್ಟವಶಾತ್ ಈ ಚುನಾವಣೆಯಲ್ಲಿ ಕಾಂಗ್ರೆಸ್ ಸಹ ಬಿಜೆಪಿಯ ಮುಸ್ಲಿಂ ವಿರೋಧಿ ಅಜೆಂಡಾ ವನ್ನು ಪ್ರತಿಭಟಿಸಲು ವಿಫಲವಾಗಿದೆ. ತಾನೂ ಕೂಡಾ ಮುಸ್ಲಿಂ ಪರವಾಗಿರುವ ಸಂಘಟನೆಯೇನಲ್ಲ ಎಂದು ತೋರಿಸಿಕೊಳ್ಳುವ ಸಲುವಾಗಿ ಅದು ಕಳೆದ ಹಲವಾರು ದಶಕಗಳಿಂದ ಈ ರಾಜ್ಯದಲ್ಲಿ ಮಾತನ್ನೇ ಕಳೆದುಕೊಂಡಿರುವ ಈ ಸಮುದಾಯಕ್ಕೆ ಧ್ವನಿಯನ್ನು ನೀಡದೆ ಕಡೆಗಣಿಸಿದೆ.

ಗುಜರಾತ್ ಚುನಾವಣೆ ನಡೆದ ರೀತಿಯು ಎಲ್ಲರನ್ನು ಚಿಂತೆಗೀಡುಮಾಡಬೇಕಿದೆ. ಪ್ರತಿಯೊಂದು ಚುನಾವಣೆಯಲ್ಲೂ ಮೋದಿಯ ವ್ಯಕ್ತಿಆರಾಧನಾ ಸಂಸ್ಕೃತಿಯೊಂದನ್ನು ಪೋಷಿಸಿಕೊಂಡು ಬರುತ್ತಿರುವುದು ನಿಚ್ಚಳವಾಗುತ್ತಿದೆ. ಪ್ರತಿ ಚುನಾವಣಾ ಪ್ರಚಾರ ಸಭೆಯಲ್ಲಿ ಸನ್ನಿ ಹಿಡಿದವರಂತೆ ಮೋದಿ, ಮೋದಿ ಎಂಬ ಘೋಷಣೆಗಳನ್ನು ಹಾಕುವುದು, ಸಬರಮತಿ ನದಿಯ ಮೇಲೆ ಸೀಪ್ಲೇನ್ (ಸಮುದ್ರದ ಮೇಲೂ ಇಳಿಯಬಲ್ಲ ವಿಮಾನ) ಮೂಲಕ ಇಳಿಯುವುದು ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಬಹಳ ಸಮಯದಿಂದ ಇದರ ಬಳಕೆಯಾಗುತ್ತಿದ್ದರೂ ಇದು ದೇಶದಲ್ಲೇ ಪ್ರಪ್ರಥಮ ಎಂದು ಕೊಚ್ಚಿಕೊಳ್ಳುವುದು, ಮತ್ತು ಮಣಿಶಂಕರ್ ಐಯ್ಯರ್ ಎಲ್ಲೋ ಒಂದು ಕಡೆ ಹೇಳಿದ ಮಾತನ್ನೇ ದೊಡ್ಡದು ಮಾಡುತ್ತಾ ತನ್ನನ್ನು ಒಬ್ಬ ಹುತಾತ್ಮನಂತೆ ತೋರಿಸಿಕೊಳ್ಳುವುದು- ಇವೆಲ್ಲವೂ ರಾಜಕಾರಣದೊಳಗೆ ಬೆರಸಲಾಗುತ್ತಿರುವ ಅಪಾಯಕಾರಿ ಮಿಶ್ರಣವಾಗಿವೆ. ಇವೆಲ್ಲವೂ ಸಾರಾಂಶದಲ್ಲಿ ಯಾವ ಪ್ರಶ್ನೆಯನ್ನೂ ಕೇಳದೆ ಒಬ್ಬ ವ್ಯಕ್ತಿಗೆ ಅಚಲ ನಿಷ್ಟೆಯನ್ನು ತೋರಬೇಕೆಂಬ ರಾಜಕಾರಣವೇ ಆಗಿದೆ. ಇದನ್ನೇ ದೇಶಭಕ್ತಿಯೆಂದೂ ಬಣ್ಣಿಸಲಾಗುತ್ತಿದೆ. ಮೋದಿ ಎಂದರೆ ದೇಶ. ದೇಶವೆಂದರೆ ಮೋದಿ!

ಈ ಗುಜರಾತ್ ಚುನಾವಣೆಯಲ್ಲಿ ಮೋದಿಯವರ ಪ್ರಚಾರ ಭಾಷಣದ ಅಧಃಪತನದಿಂದ ಅರ್ಥವಾಗುವ ವಿಷಯವೇನೆಂದರೆ ವಿಕಾಸ್ ಎಂಬ ಮುಖವಾಡವು ಹಿಂದೂತ್ವ ರಾಜಕಾರಣದ ಪ್ರಸಾರಕ್ಕೆ ಬಳಕೆಯಾಗಿದೆ ಮತ್ತು ಮುಂದೆಯೂ ಬಳಕೆಯಾಗಲಿದೆ. ಎಲ್ಲರ ಅಭಿವೃದ್ಧಿ ಎಂಬ ಮಾತುಗಳು ಅಂತಿಮವಾಗಿ ಕೇವಲ ಕೆಲವು ದೊಡ್ಡ ನಾಟಕೀಯ ಘೋಷಣೆಗಳಿಗೆ ಸೀಮಿತವಾಗಿಬಿಟ್ಟಿದೆ. ಅಭಿವೃದ್ಧಿಯ ಭರವಸೆಗಳ ಟೊಳ್ಳುತನಗಳು ಸೀಪ್ಲೇನ್ ಸ್ಟಂಟ್‌ನಲ್ಲೂ ವ್ಯಕ್ತವಾಗುತ್ತದೆ. ಇಂಥ ಹೊಟ್ಟೆಯನ್ನು ತುಂಬದ ಅಥವಾ ಯಾವುದೇ ಜೀವನೋಪಾಯಗಳನ್ನು ಕಲ್ಪಿಸದ ಗಾರುಡಿಗಳ ಮೂಲಕ ಜನರನ್ನು ದಿಕ್ಕುತಪ್ಪಿಸುವ ಕೆಲಸವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಅಂತಿಮವಾಗಿ ಧರ್ಮ, ಹಿಂದೂ ಅಸ್ಮಿತೆ ಮತ್ತು ನಾಯಕನ ಬಗ್ಗೆ ಅಚಲ ನಿಷ್ಟೆ ಎಂಬ ಅವರ ನಿಜವಾದ ಅಜೆಂಡಾ ಗಳಿಗಾಗಿ ಈ ಸುಳ್ಳು ಭರವಸೆಗಳನ್ನೂ ಕೈಬಿಡಲಾಗುತ್ತದೆ. ಈ ಸಾಧ್ಯತೆಯ ಬಗ್ಗೆ ಯಾರಿಗಾದರೂ ಕಿಂಚಿತ್ತು ಅನುಮಾನವಿದ್ದರೂ ಅದನ್ನು ಗುಜರಾತ್ ತೊಡೆದುಹಾಕಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಬಗೆಯ ದ್ವೇಷ ಭಾಷಣಗಳು, ಜನರನ್ನು  ಒಡೆದಾಳುವ ತಂತ್ರಗಳು, ಅಲ್ಪಸಂಖ್ಯಾತರನ್ನು ಮತ್ತು ಅವರ ಧ್ವನಿಯನ್ನು ಮೂಲೆಗುಂಪುಗೊಳಿಸುವುದು ಮತ್ತು ಮುಚ್ಚುಮರೆಯಿಲ್ಲದ ಬಹುಸಂಖ್ಯಾತ ದುರಭಿಮಾನದ ಧೋರಣೆಗಳು ಇನ್ನೂ ಹೆಚ್ಚಾಗಲಿವೆ. ಬಿಜೆಪಿಯ ಈ ರಾಜಕೀಯ ಮತ್ತು ಧೋರಣೆಗಳಿಗೆ ತದ್ವಿರುದ್ಧವಾದ ರೀತಿಯಲ್ಲಿ ಎಲ್ಲರನ್ನೂ ಒಳಗೊಳ್ಳುವ ರಾಜಕಾರಣವನ್ನು ಮುಂದಿಡುವ ವಿಶ್ವಾಸವನ್ನು ರೂಢಿಸಿಕೊಳ್ಳುವುದು ಈ ಸದ್ಯಕ್ಕೆ ವಿರೋಧ ಪಕ್ಷಗಳ ಮುಂದಿರುವ ಸವಾಲಾಗಿದೆ.

ಮೋದಿಯವರ ಈ ಅಸಂಬದ್ಧ ದ್ರೋಹದ ಸಿದ್ಧಾಂತಕ್ಕೆ ತೀಕ್ಷ್ಣವಾಗಿ ಪ್ರಕ್ರಿಯಿಸಿರುವ ಮನಮೋಹನ್ ಸಿಂಗ್ ಅವರು  ಭಾರತದ ಪ್ರತಿಯೊಂದು ಸಾಂವಿಧಾನಿಕ ಪದವಿಗಳಿಗೂ ಕಳಂಕ ತರುವ ತನ್ನ ಬಯಕೆಯನ್ನು ಪೂರೈಸಿಕೊಳ್ಳುವ ಸಲುವಾಗಿ ಮೋದಿಯವರು ಮಾಜಿ ಪ್ರಧಾನಿ ಮತ್ತು ಸೈನಿಕ ಮುಖ್ಯಸ್ಥರ ಹುದ್ದೆಯನ್ನೂ ಕಳಂಕಿತಗೊಳಿಸುತ್ತಿದ್ದಾರೆ ಎಂದು ಸರಿಯಾಗಿಯೇ ಟೀಕಿಸಿದ್ದಾರೆ. ಇವೆಲ್ಲದರ ಜೊತೆಗೆ ನಮ್ಮ ಚಿಂತೆಗೆ ಕಾರಣವಾಗಬೇಕಾದ ಮತ್ತೊಂದು ಸಂಗತಿಯೇನೆಂದರೆ ಈ ದೇಶವನ್ನು ಮುನ್ನಡೆಸುತ್ತಿರುವ ನಾಯಕನಿಗೆ ತಾನು ಕೇವಲ ಅಳುವ ಪಕ್ಷದ ನಾಯಕ ಮಾತ್ರವಲ್ಲದೆ ದೇಶದ ಪ್ರಧಾನಿಯೂ ಆಗಿರುವುದರಿಂದ ಕೆಲವು ಸನ್ನಡತೆ ಮತ್ತು ಜವಾಬ್ದಾರಿಗಳನ್ನು ಪಾಲಿಸಬೇಕೆಂಬ ಬಗ್ಗೆ ಕಿಂಚಿತ್ತೂ ಕಾಳಜಿಯೂ ಇಲ್ಲದಿರುವುದು. ಆದರೆ ಅವರ ಮಟ್ಟಿಗೆ ಚುನಾವಣೆಯೆಂದರೆ ಯುದ್ಧವಿದ್ದಂತೆ. ಅಂತಿಮವಾಗಿ ಅಲ್ಲಿ ಮುಖ್ಯವಾಗುವುದು ಯಾರು ಗೆದ್ದರೆಂಬುದೇ ವಿನಃ ಹೇಗೆ ಗೆದ್ದರೆಂಬುದಲ್ಲ. 

Back to Top