ISSN (Print) - 0012-9976 | ISSN (Online) - 2349-8846

ನ್ಯಾಯದ ವರದಿಗಾರಿಕೆಯ ಮೇಲಿನ ನಿರ್ಬಂಧ

ನ್ಯಾಯಾಲಯದ ಕಲಾಪಗಳನ್ನು ವರದಿ ಮಾಡದಂತೆ ಮಾಧ್ಯಮಗಳನ್ನು ನಿರ್ಬಂಧಿಸುವುದರಿಂದ  ನ್ಯಾಯಾಂಗದ ಮೇಲಿನ ವಿಶ್ವಾಸ ಕಡಿಮೆಯಾಗುತ್ತದೆ

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

ಮುಕ್ತ ನ್ಯಾಯ ಪದ್ದತಿಯು ಭಾರತದ ನ್ಯಾಯಾಂಗ ವ್ಯವಸ್ಥೆಯ ಒಂದು ಪ್ರಮುಖ ಲಕ್ಷಣವಾಗಿದೆ. ತಾತ್ವಿಕವಾಗಿ ನೋಡುವುದಾದರೆ ನ್ಯಾಯಾಲಯದ ಕಲಾಪಗಳನ್ನು ವೀಕ್ಷಿಸಲು ಎಲ್ಲ ಸಾರ್ವಜನಿಕರಿಗೂ ಹಾಗೂ ಅದನ್ನು ವರದಿ ಮಾಡಲು ಮಾಧ್ಯಮದವರಿಗೂ ಮುಕ್ತ ಅವಕಾಶವಿದೆ. ಆದರೆ ವಾಸ್ತವದಲ್ಲಿ ಬಹುಪಾಲು ನ್ಯಾಯಾಲಯಗಳ ಆವರಣವು ಕಿರಿದಾಗಿದ್ದು ನ್ಯಾಯಾಲಯದ ಕಲಾಪಗಳು ಸುಗಮವಾಗಿ ನಡೆಯುವ ಸಲುವಾಗಿ ಸಂಭವನೀಯ ಅಡಚಣೆಗಳನ್ನು ತಡೆಗಟ್ಟುವ ಅಗತ್ಯವಿದ್ದೇ ಇರುತ್ತದೆ. ಹೀಗಾಗಿ ನ್ಯಾಯಾಲಯದ ಒಳಗೆ ಸಾರ್ವಜನಿಕರ ಪ್ರವೇಶ ನಿರ್ಭಂಧಿತವಾಗಿಯೇ ಇರುತ್ತಿದ್ದು, ನ್ಯಾಯಾಲಯದ ಒಳಗೆ ನಡೆದ ಕಲಾಪಗಳ ನಿಖರವಾದ ಮತ್ತು ಸರಿಯಾದ ಮಾಹಿತಿಯನ್ನು ಪಡೆಯಲು ಸಾರ್ವಜನಿಕರು ಸಾಮಾನ್ಯವಾಗಿ ಪತ್ರಕರ್ತರನ್ನೇ ಆಶ್ರಯಿಸುತ್ತಾರೆ. ಯಾವ್ಯಾವ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿಗಳು ಹೆಚ್ಚಿರುತ್ತವೋ ಅಂಥ ಪ್ರಕರಣಗಳಲ್ಲಿ ಸಾರ್ವಜನಿಕರ ಕುತೂಹಲವೂ ಹೆಚ್ಚಿರುತ್ತದೆ. ಹೀಗಾಗಿ ನ್ಯಾಯಾಲಯಗಳು ಅಂಥಾ ಪ್ರಕರಣಗಳನ್ನು ಯಾವುದೇ ಅನಗತ್ಯ ಟೀಕೆಗಳಿಗೆ ಗುರಿಯಾಗದಂತೆ ನಡೆಸುವ ಅಗತ್ಯವೂ ಹೆಚ್ಚಿರುತ್ತದೆ.  ಒಂದು ಪ್ರಕರಣದ ಬಗ್ಗೆ ನ್ಯಾಯಾಲಯವು ಅಂತಿಮವಾಗಿ ಕೊಡುವ ತೀರ್ಪು ಏನೇ ಆಗಿದ್ದರೂ, ಅದಕ್ಕಾಗಿ ಅನುಸರಿಸಿದ ಪ್ರಕ್ರಿಯೆ ಎಷ್ಟು ನ್ಯಾಯಸಮ್ಮತ ಮತ್ತು ಕಾನೂನುಬದ್ಧವಾಗಿತ್ತು ಎಂಬುದರ ಆಧಾರದ ಮೇಲೆಯೇ ಸಾರ್ವಜನಿಕರು ನ್ಯಾಯಾಂಗದ ಮೇಲಿಟ್ಟಿರುವ ವಿಶ್ವಾಸವು ಧೃಢಗೊಳ್ಳುತ್ತದೆ. ಸರ್ಕಾರದ ಇತರ ಯಾವುದೇ ಅಂಗಸಂಸ್ಥೆಗಳಿಗಿಂತ ಭಿನ್ನವಾಗಿ ನ್ಯಾಯಾಂಗ ಪ್ರಕ್ರಿಯೆಯನ್ನು ಮಾತ್ರ ಸಾರ್ವಜನಿಕರು ಗಮನಿಸುವಂತೆ ಮತ್ತು ಅದರ ಮೂಲಕ ಆ ಸಂಸ್ಥಯ ಪ್ರಾಮಾಣಿಕತೆಯ ಬಗ್ಗೆ ವಿಶ್ವಾಸವನ್ನು ಪಡೆದುಕೊಳ್ಳುವಂತೆ ಮುಕ್ತವಾಗಿರಿಸಲಾಗಿದೆ.

ಆದರೆ ಈ ನಿಯಮವನ್ನು ಉಲ್ಲಂಘಿಸಿದರೆ ಏನು ಪರಿಣಾಮಗಳುಂಟಾಗಬಹುದೆಂಬ ಪರಿಜ್ನಾನ ಮತ್ತು ಕಾಳಜಿಯೇ ಇಲ್ಲದಂತೆ ನ್ಯಾಯಾಲಯಗಳೇ ಈ ಪದ್ಧತಿಯನ್ನು ಉಲ್ಲಂಘಿಸುತ್ತಿವೆ. ಇದು ಅತ್ಯಂತ ವಿಷಾದಕರ. ಇತ್ತೀಚಿನ ಎರಡು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಖುದ್ದು ನ್ಯಾಯಾಲಯವೇ ಮಾಧ್ಯಮದವರನ್ನು ಹೊರಗಿಡುವ ಮೂಲಕ ದಮನಕಾರಿ ಪ್ರವೃತ್ತಿಯನ್ನು ಅನುಸರಿಸಿದೆ.  ಅದರಲ್ಲಿ ಮೊದಲನೆಯದು ಶೊಹ್ರಾಬುಧ್ಹೀನ್ ಮತ್ತಿತರ ಹತ್ಯೆಯ ಪ್ರಕರಣದಲ್ಲಿ ಆರೋಪಕ್ಕೊಳಗಾಗಿರುವ ಹಲವು ಪೊಲೀಸ್ ಅಧಿಕಾರಿಗಳ ಕ್ರಿಮಿನಲ್ ವಿಚಾರಣೆಯ ಪ್ರಕರಣ. ಮತ್ತೊಂದು ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಮಾಡಿದ್ದ ದ್ವೇಷ ಭಾಷಣದ ಪ್ರಕರಣದ ಹಿನ್ನೆಯಲ್ಲಿ ಅವರ ಮೇಲೆ ಮೊಕದ್ದಮೆ ಹೂಡಲು ಅನುಮತಿ ಕೋರಿ ಅಲಹಾಬಾದ್ ಹೈಕೋರ್‍ಟಿನಲ್ಲಿ ದಾಖಲಾಗಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ. ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಎರಡು ಸಹ ದೊಡ್ಡ ಪ್ರಕರಣಗಳಾಗಿದ್ದು ಅದರ ಫಲಿತಾಂಶವೇನಾಗಹುದೆಂಬ ಬಗ್ಗೆ ಅಪಾರವಾದ ಸಾರ್ವಜನಿಕ ಅಸಕ್ತಿಯಿದೆ.

ಇದೇ ಬಗೆಯ ದಮನಕಾರಿ ಆದೇಶಗಳು ಇದಕ್ಕಿಂತ ಭಿನ್ನ ಸನ್ನಿವೇಶಗಳಲ್ಲೂ ನಿಡಲಾಗಿದೆ. ಮುಂಬೈನ್ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರು ತಾವು ವಿಚಾರಣೆ ನಡೆಸುತ್ತಿದ್ದ ಪ್ರಕರಣದ ದೈನಂದಿನ ವರದಿಗಳನ್ನು ವರದಿ ಮಾಡಬಾರದೆಂದು ಆದೇಶ ನೀಡಿದ್ದರು. ಅಂಥ ವರದಿಯಿಂದ ಆರೋಪಿಗಳು, ಎರಡು ಕಡೆಯ ವಕೀಲರು ಮತ್ತು ಸಾಕ್ಷಿಗಳು ಪ್ರಭಾವಿತರಾಗಿ ನ್ಯಾಯಸಮ್ಮತ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ ಎಂಬುದು ಅದಕ್ಕೆ ಕಾರಣವಾಗಿತ್ತು. ಆದರೂ, ಮಾಧ್ಯಮದವರು ವಿಚಾರಣೆಯ ಸಂದರ್ಭದಲ್ಲಿ ಹಾಜರಿದ್ದು, ದೈನಂದಿನ ಬೆಳವಣಿಗೆಯ ಬಗ್ಗೆ ಟಿಪ್ಪಣಿ ತೆಗೆದುಕೊಳ್ಳಲು ಅನುವುಮಾಡಿಕೊಡಲಾಗಿತ್ತು. ಆದರೆ ವಿಚಾರಣೆಯು ಪೂರ್ಣಗೊಂಡ ನಂತರದಲ್ಲೇ ವರದಿಯನ್ನು ಪ್ರಕಟಿಸಬೇಕೆಂದು ನಿರ್ಭಂಧಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಆರೋಪಿಗಳ ವಕೀಲರು ಕೈಬರಹದಲ್ಲಿ ನೀಡಿದ ಅರ್ಜಿಯನ್ನು ಬಿಟ್ಟರೆ ಬೇರೆ ಇನ್ಯಾವ ಆಧಾರದಲ್ಲಿ ನ್ಯಾಯಾಲಯವು ಈ ವಿಶೇಷ ನಿರ್ಭಂಧಗಳನ್ನು ಹೇರಿತ್ತೆಂಬುದರ ಬಗ್ಗೆ ಸ್ಪಷ್ಟತೆಯಿಲ್ಲ.

ಮತ್ತೊಂದು ಕಡೆ ಅಲಹಾಬಾದ್ ಹೈಕೋರ್ಟು ನ್ಯಾಯಾದೇಶದ ಅಂತಿಮ ಘೋಷಣೆಯಾಗುವವರೆಗೂ ಯಾವುದೇ ಮಾಧ್ಯಮದವರು  ನ್ಯಾಯಾಲಯದ ನಡಾವಳಿಗಳನ್ನು ಪ್ರಕಟಿಸಬಾರದೆಂಬ ಆದೇಶವನ್ನು ಹೊರಡಿಸಿದ್ದರು. ಅದಕ್ಕೆ ಇಂಥಾ ನಡಾವಳಿಗಳ ತಪ್ಪು ವರದಿಗಳ ಬಗ್ಗೆ ಹೆಚ್ಚುವರಿ ಸರ್ಕಾರಿ ವಕೀಲರು ನೀಡಿದ ಕೆಲವು ಉದಾಹರಣೆಗಳು ಆಧಾರವಾಗಿತ್ತು. ಆದರೆ ಯಾವ ಪತ್ರಿಕೆಯ ಯಾವ ನಿರ್ದಿಷ್ಟ ವರದಿಯು ತಪ್ಪಾಗಿ ವರದಿಯಾಗಲ್ಪಟ್ಟಿದೆ ಎಂಬುದನ್ನು ನ್ಯಾಯಾಲಯವು ಎಲ್ಲಿಯೂ ಸ್ಪಷ್ಟಪಡಿಸಿಲ್ಲ. ಹಾಗೆಯೇ ಅಂಥ ವರದಿಯನ್ನು ಪ್ರಕಟಿಸಿದ ಪತ್ರಕರ್ತರು ಈ ತಪ್ಪು ವ್ಯಾಖ್ಯಾನದ ಆರೋಪವನ್ನು ಅಲ್ಲಗೆಳೆಯಲು ಅಥವಾ ಸಮರ್ಥಿಸಿಕೊಳ್ಳಲು ಯಾವ ಅವಕಾಶವನ್ನೂ ನೀಡಲಿಲ್ಲ. ಆದರೂ ಅಂತಿಮ ಆದೇಶ ನೀಡುವವರೆಗೂ ನಡಾವಳಿಗಳನ್ನು ಪ್ರಕಟಿಸಬಾರದೆಂದು ನ್ಯಾಯಾಲಯವು ಮಾಧ್ಯಮವನ್ನು ನಿಯಂತ್ರಿಸಿಬಿಟ್ಟಿತು. 

ಈ ಎರಡೂ ಪ್ರಕರಣಗಳಲ್ಲಿ ನ್ಯಾಯಾಲಯಗಳು ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಷನ್ ಮತ್ತು ಸೆಕ್ಯುರಿಟಿ ಎಕ್ಸ್‌ಚೇಂಜ್ ಬೋರ್‍ಡ್ ಆಫ್ ಇಂಡಿಯಾ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ೨೦೧೦ರಲ್ಲಿ ನೀಡಿದ ಮಾರ್ಗದರ್ಶಿ ಆದೇಶಕ್ಕೆ ಅಗೌರವ ತೋರುತ್ತಿದೆ. ಈ ಪ್ರಕರಣವನ್ನು ಆಲಿಸುತ್ತಿದ್ದ ಸಾಂವಿಧಾನಿಕ ಪೀಠವು ನ್ಯಾಯಾಲಯಗಳು ಒಂದೊಮ್ಮೆ ನಡಾವಳಿಗಳ ಬಗೆಗಿನ ವರದಿಗಾರಿಕೆಯನ್ನು ಮಾಡಬಾರದೆಂದು ಆದೇಶಿಸಬೇಕಾಗಿ ಬಂದಲ್ಲಿ ಅಂಥಾ ಒಂದು ಆದೇಶ ನ್ಯಾಯದಾನಕ್ಕೆ ಮಾಡುವ ಲಾಭ ಮತ್ತು ನಿರ್ಬಂಧದಿಂದ ಆಗುವ ನಷ್ಟಗಳ ನಡುವಿನ ಅನುಪಾತವನ್ನು ಹಾಗೂ ನಿರ್ಬಂಧದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ಹೇಳಿತ್ತು. ವರದಿಗಾರಿಕೆಯ ಮೇಲೆ ನಿರ್ಬಂಧ ಹೇರುವ ಮುನ್ನ ನ್ಯಾಯಪ್ರಕ್ರಿಯೆಯ ಋಜುತ್ವವನ್ನು ಕಾಪಾಡಿಕೊಳ್ಳಲು ಬೇರೆ ಯಾವ ಮಾರ್ಗವೂ ಇಲ್ಲವೆಂಬ ಬಗ್ಗೆ ಹಾಗೂ ಯಾವುದೇ ಮಧ್ಯಪ್ರವೇಶವಿಲ್ಲದೆ ವಿಚಾರಣೆಯು ನಡೆಯಲು ವರದಿಯ ಮುಂದೂಡಿಕೆಯೇ ಏಕೈಕ ಮಾರ್ಗವೆಂಬ ಬಗ್ಗೆ ಕೋರ್ಟು ನಿಶ್ಚಿತವಾಗಿ ಮನವರಿಕೆ ಮಾಡಿಕೊಳ್ಳಬೇಕು. ಆದರೆ  ಮೇಲಿನ ಎರಡೂ ಪ್ರಕರಣಗಳಲ್ಲಿ ಮಾಧ್ಯಮಗಳ ವರದಿಗಾರಿಕೆಯ ಮೇಲೆ ನಿರ್ಬಂಧ ಹೇರುವ ಮುನ್ನ ನ್ಯಾಯಾಲಯಗಳು ಸುಪ್ರೀಂ ಕೋರ್ಟೂ ಹೇಳಿದ್ದ ಯಾವ ಶರತ್ತುಗಳನ್ನೂ ಪಾಲಿಸಿಲ್ಲ.

ಮಾಧ್ಯಮಗಳ ಮೇಲೆ ನಿರ್ಬಂಧ ಹೇರುತ್ತಿರುವ ಪ್ರವೃತ್ತಿ ಕೇವಲ ಆ ಎರಡು ಕೋರ್ಟುಗಳಿಗೆ ಮಾತ್ರ ಸೀಮಿತವಾದದ್ದೇನಲ್ಲ. ಇಂಥ ಒಂದು ವಿಷಾದನೀಯ ಮೇಲ್ಪಂಕ್ತಿಯನ್ನು ಇತ್ತೀಚೆಗೆ ಸ್ವಯಂ ಸುಪ್ರೀಂ ಕೋರ್ಟೇ ಹಾಕಿಕೊಟ್ಟಿದೆ. ಉಜ್ಜಯನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಆಚರಣೆಯಲ್ಲಿದ್ದ ಪೂಜಾ ವಿಧಾನಗಳ ಬಗ್ಗೆ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಹಾಜರಿದ್ದ ಪತ್ರಕರ್ತರಿಗೆ ಅದನ್ನು ವರದಿ ಮಾಡಬಾರದೆಂದು ಸುಪ್ರೀಂ ಕೋರ್ಟು ಮೌಖಿಕವಾಗಿ ತಾಕೀತು ಮಾಡಿತ್ತು. ವಿಪರ್ಯಾಸವೆಂದರೆ ಪ್ರಕರಣದ ಸಂದರ್ಭ ಮತ್ತು ಸನ್ನಿವೇಶಗಳ ಪರಿವಿಲ್ಲದೆ ಮಾಡುವ ವರದಿಯು ತಪ್ಪಾಗಿರುತ್ತದೆಂಬ ಕಾರಣದಿಂದ ನಡಾವಳಿಯ ವರದಿಯನ್ನು ನಿರ್ಬಂಧಿಸಲಾಯಿತಾದರೂ ಅಂತಿಮವಾಗಿ ಹೊರಬಂದ ತೀರ್ಪೇ ತಪ್ಪಾಗಿ ವರದಿಯಾಯಿತು. ಅದೇ ಧೋರಣೆಯ ಮುಂದುವರೆಕೆಯಾಗಿ, ಕೋಲ್ಕತ್ತ ಹೈಕೋರ್ಟಿನ ನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ ಸಿ. ಎಸ್. ಕರ್ಣನ್ ಅವರಿಗೆ ಶಿಕ್ಷೆ ವಿಧಿಸಿದ ಆದೇಶದಲ್ಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ಣನ್ ಅವರ ಯಾವ ಹೇಳಿಕೆಗಳನ್ನು ಮಾಧ್ಯಮಗಳು ಪ್ರಕಟಿಸಬಾರದೆಂದು ಸುಪ್ರೀಂ ಕೋರ್ಟು ಆದೇಶಿಸಿತ್ತು. ತನ್ನ ಆದೇಶಗಳಲ್ಲಿ ಸುಪ್ರೀಂ ಕೋರ್ಟು ಹೇಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನ್ಯಾಯಾಲಯಗಳು  ವಿಚಾರಶೂನ್ಯತೆ ಮತ್ತು ಸಂವೇದನಾಶೂನ್ಯತೆಗಳನು ವ್ಯಕ್ತಪಡಿಸುತ್ತಾ ಬಂದಿದೆ ಎಂಬುದಕ್ಕೆ ನಿದರ್ಶನವಾಗಿದೆ.

ಸಹಾರ ಪ್ರಕರಣದಲ್ಲಿ ಸ್ವಯಂ ಸುಪ್ರೀಂ ಕೋರ್ಟೇ ಒಪ್ಪಿಕೊಂಡಂತೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ನ್ಯಾಯದಾನದ ನಿರ್ವಹಣೆಯ ಬಗ್ಗೆ ಸಮತೋಲನವನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭದ ಕೆಲಸವೇನಲ್ಲ. ಇಂಥಾ ಆದೇಶಗಳು ಒಂದೆಡೆ ಪ್ರಕರಣದ ವರದಿಗಾರಿಕೆಯ ಮೇಲೆ ಆಧಾರರಹಿತ ನಿರ್ಬಂಧಗಳನ್ನು ಹೇರುತ್ತದೆ. ಮತ್ತೊಂದೆಡೆ, ಈ ನಿರ್ಬಂಧಗಳಿಗೆ ಸೂಕ್ತವಾದ ಕಾರಣವನ್ನು ಒದಗಿಸದೆ ಅಥವಾ ಸರಿಯಾದ ತರ್ಕನುಪಾತವನ್ನು ಕಾದುಕೊಳ್ಳದೆ ಸಾರ್ವಜನಿಕರಲ್ಲಿ ನ್ಯಾಯಾಂಗದ ಬಗ್ಗೆ  ಅಪಾರವಾದ ಸಂದೇಹಗಳನ್ನು ಹುಟ್ಟಿಹಾಕುತ್ತದೆ. ಅದರಲ್ಲೂ ದೊಡ್ಡ ಪ್ರಕರಣಗಳಲ್ಲಿ ಹೇರುವಂಥ ತರ್ಕರಹಿತ ನಿರ್ಬಂಧಗಳು ಇಂಥಾ ಅನುಮಾನವನ್ನು ಹೆಚ್ಚೆಚ್ಚು ಹುಟ್ಟಿಸುತ್ತದ್.  ನ್ಯಾಯಪ್ರಕ್ರಿಯೆಯನ್ನು ಎಷ್ಟು ನಿಷ್ಪಕ್ಷಪಾತವಾಗಿ ನಡೆಸಲಾಗುತ್ತಿದೆಯೆಂಬುದರ ಮೇಲೆ ಸಾರ್ವಜನಿಕರು ನ್ಯಾಯಾಂಗದ ಮೇಲೆ ವಿಶ್ವಾಸವನ್ನಿಡುತ್ತಾರೆ. ದೊಡ್ಡ ಪ್ರಕರಣಗಳಲ್ಲಿ ವರದಿಗಾರಿಕೆಯ ಮೇಲೆ ನಿರ್ಬಂಧವನ್ನು ಹೇರುವ ಕ್ರಮಗಳು ಅಭಿವ್ಯಕ್ತಿ ಸ್ವಾತಂತ್ರದ ಮೇಲೂ ನಿರ್ಬಂಧ  ಹೇರುತ್ತಿದೆ. ಮಾತ್ರವಲ್ಲದೆ ಆ ಮೂಲಕ ಸಾರ್ವನಿಕರಿಗೆ  ನ್ಯಾಯಾಂಗದ ಮೇಲೆ ಇರುವ ವಿಶ್ವಾಸಕ್ಕೂ ಧಕ್ಕೆಯುಂಟುಮಾಡುತ್ತಿದೆ. 

Back to Top