ISSN (Print) - 0012-9976 | ISSN (Online) - 2349-8846

ದೈತ್ಯ ಸ್ವರೂಪ ಪಡೆದುಕೊಳ್ಳುತ್ತಿರುವ ಭಾರತದ ಆದಾಯ ಅಸಮಾನತೆ

ಆದಾಯ ಅಸಮಾನತೆಯ ವಿವರಣೆಯು ಕೇವಲ ಕಂಡಸತ್ಯವನ್ನು (ಎಂಪಿರಿಕಲ್) ಮಾತ್ರ ಆಧರಿಸಬಾರದು.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

ಂಡವಾಳವಾದವು ಭಾರತದಲ್ಲಿ ಸೃಷ್ಟಿಸುತ್ತಿರುವ ದೈತ್ಯ ಸ್ವರೂಪದ ಅಸಮಾನತೆಗಳು ಎಲ್ಲರಿಗೂ ಅರ್ಥವಾಗುವಷ್ಟು ನಿಚ್ಚಳವಾಗಿಯೇ ಇದೆ. ಆದರೂ ಈ ಅಸಮಾನತೆಗಳ ಕುರಿತಾದ ಅದರಲ್ಲೂ ಆದಾಯ ಅಸಮಾನತೆಗಳ ಕುರಿತಾದ ಅಂಕಿಅಂಶಗಳನ್ನು ಪ್ರಖ್ಯಾತ ಕ್ಯಾಪಿಟಲಿಸಂ ಇನ್ ದಿ ಟ್ವೆಂಟಿ ಫರ್ಸ್ಟ್ ಸೆಂಚುರಿ (ಇಪ್ಪತ್ತೊಂದನೆ ಶತಮಾನದ ಬಂಡವಾಳಶಾಹಿ) ಕೃತಿಯ ಕರ್ತೃ ಥಾಮಸ್ ಪಿಕೆಟಿ ಮತ್ತು ಪ್ಯಾರಿಸ್ ಸ್ಕೂಲ್ ಆಫ್ ಎಕಾನಾಮಿಕ್ಸ್ ನ ’ವರ್ಲ್ಡ್ ಇನಿಕ್ವಾಲಿಟಿ ಲ್ಯಾಬ್’ (ವಿಶ್ವ ಅಸಮಾನತೆ ಅಧ್ಯಯನ ಪ್ರಯೋಗಾಲಯ) ನ ಅವರ ಸಹೋದ್ಯೋಗಿ ಲ್ಯುಕಾಸ್ ಚಾನ್ಸೆಲ್ ಅವರು ಬಿಡುಗಡೆ ಮಾಡಿದ್ದಾರೆ. ಇಂಡಿಯನ್ ಇನ್‌ಕಮ್ ಇನೀಕ್ವಾಲಿಟಿ-೧೯೯೨-೨೦೧೪ (ಭಾರತದ ಆದಾಯ ಅಸಮಾನತೆ- ೧೯೯೨-೨೦೧೪) ಎಂಬ ಶೀರ್ಷಿಕೆಯಡಿ ಅವರು ಬಿಡುಗಡೆ ಮಾಡಿರುವ ಅಧ್ಯಯನ ವರದಿಯು ಫ್ರಂ ಬ್ರಿಟಿಷ್ ರಾಜ್ ಟು ಬಿಲಿಯನಿರ್ ರಾಜ್ (ಬ್ರಿಟಿಷ್ ಆಳ್ವಿಕೆಯಿಂದ ಶತಕೋಟ್ಯಾಧಿಪತಿಗಳ ಆಳ್ವಿಕೆಯ ಕಡೆಗೆ) ಎಂಬ ಕೆರಳಿಸುವ ಉಪಶೀರ್ಷಿಕೆಯನ್ನೂ ಹೊಂದಿದೆ. ಈ ವರದಿಯು ಇಂಥಾ ವಿಷಯಗಳ ಬಗ್ಗೆ ಭ್ರಮಾಧೀನ ಸ್ಥಿತಿಯಲ್ಲಿರುವ ಭಾರತದ ಆರ್ಥಶಾಸ್ತ್ರಜ್ನರನ್ನು ಬಡಿದೆಚ್ಚರಿಸಿರುವುದಲ್ಲದೆ ಪತ್ರಕರ್ತರನ್ನು ಅದರ ಬಗ್ಗೆ ಪ್ರತಿಕ್ರಿಯಿಸಲು ಪ್ರಚೋದಿಸಿದೆ.

ಚಾನ್ಸೆಲ್- ಪಿಕೆಟಿ ಅವರ ಅಧ್ಯಯನ ವರದಿಯ ಪ್ರಕಾರ ಕಳೆದ ಮೂರು ದಶಕಗಳಲ್ಲಿ ಜಗತ್ತಿನ ಇತರ ದೇಶಗಳಿಗೆ ಹೋಲಿಸಿದಲ್ಲಿ ಭಾರತದ ಒಟ್ಟಾರೆ ರಾಷ್ಟ್ರೀಯ ಆದಾಯದಲ್ಲಿ ಶೇ.೧ರಷ್ಟು ಮೇಲ್ವರ್ಗದ ಪಾಲು ಅತಿ ವೇಗವಾಗಿ ಹೆಚ್ಚುತ್ತಾಹೋಗಿದೆ. ಭಾರತದ ರಾಷ್ಟ್ರೀಯ ಆದಾಯದಲ್ಲಿ ಭಾರತದ ಶೇ.೧ರಷ್ಟು ಮೇಲ್ವರ್ಗದವರ ಪಾಲು ೧೯೮೨-೮೩ರಲ್ಲಿ ಶೇ.೬.೨ರಷ್ಟಿದ್ದರೆ ೨೦೧೩-೧೪ರಲ್ಲಿ ಅದು ಶೇ.೨೧.೭ಕ್ಕೇರಿತ್ತು. ವಾಸ್ತವವಾಗಿ ಇದು ೧೯೨೨ರಲ್ಲಿ ಭಾರತದಲ್ಲಿ ಆದಾಯ ತೆರಿಗೆಯನ್ನು ಜಾರಿಗೊಳಿಸಿದ ನಂತರದ ಇಡೀ ಅವಧಿಯಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣವಾಗಿದೆ. ಬ್ರಿಟಿಷರ ಆಡಳಿತದ ಅವಧಿಯಲ್ಲೂ ದೇಶದ ರಾಷ್ಟ್ರೀಯ ಆದಾಯದಲ್ಲಿ ಶೇ.೧ರಷ್ಟು ಜನರ ಪಾಲು ಅತಿ ಹೆಚ್ಚೆಂದರೆ ೧೯೩೯-೪೦ರಲ್ಲಿ ಶೇ.೨೦.೭ರಷ್ಟನ್ನು ಮಾತ್ರ ಮುಟ್ಟಿತ್ತು.  

ಇದಲ್ಲದೆ ಭಾರತದ ಈ ಭಯಾನಕ ಅಸಮಾನ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಕಣ್ಣಿಗೆ ರಾಚುವಂಥ ಇನ್ನೂ ಹಲವಾರು ಅಂಶಗಳಿವೆ. ೨೦ ವರ್ಷಕ್ಕಿಂತ ಮೇಲ್ಪಟ್ಟ ಭಾರತದ ಕೆಳಹಂತದ ಶೇ.೫೦ರಷ್ಟು ಜನತೆಯ ಆದಾಯ ೧೯೮೦-೨೦೧೪ರ ಅವಧಿಯಲ್ಲಿ ಶೇ.೮೯ರಷ್ಟು ಮಾತ್ರ ವೃದ್ಧಿಯಾಯಿತು. ಈ ಕೆಳಹಂತದ ಶೇ. ೫೦ಕ್ಕಿಂತ ಮೇಲಿರುವ ಆದರೆ ಶೇ.೧೦ರಷ್ಟು ಮೇಲ್ವರ್ಗಕ್ಕಿಂತ ಕೆಳಗಿರುವ ಶೇ.೪೦ರಷ್ಟು ಮಧ್ಯಮ ಹಂತದ ಜನತೆಯ ಆದಾಯ ಶೇ.೯೩ರಷ್ಟು ಬೆಳೆಯಿತು. ಇನ್ನೂ ಶೇ.೧೦ರಷ್ಟು ಮೇಲ್ವರ್ಗದವರ ಆದಾಯವು ಶೇ.೩೯೪ರಷ್ಟು, ಅದರಲ್ಲಿನ ಶೇ.೧ ರಷ್ಟು ಜನರ ಆದಾಯವು ಶೇ.೭೫೦ರಷ್ಟು ಮತ್ತು ಅದರಲ್ಲಿನ ಶೇ.೦.೧ರಷ್ಟು ಜನರ ಆದಾಯ ಶೇ. ೧೧೩೮ರಷ್ಟು, ಅದರೊಳಗಿನ ಶೇ.೦.೦೧ರಷ್ಟು ಜನರ ಆದಾಯ ಶೇ.೧೮೩೪ರಷ್ಟು ಮತ್ತು ಅದರೊಳಗಿನ ಶೇ.೦.೦೦೧ರಷ್ಟು ಜನರ ಆದಾಯ ಶೇ.೨೭೨೬ರಷ್ಟು ಬೆಳೆಯಿತು.

ಹೀಗಾಗಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಅಸಮಾನತೆಯುಳ್ಳ ರಾಷ್ಟ್ರವಾಗಿ ಬೆಳೆಯುತ್ತಲಿದೆ. ಅದರ ಶೇ.೧ರಷ್ಟು ಜನರ ಆದಾಯ ಶೇ.೭೫೦ರಷ್ಟು ಬೆಳೆದರೆ ಉಳಿದ ಶೇ.೯೯ ರಷ್ಟು ಜನಸಮುದಾಯದ ಆದಾಯ ಶೇ.೧೮೭ರಷ್ಟು ಮಾತ್ರ ವೃದ್ಧಿಗೊಂಡಿದೆ. ಮತ್ತು ಚೀನಾದಲ್ಲಿ ಆ ದೇಶದ ಕೆಳಹಂತದ ಶೇ.೫೦ರಷ್ಟು ಜನತೆಯ ಆದಾಯ ಶೇ.೩೧೨ರಷ್ಟು ಬೆಳದರೆ ಭಾರತದಲ್ಲಿ ಕೆಳಹಂತದ ಶೇ.೫೦ರಷ್ಟು ಜನರ ಆದಾಯ ಶೇ. ೮೯ರಷ್ಟು ಮಾತ್ರ ಬೆಳೆದಿದೆ. ಅಷ್ಟುಮಾತ್ರವಲ್ಲದೆ ಮಧ್ಯಮ ಹಂತದ ಶೇ.೪೦ರಷ್ಟು ಜನರ ಆದಾಯ ಚೀನಾದಲ್ಲಿ ಶೇ. ೬೧೫ರಷ್ಟು ಬೆಳೆದರೆ ಭಾರತದಲ್ಲಿ ಆ ಹಂತದ ಜನರ ಆದಾಯ ಶೇ.೯೩ರಷ್ಟು ಮಾತ್ರ ವೃದ್ಧಿಗೊಂಡಿದೆ. ಹಾಗೂ ಭಾರತದಲ್ಲಿನ ಅತ್ಯಂತ ಮೇಲ್ವರ್ಗದ ಶೇ.೦.೦೦೧ರಷ್ಟು ಜನರ ಆದಾಯ ಶೇ.೨,೭೨೬ರಷ್ಟು ಏರಿದರೆ ಚೀನಾದಲ್ಲಿ ಅದು ಸ್ವಲ್ಪ ಕಡಿಮೆ ಶೇ. ೨೫೪೬ರಷ್ಟಿತ್ತು.

ಕಳೆದ ಮೂರು ದಶಕದಲ್ಲಿ ಚೀನಾ ಮತ್ತು ಭಾರತಗಳೆರಡೂ ಅತ್ಯಂತ ಅಸಮಾನ ಅಭಿವೃದ್ಧಿ ಮಾದರಿಯನ್ನು ಅನುಸರಿಸಿವೆ. ಆದರೆ ಚೀನಾವು ಭಾರತದಂತೆ ಮುಕ್ತವಾದ ಸಾರ್ವಜನಿಕ ಅಭಿಪ್ರಾಯಕ್ಕೆ ಅವಕಾಶವಿರುವ ಪ್ರಜಾತಾಂತ್ರಿಕ ರಾಷ್ಟ್ರವಲ್ಲದಿದ್ದರೂ ೧೯೮೦-೨೦೧೪ರ ನಡುವೆ ಅದರ ಅಭಿವೃದ್ಧಿ ಗತಿಯು ಭಾರತಕ್ಕಿಂತ ಕಡಿಮೆ ಅಸಮಾನವಾಗಿದೆ. ಚೀನಾದ ಶೇ.೯೦ರಷ್ಟು ಜನ ಆ ದೇಶದ ಆದಾಯ ಅಭಿವೃದ್ಧಿಯಲ್ಲಿ ಶೇ.೫೬ರಷ್ಟನ್ನು ಹಂಚಿಕೊಂಡರೆ ಭಾರತದಲ್ಲಿ ಕೆಳಹಂತದ ಶೇ. ೯೦ರಷ್ಟು ಜನರು ದೇಶದ ಆದಾಯದ ಶೇ.೩೪ರಷ್ಟು ಮಾತ್ರ ಪಾಲು ಪಡೆದುಕೊಂಡಿದ್ದಾರೆ. ಚೀನಾ, ಫ್ರಾನ್ಸ್ ಮತ್ತು ಅಮೆರಿಕಕ್ಕೆ ಹೋಲಿಸಿದಲ್ಲಿ ಭಾರತದ ಮಧ್ಯಮ ಹಂತದಲ್ಲಿರುವ ಶೇ. ೪೦ರಷ್ಟು ಜನರು  ಈ ಅವಧಿಯಲ್ಲಿ ಪಡೆದುಕೊಂಡಿದ್ದು ಅತ್ಯಂತ ಕಡಿಮೆ. ಹೀಗಾಗಿ ಈ ಅವಧಿಯಲ್ಲಿ ಭಾರತವು ಪ್ರಕಾಶಿಸಿದ್ದು ಮತ್ತು ಈ ಅವಧಿಯಲ್ಲಿನ ಭಾರತದ ರಾಷ್ಟ್ರೀಯ ಆದಾಯದ ಅಧಿಕ ಪಾಲನ್ನು ಕಬಳಿಸಿರುವುದು ಮಧ್ಯಮವರ್ಗವಲ್ಲ. ಬದಲಿಗೆ ಶೇ. ೧೦ರಷ್ಟು ಮೇಲ್ವರ್ಗದ ಜನರು. ಅಂದರೆ ದೇಶದ ಕೇವಲ ೮ ಕೋಟಿ ಜನರು ಭಾರತದ ರಾಷ್ಟ್ರೀಯ ಆದಾಯದ ಅಭಿವೃದ್ಧಿಯ ಶೇ. ೬೬ರಷ್ಟನ್ನು ಕಬಳಿಸಿದ್ದಾರೆ.

ಭಾರತವು ಪ್ರಕಾಶಿಸುತ್ತಿರುವುದು ಶ್ರೀಮಂತರಿಗೆ ಮಾತ್ರ ಎಂಬುದು ಎಲ್ಲರು ಬಲ್ಲ ಸತ್ಯವೇ ಆಗಿದ್ದರೂ ಚಾನ್ಸೆಲ್-ಪಿಕೆಟಿಯವರ ಅಧ್ಯಯನವು ಬಲ್ಲ ಸತ್ಯಕ್ಕೆ ಅಂಕಿಅಂಶದ ಪುರಾವೆಯನ್ನು ಒದಗಿಸಿ ಸತ್ಯವನ್ನು ಕಣ್ಣಿಗೆ ರಾಚುವಂತೆ ಮುಂದಿರಿಸಿದೆ. ಆದರೂ ಈ ಅಧ್ಯಯನವು ಆದಾಯ ಅಸಮಾನತೆಯನ್ನು ಲೆಕ್ಕ ಹಾಕುವಾಗ ಕಂಡಸತ್ಯದ ಹಂತದಿಂದ ಮೇಲೇಳುವುದಿಲ್ಲ. ದತ್ತಾಂಶಗಳು ತನ್ನಂತೆ ತಾನೇ ಏನನ್ನೂ ಹೇಳುವುದಿಲ್ಲ; ಅದನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಲು ಒಂದು ಸಿದ್ಧಾಂತದ ಸಹಾಯ ಬೇಕೇಬೇಕು. ಮೇಲಾಗಿ ಈ ವಿಷಯದಲ್ಲಿ ಬಹಳಷ್ಟು ದತ್ತಾಂಶಗಳು ಆಡಳಿತ ವ್ಯವಸ್ಥೆಯ ಎದಿರುಧಿಕೃತವಾಗಿ ಮಾಡಲಾಗಿರುವ ತೆರಿUಘೋಷಣೆಗಳನ್ನು ಆಧರಿಸಿವೆ. ಸಕಾರಣವಾಗಿ ಸಂದೇಹಿಸುವಂತೆ ಅವೆಂದೂ ಸತ್ಯವಾಗಿರುವುದಿಲ್ಲ. ಹಾಗೂ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳನ್ನು ನಡೆಸುವ ಅತಿ ಶ್ರೀಮಂತರು ವ್ಯಕ್ತಿಗಳಾಗಿ ತೋರಿಸುವ ಆದಾಯಗಳಲ್ಲೂ ಮತ್ತು ತಾವು ನಿಯಂತ್ರಿಸುವ ಕಂಪನಿಗಳದ್ದೆಂದು ತೋರಿಸುವ ಆದಾಯಗಳಲ್ಲೂ ಕೃತಕ ವ್ಯತ್ಯಾಸಗಳಿರುತ್ತವೆ. ಉದಾಹರಣೆಗೆ ಅವರ ಬಹಳಷ್ಟು ವೈಯಕ್ತಿಕ ಮತ್ತು ಬಳಕೆ ವೆಚ್ಚಗಳನ್ನು ಕಂಪನಿಯ ವೆಚ್ಚಗಳನ್ನಾಗಿ ತೋರಿಸಲಾಗುತ್ತದೆ. ಶ್ರೀಮಂತರು ಮಾಡುವ ತೆರಿಗೆ ವಂಚನೆಯು ಪ್ರಾಯಶಃ ಭಾರತದ ಅರ್ಥಿಕತೆಯ ನಿರಂತರ ಗುಣಲಕ್ಷಣವಾಗಲಿದೆ ಯೆಂದು ೧೯೪೯ರಲ್ಲಿ ಖ್ಯಾತ ಅರ್ಥಶಾಸ್ತ್ರಜ್ನ ಡಿ. ಆರ್ ಗಾಡ್ಗೀಲ್ ಹೇಳಿದ ಮಾತುಗಳು (ಪೆಸಿಫಿಕ್ ಅಫೈರ್ಸ್, ಜೂನ್ ೧೯೪೯, ಪು ೧೨೨) ಇಡೀ ಅಧ್ಯಯನದ ಅವಧಿಗೆ ಅನ್ವಯವಾಗುತ್ತದೆ. ಹೀಗಾಗಿ ಚಾನ್ಸೆಲ್-ಪಿಕೆಟಿಯವರು ಭಾರತದಲ್ಲಿರುವ ಅಸಮಾನತೆಯ ಬಗ್ಗೆ ಮಾಡಿರುವ ಅಂದಾಜುಗಳು ವಾಸ್ತವಕ್ಕಿಂತ ಕಡಿಮೆಯೇ ಇರಬಹುದೆಂದು ಪರಿಗಣಿಸಬಹುದು.

ದೇಶದ ಶೇ.೧೦ರಷ್ಟು ಮೇಲ್ವರ್ಗದ ಅದರಲ್ಲೂ ಶೇ. ೧ರಷ್ಟು ಜನರ ಬಹಳಷ್ಟು ಆದಾಯವು  ವ್ಯವಹಾರಗಳಿಂದ ಬಂದ ಲಾಭ, ಶೇರು ಬಂಡವಾಳಗಳಿಂದ ಮತ್ತು ಬಾಂಡುಗಳಿಂದ ಪಡೆದ ಡಿವಿಡೆಂಡ್ ಮತ್ತು ಬಡ್ಡಿ, ಭೂಮಿ ಮತ್ತು ಕಟ್ಟಡಗಳಿಂದ ಪಡೆದ ಬಾಡಿಗೆಗಳು ಮತ್ತು ಉದ್ಯಮಗಳ ಆಡಳಿತಾತ್ಮಕ ನಿಯಂತ್ರಣಗಳಿಂದ ಪಡೆದುಕೊಳ್ಳುವ ಸಂಬಳ ಮತ್ತು ಬೋನಸ್‌ಗಳೆಂಬ ಘಟಕಾಂಶಗಳಿಂದ ಕೂಡಿರುತ್ತದೆ. ಇದರಲ್ಲಿ ಕೊನೆಯದು ಕೆಲದಿಂದ ಬಂದ ಆದಾಯವಲ್ಲ. ಬದಲಿಗೆ ಅದು ಆಸ್ತಿಪಾಸ್ತಿಗಳಿಂದ ಬರುವ ಆದಾಯ ಸ್ವರೂಪದ್ದಾಗಿರುತ್ತದೆ. ಮೇಲಾಗಿ ಕಳೆದ ಮೂರು ದಶಕಗಳಲ್ಲಿ ಕಾರ್ಮಿಕರ ಉತ್ಪಾದಕತೆಯ ಹೆಚ್ಚಳಕ್ಕೆ ಹೋಲಿಸಿ ನೋಡಿದಲ್ಲಿ ಕಾರ್ಮಿಕರ ನೈಜ ಕೂಲಿದರವು ಕಡಿಮೆಯಾಗಿರುತ್ತದೆ. ಆದ್ದರಿಂದ ಒಟ್ಟಾರೆ ಮೌಲ್ಯ ವರ್ಧನೆಯಲ್ಲಿ ಆಸ್ತಿ ಆದಾಯದ ಪ್ರಮಾಣವು ಶ್ರಮದ ಪ್ರಮಾಣಕ್ಕಿಂತ ಹೆಚ್ಚೇ ಇರುತ್ತದೆ. ಮತ್ತು ಬಂಡವಾಳದ ಏಕಸ್ವಾಮ್ಯ ಅಧಿಕಾರವನ್ನು ತಡೆಗಟ್ಟುವ ಕ್ರಮಗಳನ್ನು ಕೈಬಿಟ್ಟಿರುವುದರಿಂದ  ಈ ಆಸ್ತಿ ಆಧಾರಿತ ಲಾಭಗಳು  ಕೂಡಾ ದೊಡ್ಡ ದೊಡ್ಡ ಏಕಸ್ವಾಮ್ಯ ಕಂಪನಿಗಳಲ್ಲಿ ಕೇಂದ್ರೀಕೃತಗೊಂಡು ಸಣ್ಣಪುಟ್ಟ ಉದ್ಯಮಗಳಿಗೆ ಹೊಡೆತ ನೀಡಿವೆ.  

ಈ ಸಂದರ್ಭದಲ್ಲಿ ಸಾರ್ವಜನಿಕ ವಲಯದ ಆಸ್ತಿಪಾಸ್ತಿಗಳು, ಖನಿಜ ಮತ್ತು ಅರಣ್ಯ ಸಂಪತ್ತುಗಳು, ಭೂಮಿ ಮತ್ತು ಟೆಲಿಕಾಂ ಸ್ಪೆಕ್ಟ್ರಂಗಳು ದೊಡ್ಡ ದೊಡ್ಡ ಉದ್ಯಮಪತಿಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಒದಗುತ್ತಿರುವುದನ್ನು ಖಂಡಿತಾ ಮರೆಯಬಾರದು. ಒಟ್ಟಾರೆಯಾಗಿ ಇಂದು, ಒಂದು ಆರ್ಥಿಕ ಕುಲೀನರ ಆಳ್ವಿಕೆಯು ಕಾರ್ಪೊರೇಟ್ ಬಂಡವಾಳದ ನೇತೃತ್ವದಲ್ಲಿ ಉದ್ಯೋಗರಹಿತ ಅಭಿವೃದ್ಧಿಯ ಯಜಮಾನಿಕೆಯನ್ನು ವಹಿಸಿಕೊಂಡಿರುವುದನ್ನು ಕಾಣಬಹುದು. ಖ್ಯಾತ ಅರ್ಥಶಾಸ್ತ್ರಜ್ನ ಅಮಿತ್ ಬಾಧುರಿಯವರು ಇಂಥಾ ಅಭಿವೃದ್ಧಿಯು ಎಂಥಾ ಆರ್ಥಿಕ ಮಾದರಿಯನ್ನು ಸೃಷ್ತಿಸುತ್ತದೆಯೆಂಬುದನ್ನು ಹೀಗೆ ಸರಳವಾಗಿ ವಿವರಿಸುತ್ತಾರೆ: ತಲಾ ಎರಡು ಘಟಕಗಳಷ್ಟು ಉತ್ಪಾದನೆ ಮಾಡುತ್ತಿದ್ದ ೧೦ ಜನರು ತಮ್ಮ ಸಣ್ಣ ಸರಕು ಆರ್ಥಿಕತೆಯಿಂದ ಸ್ಥಳಂತರಗೊಳ್ಳುತ್ತಾರೆಂದು ಭಾವಿಸಿ. ಅವರಲ್ಲಿ ಐವರು ತಲಾ ಎಂಟು ಘಟಕಗಳಷ್ಟು ಕಾರ್ಮಿಕ ಉತ್ಪಾದಕತೆಯನ್ನು ಹೊಂದಿರುವ ಕಾರ್ಪೊರೇಟ್ ವಲಯದಲ್ಲಿ ಕೆಲಸ ಕಂಡುಕೊಳ್ಳುತ್ತಾರೆ. ಆಗ ಒಟ್ಟಾರೆ ಉದ್ಯೋಗ ಮತ್ತು ಜೀವನೋಪಾಯವನ್ನು ಕಂಡುಕೊಳ್ಳುವ ಸಾಧ್ಯತೆಗಳು ಅರ್ಧದಷ್ಟು ಕಡಿಮೆಯಾದರೂ ಉತ್ಪಾದನೆಯು ಮಾತ್ರ ದ್ವಿಗುಣಗೊಂಡಿರುತ್ತದೆ. ಹಾಗೂ ಕಾರ್ಪೊರೇಟ್ ಹೂಡಿಕೆಯನ್ನು ಉತ್ತೇಜಿಸಲು ಭೂಮಿಯನ್ನು ಒಳಗೊಂಡಂತೆ ಇತರ ಪ್ರಾಕೃತಿಕ ಸಂಪನ್ಮೂಲಗಳನ್ನು ಅತ್ಯಂತ ಅಗ್ಗದ ಬೆಲೆಗೆ ಕಾರ್ಪೊರೇಟ್ ಉದ್ಯಮಗಳಿಗೆ ಪರಭಾರೆ ಮಾಡಲಾಗುತ್ತದೆ. ಪ್ರತಿಯಾಗಿ ಕಾರ್ಪೊರೇಟ್ ಉದ್ಯಮಗಳು ತಮಗೆ ದುಗ್ಗಾಣಿ ಬೆಲೆಗೆ ಸಂಪನ್ಮೂಲಗಳನ್ನು ಒದಗಿಸಿಕೊಟ್ಟ ರಾಜಕೀಯ ಪಕ್ಷಗಳಿಗೆ ಉದಾರವಾಗಿ ದೇಣಿಗೆ ನೀಡುತ್ತವೆ. ಈ ಪ್ರಕ್ರಿಯೆಯಲ್ಲಿ ಇಂಥಾ ದೇಣಿಗೆಗಳನ್ನು ಪಡೆದುಕೊಳ್ಳುವ ಅವಕಾಶವಿಲ್ಲದ ವ್ಯಕ್ತಿಗಳಿಗೆ ಮತ್ತು ಪಕ್ಷಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದೇ ದುಸ್ತರವಾಗುತ್ತದೆ. ಹೀಗೆ ಕಾರ್ಪೊರೇಟ್ ಬಂಡವಾಳಶಾಹಿಯೇ ಉದ್ಯೋಗ ರಹಿತ ಆರ್ಥಿಕತೆಯನ್ನೂ ಮುನ್ನಡೆಸುತ್ತದೆ ಮತ್ತು ಪ್ರಜಾತಂತ್ರದ ಆಳ್ವಿಕೆಯನ್ನು ನಿಯಂತ್ರಿಸುತ್ತವೆ. (ಆನ್ ಡೆಮಾಕ್ರಸಿ, ಕಾರ್ಪೊರೇಷನ್ಸ್ ಅಂಡ್ ಇನೀಕ್ವಾಲಿಟಿ, ಇಪಿಡಬ್ಲ್ಯೂ, ೨೬ ಮಾರ್ಚ್ ೨೦೧೬).

ಇಂದು ಭಾರತದಲ್ಲಿರುವ ಅಸಮಾನತೆಯು ಬ್ರಿಟಿಷ್ ಕಾಲದ ಅಸಮಾನತೆಯ ಮಟ್ಟವನ್ನು ತಲುಪಿರುವುದು ಮಾತ್ರವಲ್ಲದೆ ಅದನ್ನು ಮೀರಿ ಕೂಡ ಬೆಳೆದಿದೆ. ಇದು ವಸಾಹತುಕಾಲದಲ್ಲಿ ಜನ್ಮ ತಳೆದ ಬಂಡವಾಳಶಾಹಿಯೊಂದರ ಆಳ್ವಿಕೆಯಲ್ಲಿರುವ ಭಾರತದ ದುರಂತವಾಗಿದೆ. ಈ ಬಂಡವಾಳಶಾಹಿಯು ೧೯ನೇ ಶತಮಾನದ ಅಂತ್ಯ ಮತ್ತು ೨೦ನೇ ಶತಮಾನದ ಪ್ರಾರಂಭದ ಅವಧಿಯ ಕೊಳೆಯುತ್ತಿದ್ದ ವಸಾಹತುಶಾಹಿ ಪ್ರಕ್ರಿಯೆಯ ಉತ್ಪನ್ನವಾಗಿದೆ. ಆ ಕಾಲಘಟ್ಟದಲ್ಲಿ ದೇಶದ ನೈಜ ತಲಾವಾರು ಆದಾಯ ಕುಸಿಯತೊಡಗಿತ್ತಲ್ಲದೆ ಲಕ್ಷಾಂತರ ಜನ ಮಾನವ ನಿರ್ಮಿತ ಕ್ಷಾಮಗಳಿಗೆ ಬಲಿಯಾಗಿ ಜೀವತೆರುತ್ತಿದ್ದರು. ಆದರೆ ಶ್ರೀಮಂತರ ಬಳಿ ಮಾತ್ರ ಮತ್ತಷ್ಟು ಸಂಪತ್ತು ಶೇಖರಣೆಯಾಗುತ್ತಲೇ ಹೋಯಿತು.

 ಆಗ, ವಸಾಹತುವಾದ ಬರ್ಬರತೆ ಮತ್ತು ಜನಾಂಗೀಯ ಶ್ರೇಷ್ಟತೆಯ ಮಾರಕ ಸಿದ್ಧಾಂತ; ಈಗ, ಅರೆ ಫ್ಯಾಸಿಸಮ್ಮಿನ ಕ್ರೌರ್ಯ ಮತ್ತು ಭಾರತೀಯ ನಾಜಿಸಂ ಆಗಿರುವ ಹಿಂದೂತ್ವ ಸಿದ್ಧಾಂತದ ಹಾನಿಕಾರಕ ಪರಿಣಾಮಗಳು. ಹಿಂದೂತ್ವ ಸಿದ್ಧಾಂತವು ಒಂದು ಕಡೆ ಸಾಂಸ್ಕೃತಿಕ ಪ್ರತಿಗಾಮಿತನದ ಕಡೆಗೆ ಸಮಾಜವನ್ನು ಕೊಂಡೊಯ್ಯುತ್ತಿದ್ದರೆ ಮತ್ತೊಂದು ಕಡೆ ರಾಜಕೀಯ ಧಾರೆಗಳಲ್ಲಿ ಅತ್ಯಂತ ಬಲಪಂಥೀಯವೂ ಆಗಿದೆ. ಅದರ ಮಾತೃಶಕ್ತಿಯಾಗಿರುವ  ಸಂಘಪರಿವಾರವು ತನ್ನ ಗುರಿಗಳನ್ನು ಈಡೇರಿಸಿಕೊಳ್ಳಲು ಚುನಾವಣ ರಾಜಕಾರಣ ಮತ್ತು ಕಾನೂನು ಬಾಹಿರ ಹಿಂಸೆಗಳೆಂಬ ಎರಡು ಮಾರ್ಗಗಳ ಮಿಶ್ರಣವನ್ನು ಅನುಸರಿಸುತ್ತಿದೆ. ಅಷ್ಟು ಮಾತ್ರವಲ್ಲದೆ ಇಂದು ಚಾನ್ಸೆಲ್-ಪಿಕೆಟಿ ಅಧ್ಯಯನ ವರದಿಯು ಬಯಲುಗೊಳಿಸಿರುವಂಥ ಅಸಮಾನ ಅಭಿವೃದ್ಧಿ ಮಾದರಿಯನ್ನು ಯಾರೆಲ್ಲ ವಿರೋಧಿಸುತ್ತಾರೆಂದು ಅದು ಭಾವಿಸುವತ್ತದೋ ಅಂಥ ಎಲ್ಲಾ ಶಕ್ತಿಗಳನ್ನು ಯಾವುದೇ ಮಾರ್ಗದಿಂದಲಾದರೂ ಮಟ್ಟಹಾಕಲು ಅದು ಸನ್ನದ್ಧವಾಗಿದೆ. 

Updated On : 13th Nov, 2017

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top