ISSN (Print) - 0012-9976 | ISSN (Online) - 2349-8846

ಅಸ್ವಸ್ಥಗೊಂಡಿರುವ ಸ್ಥೂಲ ಆರ್ಥಿಕತೆ (ಮ್ಯಾಕ್ರೋ ಎಕಾನಮಿ)

ಅಬ್ಬರದ ಘೋಷಣೆಗಳನ್ನು ಮಾಡಿ ಮೂರು ವರ್ಷಗಳಾದ ನಂತರವೂ ಮೋದಿ ಸರ್ಕಾರ ಸಾಧಿಸಿರುವುದು ಮಾತ್ರ ಅತ್ಯಲ್ಪ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

ಅಧಿಕಾರಕ್ಕೇರಿದ ನಲವತ್ತು ತಿಂಗಳ ನಂತರ ನರೇಂದ್ರ ಮೋದಿ ಸರ್ಕಾರವು ಭಾರತದ ಆರ್ಥಿಕತೆಯು ಹತಾಶ ಪರಿಸ್ಥಿತಿಯಲ್ಲಿದೆಯೆಂದು ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿ ಬಂದೊದಗಿದೆ. ಇದು ತೀರಾ ಇತ್ತೀಚೆಗೆ ಆದರೆ ಅತ್ಯಂತ ತಡವಾಗಿ ಘೋಷಿಸಲಾದ ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಪರಿಷತ್ತಿನ  (ಎಕಾನಮಿಕ್ ಅಡ್ವೈಸರಿ ಕೌನ್ಸಿಲ್- ಇಎಸಿ)ರಚನೆಯಲ್ಲೂ ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದೆ. ಹಾಗೆ ನೋಡಿದರೆ ಇನ್ನು ಏನೇ ಮಾಡಬೇಕೆಂದರೂ ಕೇಂದ್ರ ಸರ್ಕಾರದ ಬಳಿ ಉಳಿದಿರುವುದು ಒಂದೇ ಒಂದು ಪೂರ್ಣ ಪ್ರಮಾಣದ ಬಜೆಟ್ ಮಾತ್ರ. ೨೦೧೯ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಅದು ೧೦ ರಾಜ್ಯಗಳಲ್ಲಿ ೧೨೯ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ೧೨೧೪ ವಿಧಾನ ಸಭಾ ಕ್ಷೇತ್ರಗಳಲ್ಲಿ ಚುನಾವಣೆಗಳನ್ನು ಎದುರಿಸಬೇಕಿದೆ. ಈವರೆಗಿನ ತನ್ನ ಅಧಿಕಾರವಧಿಯಲ್ಲಿ ಸರ್ಕಾರವು ದೊಡ್ಡದೊಡ್ಡ ಘೊಷಣೆಗಳನ್ನು ಮತ್ತು ಅಬ್ಬರದ ಪ್ರಚಾರಗಳನ್ನು ಮಾಡುತ್ತ ಕಾಲಕಳೆಯಿತೇ ವಿನಃ ತೋರಿಸಿಕೊಳ್ಳಬಹುದಾದಂಥ ಯಾವುದೇ ದೊಡ್ಡ ಸಾಧನೆಗಳನ್ನು ಮಾಡಿಲ್ಲ. ಇದು ಸರ್ಕಾರಕ್ಕೆ ಒಂದು ಬಗೆಯ ತುರ್ತನ್ನು ಹುಟ್ಟಿಸಿರುವುದು ಅರ್ಥವಾಗುವಂಥದ್ದೇ.

ಹಾಲಿ ಸರ್ಕಾರವು ೨೦೧೪ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಗಣನೀಯವಾಗಿ ಕೆಳಗಿಳಿಯಿತು. ಇದರಿಂದಾಗಿ ಹಣದುಬ್ಬರವನ್ನು ಇಳಿಸಲು ಸಾಧ್ಯವಾಯಿತು. ಹಣದುಬ್ಬರವು ಚುನಾವಣೆಯಲ್ಲಿ ಅತ್ಯಂತ ಸ್ಪೋಟಕ ವಿಷಯವಾಗಿತ್ತಾದ್ದರಿಂದ ಸರ್ಕಾರವು ಹಣದುಬ್ಬರವನ್ನು ಇಳಿಸಿದರ ಎಲ್ಲಾ ಶ್ರೇಯಸ್ಸು ತನ್ನದೇ ಎಂದು ಕೊಚ್ಚಿಕೊಂಡಿತು. ಆಗಿನಿಂದ ತೈಲ ಬೆಲೆಗಳು ಕೆಳಮಟ್ಟದಲ್ಲೇ ಇದ್ದರೂ ಇದೇ ಅವಧಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆಯನ್ನು ಹೆಚ್ಚಿಸುವ ಮೂಲಕ ಸರ್ಕಾರವು ಅಧಿಕ ಆದಾಯವನ್ನು ಗಳಿಸಿಕೊಂಡಿದೆ. ಭಾರತೀಯ ತೈಲ ಆಮದಿನ ವೆಚ್ಚ ಇದೀಗ ಸ್ವಲ್ಪ ಹೆಚ್ಚಾಗುವಂತೆ ಕಂಡುಬರುತ್ತಿದ್ದರೂ ಯಾವ ಕಾರಣಕ್ಕೂ ಮೊದಲಿನಷ್ಟು ಮಟ್ಟಕ್ಕೆ ಹೆಚ್ಚುವುದಿಲ್ಲವೆಂದು ನಿರೀಕ್ಷಿಸಲಾಗಿದೆ. ಅಲ್ಲದೆ ಉತ್ತಮ ಮಾನ್ಸೂನ್ ಮಳೆಯಿಂದಾಗಿ ಕೃಷಿ ಉತ್ಪಾದನೆ ಹೆಚ್ಚಾಗಿದೆ. ಬಳಕೆದಾರರ ಸೂಚ್ಯಂಕದಲ್ಲಿನ ಆಹಾರ ಮತ್ತು ಪಾನೀಯಗಳ ಸೂಚ್ಯಂಕವು ನಗರ ಮತ್ತು ಗ್ರಾಮಿಣ ಪ್ರದೇಶಗಳಿಗೆ ಒಟ್ಟು ಸೇರಿ ೨೦೧೪-೧೫ರಲ್ಲಿ ಶೇ.೬.೫ರ ಸರಾಸರಿಯಲ್ಲಿತ್ತು. ಹಾಗೂ ಇದು ೨೦೧೬-೧೭ರಲ್ಲಿ ಶೇ.೫.೧ರ ಸರಾಸರಿಯಲ್ಲಿತ್ತು. ಹಾಗಿದ್ದರೂ ೨೦೧೬ರ ಜುಲೈನಲ್ಲಿ ಮತ್ತು ೨೦೧೭ರ ಜನವರಿಯಲ್ಲಿ ಬೆಲೆ ಏರಿಕೆ ಕಂಡು ಬಂದಿತ್ತು (೨೦೧೫ರ ಮೇ-ಜೂನ್ ತಿಂಗಳಿನಲ್ಲೂ ದ್ವಿದಳ ಧಾನ್ಯಗಳ ಬೆಲೆ ಏರಿಕೆಯಾಗಿತ್ತು). ಇಷ್ಟೆಲ್ಲಾ ಅನುಕೂಲಕರ ವಾತಾವರಣಗಳಿದ್ದರೂ ಸರ್ಕಾರವು ಅದರ ಸದುಪಯೋಗ ಮಾಡಿಕೊಳ್ಳಲಿಲ್ಲ.

ಒಟ್ಟಾರೆ ಅಂತರಿಕ ಉತ್ಪಾದನೆಯ (ಜಿಡಿಪಿ) ಅಭಿವೃದ್ಧಿಯ ದರವು ೨೦೧೪-೧೫ರ ಏಪ್ರಿಲ್-ಜೂನ್‌ರ ಮೊದಲ ತ್ರೈಮಾಸಿಕದಲ್ಲಿ ಹಿಂದಿನ ವರ್ಷದ ಹೋಲಿಕೆಯಲ್ಲಿ ಶೇ.೭.೫ರಷ್ಟಿತ್ತು; ಆದರೆ ೨೦೧೭-೧೮ರ ಮೊದಲ ತ್ರೈಮಾಸಿಕದಲ್ಲಿ ಅದು ಶೇ.೫.೭ಕ್ಕೆ ಕುಸಿದಿತ್ತು. ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು ೨೦೧೪-೧೫ರಲ್ಲಿ ಶೇ. ೫ರಷ್ಟಿದ್ದದ್ದು ೨೦೧೫-೧೬ರಲ್ಲಿ ಶೇ.೩.೩ಕ್ಕೆ ಕುಸಿದು ೨೦೧೬-೧೭ರಲ್ಲಿ ಶೇ.೪.೬ಕ್ಕೆ ಏರಿ ಸ್ವಲ್ಪ ಮಾತ್ರ ಚೇತರಿಕೆ ಕಂಡಿತು. ಮತ್ತೊಂದು ಕಡೆ ಬಂಡವಾಳ ಹೂಡಿಕೆಯು ಸಂಭವಿಸುತ್ತಿಲ್ಲ. ಒಟ್ಟಾರೆ ನಿಶ್ಚಿತ ಬಂಡವಾಳ ಕ್ರೂಢೀಕರಣದ ದರವು (ಗ್ರಾಸ್ ಫಿಕ್ಸೆಡ್ ಕ್ಯಾಪಿಟಲ್ ಫಾರ್ಮೇಷನ್) ಜಾಗತಿಕ ಆರ್ಥಿಕ ಹಿಂದ್ಸರಿತದ ಅವಧಿಯ ನಂತರದ ೨೦೦೭-೦೯ರ ಅವಧಿಯಲ್ಲಿ ಕಂಡ ಕುಸಿತಕ್ಕಿಂತಲೂ ಕಡಿಮೆ ದರದಲ್ಲಿದೆ. ಒಟ್ಟಾರೆ ಅಂತರಿಕ ಉಳಿತಾಯವು ಕುಸಿಯುತ್ತಿದೆ. ಈ ಉಳಿತಾಯವು ಮುಖ್ಯವಾಗಿ ಕೌಟುಂಬಿಕ ಉಳಿತಾಯಗಳಿಂದಲೇ ಬರುತ್ತಿದ್ದು ೨೦೦೫-೦೬ರಲ್ಲಿ ಅದು ಒಟ್ಟಾರೆ ದೇಶದ ಉಳಿತಾಯದಲ್ಲಿ ಶೇ. ೭೦ರಷ್ಟು (ಅಥವಾ ಜಿಡಿಪಿಯ ಪ್ರಮಾಣದಲ್ಲಿ ಹೇಳುವುದಾದಲ್ಲಿ ಶೇ. ೨೩.೫ರಷ್ಟು) ಆಗಿತ್ತು. ಇದು ೨೦೧೫-೧೬ರಲ್ಲಿ ಶೇ.೬೦ಕ್ಕೆ ಕುಸಿಯಿತು (ಜಿಡಿಪಿಯ ಪ್ರಮಾಣದಲ್ಲಿ ಹೇಳುವುದಾದಲ್ಲಿ ಶೇ.೧೯.೨ರಷ್ಟು). ಇದು ಒಟ್ಟಾರೆ ದೇಶೀಯ ಉಳಿತಾಯದ ಹೋಲಿಕೆಯಲ್ಲೂ ಹಾಗೂ ಜಿಡಿಪಿಯ ಪ್ರಮಾಣದ ಹೋಲಿಕೆಯೆರಡರಲ್ಲೂ ೨೦೦೭-೦೮ರ ಪ್ರಮಾಣಕ್ಕಿಂತ ಕಡಿಮೆಯಾಗಿದೆ.

ಬೇಡಿಕೆಯ ಸ್ಥಿತಿಗತಿಗಳು ಬಂಡವಾಳ ಹೂಡಿಕೆಯನ್ನು ಉತ್ತೇಜಿಸುತ್ತಿಲ್ಲ. ೨೦೧೪-೧೫ರ ನಾಲ್ಕನೇ ತ್ರೈಮಾಸಿಕ ಮತ್ತು ೨೦೧೫-೧೬ರ ನಾಲ್ಕನೇ ತ್ರೈಮಾಸಿಕದ ನಡುವಿನ ಅವಧಿಯಲ್ಲಿ ರಫ್ತಿನ ಪ್ರಮಾಣ ಒಂದೇ ಸಮನೆ ಕುಸಿದಿದೆ. ವರದಿಯ ಪ್ರಕಾರ ನಮ್ಮ ಜಿಡಿಪಿಯಲ್ಲಿ ರಫ್ತಿನ ಪ್ರಮಾಣ ಕಳೆದ ೧೪ ವರ್ಷಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣಕ್ಕೆ ಇಳಿದಿದೆ. ಅಂತರಿಕ ಬೇಡಿಕೆಯೂ ಕೆಳಮಟ್ಟದಲ್ಲೇ ಇದೆ. ಲಭ್ಯವಿರುವ ಉದ್ಯೋಗಗಳ ಅಂಕಿಅಂಶಗಳು ಈ ಹತಾಶ ಸ್ಥಿತಿಗೆ ಮತ್ತಷ್ಟು ಪುರಾವೆಗಳನ್ನು ಒದಗಿಸುತ್ತವೆ. ೨೦೦೦ ದಶಕದ ಮಧ್ಯಭಾಗದಲ್ಲಿ ಕಂಡುಬಂದ ತೀವ್ರ ಅಭಿವೃದ್ಧಿ ದರದ ಅವಧಿಯು ಕುಸಿಯುತ್ತಿದ್ದ ಕೃಷಿ ಆಧಾರಿತ ಉದ್ಯೋಗಗಳಿಗೆ ಮತ್ತು ಕಡಿಮೆಯಾಗುತ್ತಾ ಸಾಗಿದ ಮಹಿಳಾ ಕಾರ್ಮಿಕರ ಪ್ರಮಾಣಕ್ಕೆ ಸರಿಸಮವಾದ ಪರ್ಯಾಯ ಉದ್ಯೋಗಗಳನ್ನು ಕೃಷಿಯೇತರ ಕ್ಷೇತ್ರಗಳಲ್ಲಿ ಸೃಷ್ಟಿಸಲಿಲ್ಲ. ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೈಸೇಷನ್  (ಎನ್‌ಎಸ್‌ಎಸ್‌ಒ) ಅಂಕಿಅಂಶದ ಪ್ರಕಾರ ೨೦೦೪-೦೫ ಮತ್ತು ೨೦೧೧-೧೨ರ ಅವಧಿಯಲ್ಲಿ ಉದ್ಯೋಗ ಸೃಷ್ಟಿಯ ದರ ಒಟ್ಟಾರೆಯಾಗಿ ವಾರ್ಷಿಕ ಶೇ.೧ಕ್ಕಿಂತ ಕಡಿಮೆಯಿತ್ತು. ೨೦೧೨-೧೩ರ ನಂತರ ಇದು ಇನ್ನಷ್ಟು ಹದಗೆಟ್ಟಿದ್ದು ಉದ್ಯೋಗಗಳ ನೈಜ ಸಂಖ್ಯೆಯ ಏರಿಕೆಯಲ್ಲೇ ಕುಸಿತ ಉಂಟಾಗಿದೆ. ಅದರಲ್ಲೂ ಮುಖ್ಯವಾಗಿ ಅಸಂಘಟಿತ ಕ್ಷೇತ್ರದಲ್ಲಿ ಈ ಇಳಿಕೆ ಇನ್ನೂ ಹತಾಶ ಹಂತದಲ್ಲಿದೆ. ಈ ಹಿಂದೆ ಹೆಚ್ಚುವರಿ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದ ನಿರ್ಮಾಣ, ಮಾಹಿತಿ ತಂತ್ರಜ್ನಾನ ಮತ್ತು ಬಿಪಿಒ ಕ್ಷೇತ್ರಗಳ ಅಭಿವೃದ್ಧಿಯು  ಕಳೆದ ಮೂರು ವರ್ಷಗಳಲ್ಲಿ ಕಳೆಗುಂದಿದೆ. ಉತ್ಪಾದನಾ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಯು ಸ್ಥಗಿತಗೊಂಡಿದೆ.

ಸ್ಥೂಲ ಅರ್ಥಿಕ ಪರಿಸ್ಥಿತಿಯು ಇಂಥಾ ಅನಾರೋಗ್ಯಕರ ಚಿತ್ರಣವನ್ನು ನೀಡುತ್ತಿರುವ ಹೊತ್ತಿನಲ್ಲೇ ೨೦೦೮-೦೯ರಲ್ಲಿ ಜಿಡಿಪಿಯ ಶೇ.೧೫.೮ರಷ್ಟಿದ್ದ ಸರ್ಕಾರಿ ವೆಚ್ಚಗಳು೨೦೧೩-೧೪ರಲ್ಲಿ ಶೇ.೧೩.೯ಕ್ಕಿಳಿಯಿತು. ಇದು ೨೦೧೭-೧೮ರಲ್ಲಿ ಶೇ.೧೨.೭ಕ್ಕಿಳಿಯುವುದೆಂದು ಅಂದಾಜಿಸಲಾಗಿದೆ. ಸಾರ್ವಜನಿಕ ವೆಚ್ಚಗಳಲ್ಲಿ ಮತ್ತು ಉದ್ಯೋಗ ಸೃಷ್ಟಿಯ ಯೋಜನೆಗಳಲ್ಲಿ ಅಸಮರ್ಪಕ ಹೂಡಿಕೆಯಿಂದಾಗಿ ಉತ್ಪನ್ನಗಳ ಬೇಡಿಕೆಗೆ ಪೂರಕವಾಗಿ ಆರ್ಥಿಕ ವಾತಾವರಣವನ್ನು ಸುಧಾರಿಸುವ ಯಾವ ಕ್ರಮಗಳನ್ನೂ ಸರ್ಕಾರ ಕೈಗೊಳ್ಳಲಿಲ್ಲ. ಬದಲಿಗೆ ಸರ್ಕಾರವು ನೋಟು ನಿಷೇಧವನ್ನು ಜಾರಿಗೆ ತಂದಿತು. ಇದು ದೇಶದ ಅರ್ಥಿಕತೆಯ ಅತ್ಯಂತ ಅತಂತ್ರ ವರ್ಗಗಳ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತು. ಅದು ಬ್ಯಾಂಕುಗಳು ಎದುರಿಸುತ್ತಿರುವ ಎನ್‌ಪಿಎ (ನಾನ್ ಪರ್ಫಾರ್ಮಿಂಗ್ ಅಸೆಟ್ಸ್- ಚಾಲ್ತಿರಹಿತ ಖಾತೆಗಳು- ಸಾಲ ತೆಗೆದುಕೊಂಡು, ಬಡ್ಡಿಯನ್ನಾಗಲೀ ಸಾಲದ ಅಸಲನ್ನಾಗಲೀ ತೀರಿಸದ ಖಾತೆಗಳು, ವಿಶೇಷವಾಗಿ ದೊಡ್ಡ ದೊಡ್ಡ ಕಂಪನಿಗಳು- ಅನು) ಸಮಸ್ಯೆಗಳನ್ನೂ ಬಗೆಹರಿಸಲಿಲ್ಲ. ಬ್ಯಾಂಕುಗಳು ನೀಡುವ ಒಟ್ಟಾರೆ ಸಾಲದ ಪ್ರಮಾಣದಲ್ಲಿ ಈ ಎನ್‌ಪಿಎಗಳ ಪ್ರಮಾಣ ೨೦೧೪ರ ಮಾರ್ಚ್‌ನಲ್ಲಿ ಶೇ.೪ರಷ್ಟಿದ್ದದ್ದು ಈ ವರ್ಷ ಶೇ.೯.೫ಕ್ಕೇರಿದೆ. ಹಾಗೂ ಇದೀಗ ಸೂಕ್ತ ತಯಾರಿಯಿಲ್ಲದೆ ಜಾರಿ ಮಾಡಿದ ಸರಕು ಮತ್ತು ಸೇವಾ ತೆರಿಗೆಯ ವ್ಯವಸ್ಥೆಯು (ಜಿಎಸ್‌ಟಿ) ಸೃಷ್ಟಿ ಮಾಡಿರುವ ಅರಾಜಕತೆಯಿಂದಾಗಿ ಪರಿಸ್ಥಿತಿಯು ಇನ್ನಷ್ಟು ಹದಗೆಡುವುದರಲ್ಲಿ ಸಂದೇಹವಿಲ್ಲ. ಹೀಗಾಗಿ ಸರ್ಕಾರವು ತನಗೆ ತಾನು ನಿಗದಿ ಮಾಡಿಕೊಂಡಿರುವ ವಿತ್ತೀಯ ಕೊರತೆಯ ಪ್ರಮಾಣವನ್ನು ಸಡಿಲಿಸಲೇಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪ್ರಧಾನಮಂತ್ರಿಗಳು ಇತ್ತೀಚೆಗೆ ಘೋಷಿಸಿದ ಸೌಭಾಗ್ಯ ಯೋಜನೆಯು (ಸಹಜ್ ಬಿಜಲಿ ಹರ್ ಘರ್ ಯೋಜನ) ಕಳೆದ ದಶಕದಲ್ಲಿ ಘೊಷಿಸಲಾದ ಗ್ರಾಮೀಣ ವಿದ್ಯುದೀಕರಣ ಯೋಜನೆಯ ಮುಂದುವರೆಕೆಯಷ್ಟೇ ಆಗಿದೆ. ವಾಸ್ತವವಾಗಿ ವಿತ್ತ ಮಂತ್ರಿ ಅರುಣ್ ಜೇಟ್ಲಿಯವರು ಆರ್ಥಿಕ ಪುನಶ್ಚೇತನಕ್ಕೆ ಬೇಕಾದ ವಿತ್ತೀಯ ಉತ್ತೇಜನವನ್ನು ನೀಡಲಾಗುವುದು ಎಂದು ಹೇಳಿ ಸಾಕಷ್ಟು ಕಾಲವಾದ ನಂತರ ಅತ್ಯಂತ ವಿಳಂಬವಾಗಿ ಈ ಸಾರ್ವಜನಿಕ ವೆಚ್ಚದ ಯೋಜನೆಯನ್ನು ಘೋಷಿಸಲಾಗಿದೆ.

ಅಧಿಕಾರದಲ್ಲಿರುವ ಮೂರು ವರ್ಷಗಳಲ್ಲಿ ಸರ್ಕಾರವು ಇಲಾಖೆಗಳನ್ನು ಪುನರ್ ಸಂಘಟಿಸುವ ಮತ್ತು ಹಳೆ ವೆಚ್ಚಗಳ ಖಾತೆಗೆ ಹೊಸ ನಾಮಕರಣ ಮಾಡುವ ಉಸಾಬರಿಯಲ್ಲೇ ನಿರತವಾಗಿತ್ತು. ಈ ಬಹುಪಾಲು ನಿರ್ಧಾರಗಳ ಹಿಂದಿನ ಆಲೋಚನೆಗಳೇನೆಂಬುದು ಯಾರಿಗೂ ಸ್ಪಷ್ಟವಾಗಿರಲಿಲ್ಲ. ಹೆಚ್ಚೆಂದರೆ ಅದು ನೀತಿ ನಿರ್ಣಯಗಳನ್ನು ಕೈಗೊಳ್ಳುವುದನ್ನು ಮತ್ತಷ್ಟು ಕಠಿಣಗೊಳಿಸಿತಷ್ಟೆ. ಸಾರ್ವಜನಿಕ ವೆಚ್ಚಗಳನ್ನು ಯೋಜಿತವಾಗಿ ಮಾಡುವ ಸುವ್ಯಸ್ಥಿತ ಪದ್ಧತಿಯಾಗಿದ್ದ ಯೋಜನಾ ಅಯೋಗವನ್ನು ರದ್ದುಮಾಡಿ ಆ ಜಾಗದಲ್ಲಿ ನೀತಿ ಆಯೋಗವನ್ನು ಸ್ಥಾಪಿಸಲಾಯಿತು. ನೀತಿ ಆಯೋಗದ ಬಹುಪಾಲು ಶಿಫಾರಸ್ಸುಗಳು ಸಾರ್ವಜನಿಕ ವಿಚಕ್ಷಣೆಗೆ ಒಳಗಾಗುವುದೇ ಇಲ್ಲ. ೨೦೧೫ರಲ್ಲಿ ಸರ್ಕಾರವು ರಾಷ್ಟ್ರೀಯ ಖಾತಾ ಲೆಕ್ಕಾಚಾರಗಳ ಮತ್ತು ಅಂಕಿಅಂಶಗಳ ಪದ್ಧತಿಯಲ್ಲಿ ಬದಲಾವಣೆ ತಂದು ದೊಡ್ಡ ಗೊಂದಲವನ್ನೇ ಉಂಟುಮಾಡಿತ್ತು. ನಂತರ ಅದನ್ನು ೨೦೧೭ರ ಮೇ ತಿಂಗಳಲ್ಲಿ ಪುನರ್ವಿಮರ್ಶೆಗೊಳಪಡಿಸಲಾಯಿತು. 

ಸರ್ಕಾರವು ಭರವಸೆ ನೀಡಿದ ಸುಧಾರಣೆಗಳನ್ನು ಈಡೇರಿಸಿಲ್ಲ. ಕೇವಲ ರಾಜಕೀಯ ಮೇಲುಗೈ ಪಡೆಯುವ ಕಾರಣಕ್ಕಾಗಿಯೇ ನೋಟು ನಿಷೇಢವನ್ನು ಜಾರಿಗೊಳಿಸಿ ಆರ್ಥಿಕತೆಯನ್ನು ಮತ್ತಷ್ಟು ಸಂಕಟಕ್ಕೆ ದೂಡಿದೆ. ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವಲ್ಲಿ ಮತ್ತು ಎನ್‌ಪಿಎ ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲವಾಗಿದೆ. ಆರ್ಥಿಕ ಸಲಹಾ ಪರಿಷತ್ತಿನ ರಚನೆಯು ತಾನು ನೀತಿ ನಿರ್ಧಾರಣೆಯ ವಿಷಯದಲ್ಲಿ ಇನ್ನುಮುಂದೆ ಕಠಿಣವಾಗಿರುತ್ತೇನೆಂದು ತೋರಿಸಿಕೊಳ್ಳುವ ನಾಟಕವೇ ಹೊರತು ಬೇರೇನಲ್ಲ. ವಾಸ್ತವವಾಗಿ ಸರ್ಕಾರಕ್ಕೆ ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡುವ ತನ್ನ ಹಳೆ ಚಾಳಿಯಲ್ಲೇ ಹೆಚ್ಚು ನಂಬಿಕೆ ಇರುವಂತೆ ಕಾಣುತ್ತಿದೆ.

 

 
Updated On : 13th Nov, 2017

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top