ISSN (Print) - 0012-9976 | ISSN (Online) - 2349-8846

ಚಿಕ್ಕಮಕ್ಕಳನ್ನು ಲೈಂಗಿಕ ಕಿರುಕುಳದಿಂದ ರಕ್ಷಿಸುವುದು ಹೇಗೆ?

ಶಾಲೆಗಳಲ್ಲಿ ಚಿಕ್ಕಮಕ್ಕಳು ಎದುರಿಸುತ್ತಿರುವ ಲೈಂಗಿಕ ಕಿರುಕುಳಗಳು ಮಕ್ಕಳ ರಕ್ಷಣಾ ಕಾನೂನುಗಳಲ್ಲಿರುವ ಲೋಪದೋಷಗಳನ್ನು ಬಯಲುಮಾಡಿದೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

ಹರ್ಯಾಣದ ಗುರುಗ್ರಾಮದ ಮೇಲ್ವರ್ಗದ ರಯಾನ್ ಅಂತರರಾಷ್ಟ್ರೀಯ ಶಾಲೆಯ ಶೌಚಾಲಯದಲ್ಲಿ ೨೦೧೭ರ ಸೆಪ್ಟೆಂಬರ್ ೮ ರಂದು ಏಳು ವರ್ಷದ ಬಾಲಕನೊಬ್ಬಳ ಹೆಣ ಪತ್ತೆಯಾಯಿತು. ನಂತರ ಪೊಲೀಸರು ಆ ಶಾಲೆಯ ಬಸ್ ಕಂಡಕ್ಟರ್‌ನನ್ನು ಬಂಧಿಸಿದರು. ತನ್ನೊಡನೆ ಸಲಿಂಗ ಕಾಮಕೇಳಿ ಮಾಡಲು ವಿರೋಧ ವ್ಯಕ್ತಪಡಿಸಿದ್ದರಿಂದ ಆ ಕಂಡಕ್ಟರೇ ಬಾಲಕನನ್ನು ಕೊಂದನೆಂಬ ಆರೋಪವನ್ನು ಆತನ ಮೇಲೆ ಹೊರಿಸಲಾಗಿದೆ. ಪ್ರಕರಣದ ಬಗ್ಗೆ ಮುಂದುವರೆದಿರುವ ತನಿಖೆಯು ಶಾಲಾ ಆವರಣದಲ್ಲಿ ಸಂಭವಿಸಿರುವ ಗಂಭೀರ ಭದ್ರತಾ ವೈಫಲ್ಯಗಳನ್ನು, ಈ ವಿಷಯದಲ್ಲಿ ಶಾಲೆ ಮತ್ತು ಶಿಕ್ಷಕರಿಗೆ ಉತ್ತರದಾಯಿತ್ವವೇ ಇಲ್ಲದಿರುವುದನ್ನೂ, ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವ ಬಗ್ಗೆ ಇರುವ ಸಾಂವಿಧಾನಿಕ ಕ್ರಮಗಳನ್ನು ಎತ್ತಿಹಿಡಿಯುವುದರಲ್ಲಿ ಸರ್ಕಾರದ ವೈಫಲ್ಯತೆಯನ್ನು ಬಯಲುಮಾಡಿದೆ. 

ನಗರದ ಶಾಲೆಗಳಲ್ಲಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ಹಿಂಸಾಚಾರದ ಪ್ರಕರಣಗಳು ಸತತವಾಗಿ ಬೆಳಕಿಗೆ ಬರುತ್ತಿದ್ದು ಅದರಲ್ಲಿ ಗುರುಗ್ರಾಮದ ಪ್ರಕರಣವು ಇತ್ತೀಚಿನ ಸೇರ್ಪಡೆಯಷ್ಟೆ. ಇಂಥಾ ಪ್ರಕರಣಗಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರೂ ಹಿಂಸಾಚಾರಕ್ಕೆ ಬಲಿಯಾಗುತ್ತಿರುವುದು ಗಮನಿಸಬೇಕಾದ ವಿಷಯವಾಗಿದೆ. ಹೀಗಾಗಿ ಇದಕ್ಕೆ ಪರಿಹಾರವಿರುವುದು ಮಕ್ಕಳ ರಕ್ಷಣೆಯ ವ್ಯವಸ್ಥೆಯಲ್ಲಿ ಮೂಲಭೂತ ಮಾರ್ಪಾಡುಗಳನ್ನು ತರುವುದರಲ್ಲೇ ವಿನಃ ಲಿಂಗಾಧಾರಿತವಾಗಿ ನಿಗಾ- ಉಸ್ತುವಾರಿಯನ್ನು ಹೆಚ್ಚು ಮಾಡುವುದರಿಂದಲ್ಲ. ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ನೀಡಿರುವ ಅಂಕಿಅಂಶಗಳ ಪ್ರಕಾರ  ಲೈಂಗಿಕ ಕಿರುಕುಳದಿಂದ ಮಕಳ್ಳನು ರಕ್ಷಿಸುವ ಕಾಯಿದೆ (ಪೋಕ್ಸ)ದಡಿಯಲ್ಲಿ ದಾಖಲಾಗಿರುವ ಅಪರಾಧಗಳ ಸಂಖ್ಯೆ ೨೦೧೪ ಮತ್ತು ೨೦೧೫ರ ನಡುವೆ ೮೯೦೪ರಿಂದ ೧೪೯೧೩ಕ್ಕೇರಿದೆ. ಮಕ್ಕಳ ಮೇಲಿನ ಹಿಂಸಾಚಾರಗಳ ಬಗ್ಗೆ ೨೦೦೭ರಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಮೂವರಲ್ಲಿ ಇಬ್ಬರು ಮಕ್ಕಳು ದೈಹಿಕ ಹಿಂಸಾಚಾರಕ್ಕೆ ತುತ್ತಾಗುತ್ತಾರೆ; ಶೇ.೫೩.೨೨ ಮಕ್ಕಳು ಒಂದಲ್ಲ ಒಂದು ಬಗೆಯ ಅಥವಾ ಒಂದಕ್ಕಿಂತ ಹೆಚ್ಚಿನ ರೂಪದ ಲೈಂಗಿಕ ಕಿರುಕುಳಕ್ಕೆ ತುತ್ತಾಗಿದ್ದರು; ಅಧ್ಯಯನದ ಭಾಗವಾಗಿ ಸಂದರ್ಶಿಸಲಾದ ೧೨,೦೦೦ ಮಕ್ಕಳಲ್ಲಿ ಶೇ. ೫೦ ರಷ್ಟು ಮಕ್ಕಳು ಶಾಲಾ ಆವರಣದಲ್ಲಿ ಲೈಂಗಿಕ ಕಿರುಕುಳಕ್ಕೆ ಗುರಿಯಾಗಿದ್ದರು; ಅಧ್ಯಯನ ನಡೆಸಲಾದ ೧೩ ರಾಜ್ಯಗಳಲ್ಲಿ ದೈಹಿಕ ಕಿರುಕುಳಕ್ಕೆ ತುತ್ತಾಗಿದ್ದ ಶೇ. ೬೯ರಷ್ಟು ಮಕ್ಕಳಲ್ಲಿ ಶೇ.೫೪.೬೮ರಷ್ಟು ಜನ ಹುಡುಗರಾಗಿದ್ದರು; ಮತ್ತು ಬಹಳಷ್ಟು ಮಕ್ಕಳು ಈ ವಿಷಯವನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ೨೦೧೫ರ ಜುಲೈನಲ್ಲಿ ಪ್ರಕಟವಾದ ವಿಶ್ವಸಂಸ್ಥೆಯ ಮಕ್ಕಳ ನಿಧಿಯ (ಯೂನಿಸೆಫ್) ವರದಿಯೂ ಸಹ ಮಕ್ಕಳು ಎದಿರಿಸುತ್ತಿರುವ ಈ ಬಿಕ್ಕಟ್ಟನ್ನು ಎತ್ತಿ ತೋರಿಸಿತ್ತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಗ್ರ ಮಕ್ಕಳ ರಕ್ಷಣ ಯೋಜನೆಯು (ಐಸಿಪಿಎಸ್) ಮಕ್ಕಳ ಜೀವ, ವ್ಯಕ್ತಿತ್ವ ಮತ್ತು ಬಾಲ್ಯಗಳ ಬಗ್ಗೆ ಇರುವ  ಯಾವುದೇ ನೈಜ ಅಥವಾ ಸಂಭಾವ್ಯ ಅಪಾಯಗಳಿಂದ ಮಕ್ಕಳನ್ನು ರಕ್ಷಿಸುವ ಕುರಿತಾಗಿ ಹೇಳಿಕೊಳ್ಳುತ್ತದೆ. ಸಮುದಾಯ, ಸರ್ಕಾರ ಮತ್ತು ನಾಗರಿಕ ಸಮಾಜಗಳ ಬೆಂಬಲದೊಂದಿಗೆ ಕುಟುಂಬವು ತನ್ನ  ಮಕ್ಕಳ ರಕ್ಷಣೆಯನ್ನು ಮಾಡಬೇಕಿರುತ್ತದೆ. ಶಾಲೆಗಳು ಈ ಸಹಕಾರ ಜಾಲದ ಮುಖ್ಯ ಕೊಂಡಿಯಾಗಿವೆ. ಮಕ್ಕಳು ತಮ್ಮ ದಿನದ ಮತ್ತು ಬಾಲ್ಯದ ಅರ್ಧ ಭಾಗವನ್ನು ಶಾಲೆಯ ಪರಿಸರದಲ್ಲೇ ಕಳೆಯುತ್ತಾರೆ. ಆದರೂ ಒಂದು ಸಂಸ್ಥೆಯಾಗಿ ಶಾಲೆಗಳನ್ನು ಈವರೆಗೆ ಮಕ್ಕಳ ರಕ್ಷಣೆಗೆ ಉತ್ತರದಾಯಿಗಳನ್ನಾಗಿ ಮಾಡಲಾಗಿಲ್ಲ.

ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಕಾನುನುಗಳಲ್ಲಿ ಶಾಲೆಗಳ ಪಾತ್ರದ ಬಗ್ಗೆ ಇರುವ ಗೊಂದಲವು ಒಂದು ಪ್ರಧಾನ ಸಮಸ್ಯೆಯೇ ಆಗಿದೆ. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕಿನ ಕಾಯಿದೆಯಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಪಠ್ಯ ಮತ್ತು ಸೌಕರ್ಯಗಳನ್ನು ಒದಗಿಸುವಲ್ಲಿ ಶಾಲೆಗಳ ಪಾತ್ರದ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ ಮಕ್ಕಳ ಮೇಲಿನ ಲೈಂಗಿಕ ಕಿರುಕುಳಗಳು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ತಡೆಯೊಡ್ಡುತ್ತಿರುವ ಬಗ್ಗೆಯಾಗಲೀ, ಅದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯಾಗಲೀ ಯಾವುದೇ ಪ್ರಸ್ತಾಪಗಳನ್ನು ಮಾಡಿಲ್ಲ. ಮತ್ತೊಂದು ಕಡೆ ಪೋಕ್ಸಾ ಕಾಯಿದೆಯು ನೇರವಾಗಿ ಶಾಲೆಗಳ ಬಗ್ಗೆಯಾಗಲಿ ಅವುಗಳ ಆಡಳಿತ ಮಂಡಳಿಗಳ ಬಗ್ಗೆಯಾಗಲೀ ನೇರ ಪ್ರಸ್ತಾಪವನ್ನು ಮಾಡುವುದಿಲ್ಲ. ಬದಲಿಗೆ ಮಕ್ಕಳ ಆರೋಗ್ಯಕರ ದೈಹಿಕ, ಭಾವನಾತ್ಮಕ, ಬೌದ್ಧಿಕ ಮತ್ತು ಸಾಮಾಜಿಕ ಅಭಿವೃದ್ಧಿಗಳನ್ನು ಖಾತರಿಗೊಳಿಸಬೇಕಾದ ಅಗತ್ಯಗಳ ಬಗ್ಗೆ ಮತ್ತು ಅದಕ್ಕೆ ಅಡ್ಡಿ ಮಾಡುವ ಅಪರಾಧಿಗಳ ವಿರುದ್ಧ ಶಿಕ್ಷಾ ಕ್ರಮಗಳನ್ನು ಜರುಗಿಸುವ ಬಗ್ಗೆ ಅಮೂರ್ತವಾಗಿ ಮಾತನಾಡುತ್ತದೆ. ಮಕ್ಕಳ ನ್ಯಾಯ (ಆರೈಕೆ ಮತ್ತು ರಕ್ಷಣೆ) ಕಾಯಿದೆಯು,  ಅನಾಥ, ಕಳೆದುಹೋದ ಮತ್ತು ಪರಿತ್ಯಕ್ತ ಮತ್ತು ದುರ್ಬಳಕೆ ಮತ್ತು ನಿರ್ಲಕ್ಷ್ಯಕ್ಕೀಡಾದ ಮಕ್ಕಳನ್ನು ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳೆಂಬ ಶೀರ್ಷಿಕೆಂiಡಿಯಲ್ಲಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಆದರೆ ಈ ಕಾಯಿದೆಯೂ ಸಹ ನಿಗದಿಯಾದ ಬಾಲ ಕೇಂದ್ರಗಳಿಗೆ ಅಥವಾ ಆರೈಕೆ ಕೇಂದ್ರಗಳಿಗೆ ಮಕ್ಕಳನ್ನು ಪುನರ್ವಸತಿಗಾಗಿ ಕಳಿಸಬೇಕಾಗುವಷ್ಟು ಹಿಂಸೆ ಮತ್ತು ವಂಚನೆಗಳ ಅತಿರೇಕಕ್ಕೆ ಗುರಿಯಾದ ಪ್ರಕರಣಗಳನ್ನು ಮಾತ್ರ ಪರಿಗಣಿಸುತ್ತದೆ. ಈ ಕಾಯಿದೆಯೂ ಸಹ ಶಾಲೆಗಳೂ ಸಹ ಮಕ್ಕಳಾ ಆರೈಕೆಯ ಬಗ್ಗೆ ಜವಾಬ್ದಾರಿ ಹೊಂದಿರಬೇಕಾದ ಒಂದು ಕೇಂದ್ರವೆಂದು ಪರಿಗಣಿಸುವುದಿಲ್ಲ.

ರಯಾನ್ ಶಾಲೆಯಂಥ ಪ್ರತಿಷ್ಟಿತ ಶಾಲೆಯಲ್ಲಿ ಇಂಥಾ ಪ್ರಕರಣವು ನಡೆದಿರುವುದರಿಂದ ತುಂಬಾ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಮಕ್ಕಳ ಹಕ್ಕುಗಳ ಬಗೆಗಿನ ಚರ್ಚೆಗಳು ಒಂದಷ್ಟು ತ್ವರಿತಗತಿಯನ್ನು ಪಡೆದುಕೊಂಡಿರುವುದು ನಿಜವಾದರೂ ಇನ್ನೂ ಬಹಳಷ್ಟು ಆಗಬೇಕಿದೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ (ಎನ್‌ಸಿಇಆರ್‌ಟಿ) ನಿರ್ದೇಶಕರ ಹೇಳಿಕೆಯ ಪ್ರಕಾರ ವಿಭಿನ್ನ ಬಗೆಯ ಮಕ್ಕಳ ಮೇಲಿನ ಕಿರುಕುಳಗಳ ಕುರಿತು ಮತ್ತು ಅದನ್ನು ಶಾಲಾ ಪರಿಸರದಲ್ಲಿ ಹೇಗೆ ತಡೆಯಬಹುದೆಂಬುದರ ಕುರಿತು ಶೈಕ್ಷಣಿಕ ಅಂಶಗಳನ್ನು ಸೇರಿಸುವ ಪ್ರಸ್ತಾಪವಿದೆ. ನೊಬೆಲ್ ಪ್ರಶಸ್ತಿ ವಿಜೇತರಾದ ಕೈಲಾಶ್ ಸತ್ಯಾರ್ಥಿಯವರು ಮಕ್ಕಳ ಮೇಲಿನ ಕಿರುಕುಳದ ಬಗ್ಗೆ ಅರಿವನ್ನು ಮೂಡಿಸಲು ಭಾರತ ಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಹರ್ಯಾಣದಲ್ಲಿ ಇನ್ನು ಮುಂದೆ ಶಾಲೆಗೆ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಮುನ್ನ ಪೊಲೀಸ್ ಪರಿಶೀಲನೆಗೆ ಒಳಗಾಗುವುದು ಕಡ್ಡಾಂi. ಹಾಗೂ ಅಲ್ಲಿ ಪ್ರತಿಶಾಲೆಗಳಲ್ಲೂ ಮಕ್ಕಳ ಸುರಕ್ಷಾ ಸಮಿತಿಗಳನ್ನು ನೇಮಿಸಲಾಗುತ್ತಿದೆ ಮತ್ತು ಇಡೀ ಶಾಲಾ ಪರಿಸರದ ಮೇಲೆ ನಿಗಾ ಇಡುವಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಲಾಗುತ್ತದೆ ಮತ್ತು ಮಕ್ಕಳಿಗೆ ಸುರಕ್ಷಿತ ಪ್ರಯಾಣ ಸೌಲಭ್ಯವನ್ನು ಖಾತರಿಗೊಳಿಸಲಾಗುತ್ತಿದೆ. ಇವೆಲ್ಲಾ ಮಾಡಲೇ ಬೇಕಾದ ಪ್ರಾಥಮಿಕ ಕ್ರಮಗಳಾದರೂ ಅಷ್ಟೆ ಸಾಲುವುದಿಲ್ಲ.ಉತ್ತಮ ತಂತ್ರಜ್ನಾನದ ಬಳಕೆ ಮತ್ತು ಉಸ್ತುವಾರಿಗಳ ಜೊತೆಜೊತೆಗೆ ಮಕ್ಕಳ ಸುರಕ್ಷತೆಯ ಬಗ್ಗೆ ಶಾಲೆಗಳನ್ನು ಉತ್ತರದಾಯಿಗಳನ್ನಾಗಿ ಮಾಡಬಲ್ಲ ಕಾನೂನಿನ ಅವಶ್ಯಕತೆಯಿದೆ.

ಅಂತಿಮವಾಗಿ ಹೇಳುವುದಾದರೆ, ಮಕ್ಕಳನ್ನು ಕೇವಲ ಮೂಲಭೂತ ಸೌಕರ್ಯಗಳಿಂದ ಮತ್ತು ಶಿಕ್ಷಣದಿಂದಲೇ ರಕ್ಷಿಸಲು ಸಾಧ್ಯವಿಲ್ಲ. ಪ್ರಭುತ್ವವು ಎಲ್ಲಾ ಮಕ್ಕಳ ಪೋಷಕರ ಪಾತ್ರವನ್ನು ವಹಿಸಲೇಬೇಕು. ಹೆಚ್ಚೆಚ್ಚು ಮಕ್ಕಳು ಶಾಲೆಗಳಿಗೆ ಅದರಲ್ಲೂ ಖಾಸಗಿ ಶಾಲೆಗಳಿಗೆ ನೊಂದಾಯಿಸಿಕೊಳ್ಳುತ್ತಿರುವಾಗ ಮತ್ತು ಖಾಸಗಿ ಶಾಲೆಗಳೆಂಬುದು ಉತ್ತಮ ಉದ್ಯಮವೂ ಆಗುತ್ತಿರುವ ಈ ಹೊತ್ತಿನಲ್ಲಿ ಮಕ್ಕಳ ಸುರಕ್ಷೆಯ ಬಗ್ಗೆ ಶಾಲೆಗಳ, ಉಪಾಧ್ಯಾಯರ ಮತ್ತು ಪೋಷಕರ ಪಾತ್ರಗಳನ್ನು ಮಕ್ಕಳ ಹಕ್ಕುಗಳ ಕಾಯಿದೆಯಲ್ಲಿ ಸ್ಪಷ್ಟವಾಗಿ ನಿಗದಿಪಡಿಸುವ ಅಗತ್ಯವಿದೆ. ಯಾವುದೇ ವರ್ಗಕ್ಕೇ ಸೇರಿದ ಮಕ್ಕಳಗಾಲಿ, ಯಾವುದೇ ನಗರ, ಪಟ್ಟಣ ಅಥವಾ ಹಳ್ಳಿಗಳಿಗೆ ಸೇರಿದ ಮಕ್ಕಳಾಗಲೀ, ಪ್ರತಿಯೊಂದು ಮಗುವಿಗೂ ಶಾಲೆಯಲ್ಲಿ, ಮನೆಯಲ್ಲಿ ಮತ್ತು ಪ್ರಯಾಣದ ಸಂದರ್ಭದಲ್ಲಿ ಸುರಕ್ಷಿತವಾದ, ಹಿಂಸಾಮುಕ್ತವಾದ ಮತ್ತು ಕಲಿಕೆಗೆ ಪೂರಕವಾದ ವಾತಾವರಣವನ್ನು ಒದಗಿಸುವ ಅಗತ್ಯವಿದ್ದೇ ಇದೆ. 

Updated On : 13th Nov, 2017
Back to Top