ISSN (Print) - 0012-9976 | ISSN (Online) - 2349-8846

ಬಂಗಾಳೀ ಸಮಾಜದೊಳಗೇ ಇರುವ ಅಂತರ್ಗತ ಕೋಮುವಾದಿ ಬಿರುಕುಗಳು

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಭುಗಿಲೆದ್ದಿರುವ ಕೋಮು ವಿದ್ವೇಷದ ಬೇರುಗಳು ಆ ಪ್ರದೇಶದ ಹಿಂದೂ-ಮುಸ್ಲಿಂ ವೈಷಮ್ಯದ ಇತಿಹಾಸದಲ್ಲಿದೆ

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

ಪಶ್ಚಿಮ ಬಂಗಾಳದ ಬಸಿರತ್ ಉಪವಿಭಾಗದ ಬದುರಿಯಾದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೋಮು ಹಿಂಸಾಚಾರಗಳು ಆ ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮು ಧೃವೀಕರಣಕ್ಕೆ ಸಂಕೇತವಾಗಿದೆ. ಹೆಚ್ಚುತ್ತಿರುವ ಈ ಹಿಂದೂ - ಮುಸ್ಲಿಂ ವೈಷಮ್ಯದ ಹಿಂದೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಚುನಾವಣಾ ಆಶೋತ್ತರಗಳೂ ಸೇರಿಕೊಂಡಿವೆ. ಆದರೆ ಬಂಗಾಳದಲ್ಲಿ ಮತದಾರರ ಒಂದು ವರ್ಗವು ಬಿಜೆಪಿ ಕಡೆ ಏಕೆ ಸೆಳೆಯಲ್ಪಡುತ್ತಿವೆ? ಆ ಪ್ರದೇಶದ ಕೋಮುವಾದದ ಇತಿಹಾಸದ ಹಿನ್ನೆಲೆಯಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಈ ವಿದ್ಯಮಾನವನ್ನು ವಿವರಿಸಿಕೊಳ್ಳಬಹುದು. ಅಂಥಾ ಒಂದು ಅಧ್ಯಯನವು,  ದೇಶಾದ್ಯಂತ ಬೀಸುತ್ತಿರುವ ಹಿಂದೂ ಕೋಮುವಾದಿ ವಿದ್ವೇಷಕ್ಕೆ ಬಂಗಾಳವು ಹೊಸದಾಗಿಯೇನೂ ಬಲಿಯಾಗಿಲ್ಲವೆಂಬುದನ್ನೂ, ಐತಿಹಾಸಿಕವಾಗಿಯೇ ಆ ಪ್ರದೇಶವು ತೀವ್ರ ಸಾಮಾಜಿಕ ಕಲಹದ ಬೀಜಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿತ್ತೆಂಬುದನ್ನೂ ಮತ್ತು ಇತ್ತೀಚಿನ ರಾಜಕೀಯ ಪ್ರಕ್ರಿಯೆಗಳು ಅದನ್ನೇ ಬಯಲಿಗೆ ತಂದಿದೆಯೆಂಬುದನ್ನೂ ಹೊರಗೆಡಹುತ್ತದೆ.

೧೭ ವರ್ಷದ ಶಾಲಾ ಬಾಲಕನೊಬ್ಬ ಪ್ರವಾದಿಯ ಬಗ್ಗೆ ಮತ್ತು ಕಾಬಾದ ಬಗ್ಗೆ ಹೀನಾಯವಾದ ಉಲ್ಲೇಖಗಳನ್ನೊಳಗೊಂಡ ಹೇಳಿಕೆಯನ್ನು ಫೇಸ್‌ಬುಕ್ಕಿನಲ್ಲಿ ಪ್ರಕಟಿಸಿದ್ದರಿಂದಲೇ ಬಶಿರತ್‌ನಲ್ಲಿ ಭುಗಿಲೆದ್ದ ಕೋಮು ಸಂಘರ್ಷಕ್ಕೆ ಕಿಡಿ ಹಚ್ಚಿತೆಂದು ಹೇಳಲಾಗುತ್ತಿದೆ. ಇದು ಮುಸ್ಲಿಂ ಸಮುದಾಯವನ್ನು ರೊಚ್ಚಿಗೆಬ್ಬಿಸಿತು. ಈ ಬಗೆಯ ಹೇಳಿಕೆಯನ್ನು ಪ್ರಕಟಿಸಿದ ಅಪರಾಧಿಯನ್ನು ಒಂದೋ ತನಗೆ ಒಪ್ಪಿಸಬೇಕು ಅಥವಾ ನೇಣಿಗೇರಿಸಬೇಕೆಂದು ಒತ್ತಾಯಿಸುತ್ತಾ ಬೀದಿಬೀದಿಯಲ್ಲಿ ದೊಂಬಿಗಿಳಿಯುವಂತೆ ಮಾಡಿತು. ಇದಕ್ಕೆ ಪ್ರತಿಯಾಗಿ ಹಿಂದೂಗಳು ಸಹ ಪ್ರತೀಕಾರದ ಕ್ರಮಗಳಲ್ಲಿ ತೊಡಗಿಕೊಂಡರು. ಪರಿಣಾಮವಾಗಿ ಹಲವು ದಿನಗಳವರೆಗೆ ಕೋಮು ಹಿಂಸಾಚಾರಗಳು ಮುಂದುವರೆದವು. ಬಿಜೆಪಿಗೆ ಸಂಬಂಧಿಸಿದ ಕೆಲವರು ಹಲವು ಸುಳ್ಳು ಸುದ್ದಿಯನ್ನು ಪ್ರಚಾರ ಮಾಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದರೆಂದು ವರದಿಗಳು ಹೇಳುತ್ತಿವೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ನೇತೃತ್ವದ ರಾಜ್ಯ ಸರ್ಕಾgವು ಗಲಭೆಗಳಿಗೆ ಬಿಜೆಪಿಯೇ ಕಾರಣವೆಂದು ದೂರುತ್ತಿದ್ದರೆ, ಬಿಜೆಪಿಯು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಬೇಕೆಂದು ಒತ್ತಾಯಿಸುತ್ತಿದೆ. ಈ ಬಹಿರಂಗ ಕೆಸರೆರಚಾಟಗಳು ಎಷ್ಟೇ ನಡೆದರು ಅವು ಪಶ್ಚಿಮ ಬಂಗಾಳ ಸಮಾಜದೊಳಗೇ ಇರುವ ವಿಭಜನೆಗಳನ್ನಂತೂ ಮರೆಮಾಚುವುದಿಲ್ಲ. ಈಗಾಗಲೇ ಇದ್ದ ಈ ವಿಭಜನೆಗಳನ್ನು ಬಿಜೆಪಿಯ ಇತ್ತೀಚಿನ ಪ್ರಚಾರಾಂದೋಲನಗಳು ಇನ್ನಷ್ಟು ದೊಡ್ಡದಾಗಿಸಿದೆಯಷ್ಟೆ.

ಬಂಗಾಳೀ ಸಮಾಜದಲ್ಲಿ ೧೯೦೦ ರಿಂದಲೂ ಹಿಂದೂ-ಮುಸ್ಲಿಂ ಹಿಂಸಾಚಾರಗಳು ಸಂಭವಿಸುತ್ತಿವೆ. ನಂತರದ ದಶಕಗಳಲ್ಲಿ ಕೋಮು ವೈಷಮ್ಯಗಳು ಇನ್ನಷ್ಟು ತೀವ್ರಗೊಂಡವು. ಅದಕ್ಕೆ ಬಹಳಷ್ಟು ಬಾರಿ ವಸಾಹತುಶಾಹಿಗಳ ನೀತಿಗಳು ಕಾರಣವಾಗಿದ್ದವು. ೧೯೩೦ರ ಮಧ್ಯಭಾಗದಲ್ಲಿ ವಸಾಹತುಶಾಹಿ ಸರ್ಕಾರವು ಚುನಾವಣೆಯ ಮೂಲಕ ಪ್ರಾಂತೀಯ ಸರ್ಕಾರಗಳ ಆಯ್ಕೆಗೆ ಅನುವು ಮಾಡಿಕೊಟ್ಟಿತು. ಬಂಗಾಳ ಪ್ರಾಂತ್ಯದಲ್ಲಿ ಹಿಂದೂಗಳ ಸಂಖ್ಯೆ ಮುಸ್ಲಿಮರಿಗೆ ಹೋಲಿಸಿದಲ್ಲಿ ಕಡಿಮೆ ಇದ್ದಿದ್ದರಿಂದ ಬಂಗಾಳದ ಪ್ರಾಂತೀಯ ಆಳ್ವಿಕೆ  ಮುಸ್ಲಿಂ ರಾಜಕೀಯ ಪಕ್ಷಗಳ ಪಾಲಾಯಿತು. ಜನಸಂಖ್ಯೆಯ ಬೆಂಬಲವಿಲ್ಲದಿದ್ದರಿಂದ ಹಿಂದೂ ಆಳುವವರ್ಗಗಳು ಅಲ್ಪಸಂಖ್ಯಾತರಾದರು. ಸ್ವಾತಂತ್ರ್ಯಕ್ಕೆ ಮುನ್ನ ಮುಸ್ಲಿಂ ಲೀಗ್ ಪಕ್ಷವು ಬಂಗಾಳ ಪ್ರಾಂತ್ಯದಲ್ಲಿ ಹಲವು ವರ್ಷಗಳ ಕಾಲ ಆಳ್ವಿಕೆ ಮಾಡಿತ್ತೆಂಬುದು ಜನಸಮೂಹದ ನೆನಪಿನಿಂದ ಮರೆಯಾಗಿದೆ. ಹಾಗೆಯೇ ಈ ವಿದ್ಯಮಾನವು ಮುಸ್ಲಿಂ ವಿರೋಧಿ ದ್ವೇಷವನ್ನು ಹುಟ್ಟಿಹಾಕಿತೆಂಬುದೂ ಸಹ ಜನರು ಮರೆತಿದ್ದಾರೆ. ೧೯೪೬ರ ಆಗಸ್ಟಿನ ಮಹಾನ್ ಕೋಲ್ಕತ್ತ ಕಗ್ಗೊಲೆಗಳ ಮೂಲಕ ದೇಶ ವಿಭಜನೆ ಸಂಬಂಧೀ ಕೋಮುಹಿಂಸಾಚಾರಗಳು ಪ್ರಾರಂಭಗೊಂಡಿದ್ದೂ ಸಹ ಬಂಗಾಳದಿಂದಲೇ.  ಯಾವುದೇ ನೈತಿಕ ಅಳುಕೂ ಇಲ್ಲದೆ ಈ ಕೋಮು ವಿದ್ವೇಷದ ಬೆಂಕಿಗೆ ಮುಸ್ಲಿಂ ಲೀಗಿನ ನಾಯಕರೂ ಮತ್ತಷ್ಟು ಇಂಧನ ಒದಗಿಸಿದರು. ಆದರೆ ಈ ಕೋಮು ಸಂಘರ್ಷದಲ್ಲಿ ಬೆಳೆದು ನಿಂತ ಹಿಂದೂ ಕೋಮುವಾದವು ಮಾತ್ರ ಭಾರತದ ವಿಭಜನೆಯ ನಂತರದಲ್ಲೂ ಪಶ್ಚಿಮ ಬಂಗಾಳದಲ್ಲಿ ಒಂದು ಬಲವಾದ ರಾಜಕೀಯ  ಅಂತರ್‌ಶಕ್ತಿಯಾಗಿ ಮುಂದುವರೆಯಿತು.

ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ  ಹಿಂದೂ ಮಹಾ ಸಭ (ಇಂದಿನ ಬೆಜೆಪಿಯ ಪಿತಾಮಹ) ಬಂಗಾಳದಲ್ಲಿ ಒಂದು ಬಲವಾದ ರಾಜಕೀಯ ಶಕ್ತಿಯಾಗಿತ್ತು. ಆದರೆ ಸ್ವಾತಂತ್ರ್ಯಾ ನಂತರದಲ್ಲಿ ಗಾಂಧಿ ಹತ್ಯೆಯ ಕಾರಣದಿಂದ ಎದುರಿಸಿದ ಸಾರ್ವಜನಿಕ ಆಕ್ರೋಶ ಹಾಗೂ ಮತ್ತಿತರ ಕಾರಣಗಳಿಂದಾಗಿ ಅದರ ಪ್ರಭಾವ ನಿಧಾನವಾಗಿ ಕುಸಿಯುತ್ತಾ ಹೋಯಿತು. ಮತ್ತೊಂದು ಕಡೆ ಎಡಪಕ್ಷಗಳು ನೆಲೆಯನ್ನು ವಿಸ್ತರಿಸಿಕೊಳ್ಳುತ್ತಾ ಹೋದವು. ಕಾಂಗ್ರೆಸ್ ಆಳ್ವಿಕೆಯಲ್ಲಿ ಮತ್ತು ತದನಂತರದ ಎಡಪಕ್ಷಗಳ ಆಳ್ವಿಕೆಯಲ್ಲಿ ಹಿಂದೂ ಕೋಮುವಾದವನ್ನು ಮರೆಗೆ ಸರಿಸಲಾಯಿತಾದರೂ, ಅದು ಸಮಾಜದಿಂದ ಪಡೆದುಕೊಳ್ಳುತ್ತಿದ್ದ ಪೋಷಣೆಯನ್ನು  ಮಾತ್ರ ಯಾರೂ ತಪ್ಪಿಸಲಿಲ್ಲ.

ಬಂಗಾಳಿ ನಿರಾಶ್ರಿತರ ಹಕ್ಕುಗಳ ಬಗ್ಗೆ ಹೋರಾಡುತ್ತಾ ಎಡಪಕ್ಷಗಳು ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ತಮ್ಮ ಹಿಡಿತವನ್ನು ಗಟ್ಟಿಪಡಿಸಿಕೊಂಡವು. ಬಂಗಾಳಕ್ಕೆ ಹರಿದುಬಂದ ನಿರಾಶ್ರಿತರಲ್ಲಿ ಮೊದಲ ಅಲೆಯಲ್ಲಿ ಬಂದವರು ಇದ್ದಿದ್ದರಲ್ಲಿ ಉಳ್ಳವರು ಮತ್ತು ಮೇಲ್ಜಾತಿ ಹಿಂದೂಗಳು. ಈ ಹಿಂದೂ ನಿರಾಶ್ರಿತರ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಿದ್ದ ಎಡಪಕ್ಷಗಳು ಹಲವಾರು ಸಾರಿ ಪ್ರಬಲವಾದ ಮುಸ್ಲಿಂ ವಿರೋಧಿ ಧೋರಣೆಗಳನ್ನು ತಳೆಯಬೇಕಾಯಿತು. ೧೯೭೦ರ ಮಧ್ಯಭಾಗದ ನಂತರದಲ್ಲಿ ಕಾಂಗ್ರೆಸ್ ಅನ್ನು  ಸೋಲಿಸಿ ಎಡಪಕ್ಷಗಳು ಆಳ್ವಿಕೆಗೆ ಬಂದರೂ, ಅದರ ನಾಯಕ ಗಣ ಮಾತ್ರ, ಹಿಂದಿನ ಕಾಂಗ್ರೆಸ್ಸಿನಂತೆ,  ಸಾಮಾಜಿಕವಾಗಿ ಬಂಗಾಳದ ಭದ್ರಲೋಕ್‌ಗೆ (ಬಂಗಾಳದ ಸುಶಿಕ್ಷಿತ, ಆಸ್ತಿವಂತ, ಮೇಲ್ಜಾತಿ ವರ್ಗವನ್ನು ಭದ್ರಲೋಕ್ ಎಂದು ಕರೆಯುತ್ತಾರೆ- ಅನುವಾದಕನ ಟಿಪ್ಪಣಿ) ಸೇರಿದವರೇ ಆಗಿದ್ದರು.

ಎಡಪಕ್ಷಗಳ ಆಳ್ವಿಕೆಯಲ್ಲಿದ್ದ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರ ಪರಿಸ್ಥಿತಿ ಹೇಗಿತ್ತೆಂಬುದು ೨೦೦೬ರಲ್ಲಿ ಸಾಚಾರ ಸಮಿತಿ ಬರುವವರೆಗೆ ಯಾರ ಪರಿಶೀಲನೆಗೂ ಒಳಪಟ್ಟಿರಲಿಲ್ಲ. ಆ ವರದಿಯು,  ಎಡಪಕ್ಷಗಳ ಬಡವರ ಪರವಾದ ಪದಪುಂಜಗಳು ಆ ರಾಜ್ಯದ ಮುಸ್ಲಿಮರನ್ನು ಯಾವರೀತಿಯಲ್ಲಿ ಸಬಲೀಕರಿಸಿಲ್ಲವೆಂಬುದನ್ನು ಸ್ಪಷ್ಟವಾಗಿ ಬೆಳಕಿಗೆ ತಂದಿತು. ಆದರೆ ಹಿಂದಿನ ಕಾಂಗ್ರೆಸ್ ಸರ್ಕಾರದಂತೆ ಎಡಪಕ್ಷಗಳಿಗೂ ಸಹ ಮುಸ್ಲಿಂ ಸಮುದಾಯದ ಅತ್ಯಂತ ಪ್ರತಿಗಾಮಿ ನಾಯಕರೊಂದಿಗೆ ವ್ಯೂಹಾತ್ಮಕ ಮೈತ್ರಿಯನ್ನು ಮಾಡಿಕೊಳ್ಳುವಲ್ಲಿ ಮಾತ್ರ ಯಾವ ಹಿಂಜರಿಕೆಯೂ ಇರಲಿಲ್ಲ. ಏಕೆಂದರೆ ದೇಶ ವಿಭಜನೆಯಾದ ನಂತರ ಒತ್ತೊತ್ತಾಗಿ ಒಟ್ಟಿಗೆ ಕೇರಿಗಳಲ್ಲಿ ಬದುಕುತ್ತಿದ್ದ ಮುಸ್ಲಿಂ ಮತದಾರರ ಮೇಲೆ ಈ ನಾಯಕರ ಪ್ರಭಾವ ಹೆಚ್ಚಿರುತ್ತಿತ್ತು.

ವಾಸ್ತವವೆಂದರೆ ಆ ನಂತರದ ಅವಧಿಯಲ್ಲಿ ನಿರಾಶ್ರಿತರಾಗಿ ಬಂದವರು ಕೆಳಜಾತಿಗಳ ರೈತಾಪಿ ವರ್ಗದವರಾಗಿದ್ದು ಎಡಪಕ್ಷಗಳು ಅವರ ಬಗ್ಗೆ ಮಿತ್ರ ಧೋರಣೆಯನ್ನೇನೂ ಪ್ರದರ್ಶಿಸಲಿಲ್ಲ. ಅದಕ್ಕೆ ಅವರಿಂದಾಗಿ ಸರ್ಕಾರಕ್ಕೆ ಹೆಚ್ಚುತ್ತಿದ್ದ ಹಣಕಾಸು ಹೊಣೆಗಾರಿಕೆಯೂ ಒಂದು ಕಾರಣವಿದ್ದಿರಬಹುದು. ಭೂಮಿ ಹಂಚಿಕೆಯ ಕುರಿತು ಎಡಪಕ್ಷಗಳು ಯಶಸ್ವೀ ಮುಂದೊಡಗನ್ನು ತೋರಿದವು. ಆದರೆ ನಂತರದ ದಿನಗಳಲ್ಲಿ ಬಡ ರೈತಾಪಿ ವರ್ಗದಿಂದ ದೂರಗೊಂಡರು. ಹೀಗೆ, ಎಡಪಕ್ಷಗಳ ಆಳ್ವಿಕೆಯು ಮೇಲ್ನೋಟಕ್ಕೆ ಸ್ಥಿರತೆಯಿಂದ ಕೂಡಿರುವುದಾಗಿ ಕಂಡುಬಂದರೂ, ದೀರ್ಘಕಾಲದ ಆಳ್ವಿಕೆಯಲ್ಲಿ ಅದರ ಸಾಮಾಜಿಕ ತಳಹದಿ ನಿರಂತರವಾಗಿ ಕುಸಿಯುತ್ತಲೇ ಹೋಗಿತ್ತು. ಈ ಒಡಕಿನ ಲಾಭವನ್ನು ಪಡೆದುಕೊಂಡ ತೃಣಮೂಲ ಕಾಂಗ್ರೆಸ್ (ಟಿಎಂಸಿ) ೨೦೧೧ರಲ್ಲಿ ಅಧಿಕಾರವನ್ನು ಪಡೆದುಕೊಂಡಿತು. ಆದರೆ ಅದೂ ಸಹ ಬಂಗಾಳದಲ್ಲಿ ಲಾಗಾಯ್ತಿನಿಂದಲೂ ಪರಿಣಾಮಕಾರಿಯೆಂದು ರುಜುವಾತಾದ ರಾಜಕೀಯ ತಂತ್ರಗಾರಿಕೆಯನ್ನೇ ಮುಂದುವರೆಸಿತು. ತನ್ನ ಹಿಂದಿನವರಂತೆ ಟಿಎಂಸಿ ಸಹ ಮುಸ್ಲಿಂ ಸಮುದಾಯದ ಅತ್ಯಂತ ಪ್ರತಿಗಾಮಿ ನಾಯಕರನ್ನು ಓಲೈಸಲು ಪ್ರಾರಂಭಿಸಿತು. ಉದಾಹರಣೆಗೆ ಈಗ ಟಿಎಂಸಿ ಪಕ್ಷದಿಂದ ಸಂಸದನಾಗಿರುವ ಇದ್ರೀಸ್ ಅಲಿ ಎಂಬುವನೇ ೨೦೦೭ರಲ್ಲಿ ಬಾಂಗ್ಲಾದೇಶದಿಂದ ಬಹಿಷ್ಕೃತಳಾಗಿದ್ದ ಬರಹಗಾರ್ತಿ ತಸ್ಲಿಮಾ ನಸ್ರೀನ್ ಅವರನ್ನು ಪಶ್ಚಿಮ ಬಂಗಾಳದಿಂದಲೂ ಓಡಿಸಬೇಕೆಂದು ಆಗ್ರಹಿಸಿ ೨೦೦೭ರಲ್ಲಿ ಗಲಭೆಗಳನ್ನು ಹುಟ್ಟುಹಾಕಿದ್ದ.

ಪ್ರಾಯಶಃ ಪಶ್ಚಿಮ ಬಂಗಾಳದ ರಾಜಕೀಯಕ್ಕೆ ಟಿಎಂಸಿ ನೀಡಿದ ಬಹುದೊಡ್ಡ ಕೊಡುಗೆಯೆಂದರೆ ಸಾರ್ವಜನಿಕ ಜೀವನದಲ್ಲಿ ಧಾರ್ಮಿಕ ವಿಷಯದ ಬಗ್ಗೆ ಮಾತನಾಡುವುದರ ಬಗ್ಗೆ ಇದ್ದ ಸ್ವಯಂ ನಿಷೇಧವನ್ನು ಕಿತ್ತುಹಾಕಿದ್ದೇ ಇರಬೇಕು. ಮಮತಾ ಬ್ಯಾನರ್ಜಿಯವರು ತನ್ನ ಮುಸ್ಲಿಂ ಮತಕ್ಷೇತ್ರವನ್ನುದ್ದೇಶಿಸಿ ಪದೇಪದೇ ನೀಡುವ ಟೊಳ್ಳು ಸಾಂಕೇತಿಕ ಸಂದೇಶಗಳು ಮತ್ತು ಸಂಕೇತಗಳು ಸಾಮಾನ್ಯ ಮುಸ್ಲಿಮರ ಬದುಕಿನಲ್ಲಂತೂ ಯಾವುದೇ ಬಗೆಯ ಬದಲಾವಣೆಯನ್ನೂ ತಂದಿಲ್ಲ. ಆಕೆಯ ತೋರಿಕೆಯ ಮುಸ್ಲಿಂ ಪರವಾದ ಧೋರಣೆಗಳು ಹೆಚ್ಚೆಂದರೆ ಮುಸ್ಲಿಂ ಸಮುದಾಯದ ಪ್ರತಿಗಾಮಿ ನಾಯಕರಿಗೆ ಮತ್ತಷ್ಟು ಹುಚ್ಚು ಧೈರ್ಯ ತುಂಬುತ್ತಿದೆ. ಮತ್ತು ಅದೇ ಸಮಯದಲ್ಲಿ ಆಕೆಯ ಸವರ್ಣೀಯ ಹಿಂದೂ ಬೆಂಬಲಿಗರಲ್ಲಿ ಸಾಕಷ್ಟು ಕಿರಿಕಿರಿಯನ್ನೂ ಉಂಟುಮಾಡಿದೆ. ಅಸಮಾಧಾನದೊಂಡಿರುವ ಮತ್ತು ಭಯಭೀತ ಸ್ಥಿತಿಯಲ್ಲಿರುವ ಹಿಂದೂಗಳ ಬೆಂಬಲವನ್ನು ಪಡೆದುಕೊಳ್ಳಲು ಬಿಜೆಪಿಯು ಈ ಸಂದರ್ಭವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ. ಬರಲಿರುವ ವರ್ಷಗಳಲ್ಲಿ ಬಿಜೆಪಿಯ ಕಾರ್ಯತಂತ್ರವು ಅದನ್ನು ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೂ ತಂದುಬಿಡಬಹುದು. ಆದರೆ ಇತಿಹಾಸ ಹೇಳುವುದೇನೆಂದರೆ ಪಶ್ಚಿಮ ಬಂಗಾಳಕ್ಕೆ ಕೋಮುವಾದವನ್ನು ಯಾರೂ ಹೊರಗಿನಿಂದ ಆಮದುಮಾಡಿಕೊಳ್ಳಬೇಕಿಲ್ಲ. ಅದು ಈಗಾಗಲೇ ಆ ಸಮಾಜದಲ್ಲಿ ಅಸ್ಥಿತ್ವದಲ್ಲಿದ್ದು ಈವರೆಗೆ ರಾಜ್ಯವನ್ನು ಆಳಿದ  ಎಲ್ಲಾ ಪಕ್ಷಗಳು ಅದನ್ನು ಪೋಷಿಸಿವೆ. 

Updated On : 13th Nov, 2017
Back to Top