ISSN (Print) - 0012-9976 | ISSN (Online) - 2349-8846

EPW ಬಿಕ್ಕಟ್ಟು- ಮನಸ್ಸಾಕ್ಷಿಯ ಮಾತು

ಎಕಾನಮಿಕ್ ಅಂಡ್  ಪೊಲಿಟಿಕಲ್ ವೀಕ್ಲಿ (EPW) ಯು ೫೧ ವರ್ಷಗಳನ್ನು ಪೂರೈಸಿದೆ. ಆದರಲ್ಲಿ ಕಳೆದ ಒಂದು ವರ್ಷವು ಮಾತ್ರ ಸಾಕಷ್ಟು ಸಂಕ್ಷೋಭೆಗಳಿಂದ ಮತ್ತು ಬಲವಂತದ ಬದಲಾವಣೆಗಳಿಂದ ಕೂಡಿತ್ತು. ಕಳೆದ ಒಂದು ತಿಂಗಳ ಬೆಳವಣಿಗೆಗಳ ಬಗ್ಗೆಯಂತೂ ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಚರ್ಚೆಗಳು ನಡೆದಿದ್ದು ಇಪಿಡಬ್ಲ್ಯೂ ಬಗ್ಗೆ ಮತ್ತು ಅದರ ಭವಿಷ್ಯದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎತ್ತಲಾಗಿದೆ. ಹೀಗಾಗಿ ಇದು ಪತ್ರಿಕೆಯ ಗತದ ಬಗ್ಗೆ ಮಾತ್ರವಲ್ಲ ಭವಿಷ್ಯದಲ್ಲಿ ಅದು ಸಾಗಬೇಕಿರುವ ಮಾರ್ಗದ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಲು ಸರಿಯಾದ ಸಮಯವಾಗಿದೆ. ಇಪಿಡಬ್ಲ್ಯೂ ಪತ್ರಿಕೆಯ ವಿಶಾಲ ಬಳಗವು ಸಹ ಇದರಲ್ಲಿ ಭಾಗವಹಿಸುವ ಅಗತ್ಯವಿದೆ.

he translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

ಕಾಲ್ಪನಿಕ ಸಂಭಾಷಣೆಯಲ್ಲಿ ಬರ್ನಾಡ್ ಡಿಮೆಲ್ಲೋ ಅವರು ಬಿಕ್ಕಟ್ಟಿಗೆ ಸಂಬಂಧಪಟ್ಟ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ:

EPW ಪತ್ರಿಕೆ ಮತ್ತು  EPW ಸಮುದಾಯದ ನಡುವಿನ ಆತ್ಮೀಯ ಸಂಬಂಧಗಳೇ ಈ ಸಾಹಸವನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗುತ್ತಿರುವುದರ ಹಿಂದಿನ ಚಾಲಕ ಶಕ್ತಿಯಾಗಿದೆ. ಈಗ ನಮ್ಮ  EPW ಅನ್ನು ರೋಸ್ ಎಂದೂ  EPW ಸಮುದಾಯವನ್ನು  ಜಾಕ್ ಎಂದೂ ಕರೆಯೋಣ. ಇವೆರಡು ಜೇಮ್ಸ್ ಕ್ಯಾಮರೂನ್‌ನ  ಚಾರಿತ್ರಿಕ ಟೈಟಾನಿಕ್ ಸಿನಿಮಾದ ಕಾಲ್ಪನಿಕ ಪಾತ್ರಗಳ ಹೆಸರುಗಳೆಂಬುದು ನಿಮಗೇ ತಿಳಿದೇ ಇದೆ.

ತಾನು ಹೇಗೆ ಬದುಕಬೇಕೆಂಬುದನ್ನು ಹಗಲು ದರೋಡೆ ಮತ್ತು ಸುಲಿಗೆಗಳ ಮೂಲಕ ಸಿರಿವಂತನಾದವರ (ರಾಬರ್ ಬ್ಯಾರನ್) ತರ ಇರುವ ತನ್ನ ಭಾವೀಪತಿ  ಕಾಲ್ ಮತ್ತು ಕುಲೀನ ಸಮಾಜದ ಹುಸಿ ಪ್ರತಿಷ್ಠೆಯನ್ನೇ ಸದಾ ತಲೆಯಲ್ಲಿ ತುಂಬಿಕೊಂಡಿರುವ ತನ್ನ ವಿಧವೆ ತಾಯಿ ನಿರ್ದೇಶಿಸುವುದನ್ನು ಸಹಿಸಲಾಗದ ರೋಸ್ ಇನ್ನೇನು ಹಡಗಿನಿಂದ ಕಡಲಿಗೆ ಹಾರಿಕೊಳ್ಳಲು ಸಿದ್ಧವಾಗಿರುತ್ತಾಳೆ. ಆಗ ಜಾಕ್ ಮಧ್ಯಪ್ರವೇಶಿಸಿ ಇಲ್ಲ ನೀನು ಸಾಯಕೂಡದು ಎಂದು ತಾಕೀತು ಮಾಡುತ್ತಾನೆ. ಆಗ ರೋಸ್  ನಾನು ಏನು ಮಾಡಬೇಕು ಅಥವಾ ಮಾಡಬಾರದು ಎಂದು  ನನಗೆ ಹೇಳಲು ಬರಬೇಡ. ಕಳೆದ ೧೫ ತಿಂಗಳಿಂದ ನಾನು ಬಿಕ್ಕಟ್ಟಿನಲ್ಲಿ ಸಿಲುಕಿ ಒದ್ದಾಡುತ್ತಿದ್ದಾಗ ನೀನು ಎಲ್ಲಿದ್ದೆ? ಹೋಗಾಚೆ.. ಎಂದು ಜಾಕ್‌ನನ್ನು ಬದಿಗೆ ದೂಡುತ್ತಾಳೆ.

ಜಾಕ್:  ನಾನು ನಿನ್ನ ಬಗ್ಗೆ ಸದಾ ಚಿಂತಿತನಾಗಿದ್ದೆ. ಆದರೆ ನನಗೆ ಆಯ್ಕೆಗಳಿರಲಿಲ್ಲ. ನೀನು ಸಂದರ್ಭವನ್ನು ಯಶಸ್ವಿಯಾಗಿ ಎದುರಿಸಿತ್ತೀಯೆಂದೂ, ಈ ಬಿಕ್ಕಟ್ಟಿನಿಂದ ಹೊರಬಂದು ನನ್ನ ದುಗುಡವನ್ನೂ ಸಹ ಕಡಿಮೆ ಮಾಡುತ್ತೀಯೆಂದು ನಾನು ಅಂದುಕೊಂಡಿದ್ದೆ. ದಯವಿಟ್ಟು ವಾಪಸ್ ಬಂದುಬಿಡು..ನೀನು ಹೀಗೆಲ್ಲಾ ದುಡುಕಬಾರದು. ಎಲ್ಲಿ ನಿನ್ನ ಕೈ ಕೊಡು.. .

ರೋಸಳ ಕೈ ಹಿಡಿದುಕೊಂಡು ಮತ್ತೆ ಹಡಗಿನೊಳಕ್ಕೆ ಎಳೆದುಕೊಳ್ಳುತ್ತಾನೆ ಜಾಕ್.

ರೋಸ್: ನಾನು ಸದಾ ಇಲ್ಲದ ಸಮಸ್ಯೆ ತಂದೊಡ್ಡುವ ತಂಟೆಕೋರಳೆಂದು ನಿನಗೀಗ ಅನಿಸುತ್ತಿರಬಹುದು

ಜಾಕ್: ಇಲ್ಲಪ್ಪ. ಖಂಡಿತಾ ಇಲ್ಲ. ಆದರೆ ಬೇರೆ ಯಾವುದೂ ದಾರಿಯೇ ಇಲ್ಲ ಎನ್ನುವಷ್ಟು ಮಟ್ಟಿಗೆ ನಿನ್ನನ್ನು ಹತಾಶಳಾಗಿಸಿದ ಸಂಗತಿಯೇನಿರಬಹುದೆಂದು ಯೋಚಿಸುತ್ತಿದ್ದೇನೆ.

ರೋಸ್:  ಕಳೆದ ಜನವರಿ ಇಂದ ನಾನು ಎಂಥಾ ಸಂಧಿಗ್ಧದಲ್ಲಿ ಸಿಲುಕಿಕೊಂಡಿದ್ದೇನೆ ಎಂಬುದು ನಿನಗೆ ಗೊತ್ತಿಲ್ಲ ಬಿಡು. ನೈತಿಕ ಮತ್ತು ಅನೈತಿಕವಾದವುಗಳ ನಡುವೆ ಹಾಗೂ ಅಸಲಿ ಮತ್ತು ನಕಲಿಗಳ ನಡುವೆ ವ್ಯತ್ಯಾಸಗಳನ್ನು ಗುರುತಿಸುವಷ್ಟು ಶಕ್ತಿಯೂ ನನಗಿಲ್ಲವೇನೋ ಎಂಬ ಹತಾಶೆಯಂಚಿಗೆ ನಾನು ತಲುಪಿದ್ದೆ. ನನ್ನ ವ್ಯಕ್ತಿತ್ವವೇ ಅಪಹಾಸ್ಯಕ್ಕೊಳಗಾಗಿತ್ತು; ಕಳೆಪೆ ಗುಣಮಟ್ಟವನ್ನು ನಾನು ಸಹಿಸುವುದಿಲ್ಲವೆಂದು ನಿನಗೆ ಗೊತ್ತು. ನಂತರ ಆ ದೊಡ್ಡ ಉದ್ಯಮಪತಿಗಳಿಂದ ಲೀಗಲ್ ನೋಟಿಸ್ ಬಂದದ್ದು ಮತ್ತು ಆ ನಂತರದ ಬೆಳವಣಿಗೆಗಳು..ಹಮ್. ಜಾಕ್ ನಾನು ಕಷ್ಟಪಟ್ಟು ಗಳಿಸಿದ್ದ  ಪ್ರತಿಷ್ಟೆಗೇ ಕುಂದುಂಟಾಗಿದೆ.

ಜಾಕ್:  ಇವೆಲ್ಲಾ ಬೇಸರ ಹುಟ್ಟಿಸುವ ಸಂಗತಿಗಳೆಂಬುದರಲ್ಲಿ ಎರಡು ಮಾತಿಲ್ಲ. ಅಲ್ಲದೆ ೨೦೧೬ರ ಜನವರಿಯಿಂದ ಒಬ್ಬರಾದ ಮೇಲೆ ಒಬ್ಬರಂತೆ ನಿಮ್ಮ ಇಬ್ಬಿಬ್ಬರು ಸಂಪಾದಕರನ್ನು ರಾಜೀನಾಮೆ ಕೊಡುವಂತೆ ಮಾಡಲಾಯಿತು. ಆದರೂ ರೋಸ್, ನಿನಗೆ ನಾನು ಒಂದನ್ನಂತೂ ಹೇಳಲೇಬೇಕು. ನಿನ್ನಂಥ ಅದ್ಭುತ, ಅಪರೂಪದ ಮತ್ತು ವಿಸ್ಮಯ ಹುಟ್ಟಿಸುವ ಮತ್ತೊಬ್ಬ ಹೆಂಗಸನ್ನು ನಾನು ಈವರೆಗೆ ಕಂಡಿಲ್ಲ. ಆದ್ದರಿಂದ ನಿನ್ನ ಪರಿಸ್ಥಿತಿ ಸುಧಾರಿಸದೆ  ನಾನು ಇಲ್ಲಿಂದ ಕದಲುವುದಿಲ್ಲ. ರೋಸ್, ನೀನೊಂದು ಬಲೆಯಲ್ಲಿ ಸಿಕಿಬಿದ್ದಿದ್ದೀಯ. ಮತ್ತು ಈ ಬಲೆಯನ್ನು ಹರಿದುಕೊಂಡು ನೀನು ಹೊರಬರದಿದ್ದರೆ ನೀನು ಸತ್ತುಹೋಗುತ್ತೀ. ಅದು ಈ ಕೂಡಲೇ ಸಂಭವಿಸದಿರಬಹುದು. ಏಕೆಂದರೆ ಈ ಸದ್ಯಕ್ಕೆ ನೀನಿನ್ನೂ ಗಟ್ಟಿಯಾಗಿದ್ದೀಯಾ. ಆದರೆ ನಿನ್ನಲ್ಲಿ ನಾನು ಅತ್ಯಂತ ಮೆಚ್ಚಿಕೊಳ್ಳುವ ನಿನ್ನ ಅಂತರಂಗದ ಬೆಂಕಿ ನಿಧಾನವಾಗಿ ಶಮನಗೊಳ್ಳುತ್ತಾ ಹೋಗುತ್ತಿದೆ..

ರೋಸ್:  ಜಾಕ್. ಹಾಗೆಲ್ಲ ನನ್ನ ಬಗ್ಗೆ ಇಲ್ಲದ್ದನ್ನು ಊಹಿಸಿಕೊಂಡು ಒರಲಬೇಡ. ನಾನು ನನ್ನ ವೈಫಲ್ಯಗಳಿಂದ ಕಲಿತ ಪಾಠಗಳ ಒಟ್ಟುಮೊತ್ತವಾಗಿದ್ದೇನೆ. ಸಚಿನ ಚೌಧರಿಯಿಂದ ಹಿಡಿದು ಸಿ. ರಾಮಮೋಹನ ರೆಡ್ಡಿಯವರೆಗೆ ನನ್ನ ಸಂಪಾದಕರುಗಳು  ಹಾಗೂ ನನ್ನ ಲೇಖಕರು ನನ್ನಲ್ಲಿ ಏನನ್ನು ಬಿತ್ತಿದ್ದಾರೋ ಅದರಲ್ಲಿ ಬಹಳಷ್ಟನ್ನು ನಾನು ಉಳಿಸಿಕೊಂಡಿದ್ದೇನೆ. ಮತ್ತು ನನಗೆ ನನ್ನ ಮಿತಿಗಳ ಬಗ್ಗೆಯೂ ಸರಿಯಾದ ಅರಿವಿದೆ. ನನ್ನ ಸಂಪಾದಕರುಗಳ ಮತ್ತು ಲೇಖಕರ ಅಮಿತ ಸಹಾಯ ಮತ್ತು ಸಹಕಾರಗಳಿಂದಾಗಿಯೇ ನಾನಿಂದು ಜ್ನಾನದ ಆಲದಮರವಾಗಿ ಬೆಳೆದು ನಿಂತಿದ್ದೇನೆ. ಆದರೆ ಅತ್ಯಂತ ಸುದೀರ್ಘಕಾಲ ಮತ್ತು ಅತ್ಯಂತ ಸಮರ್ಪಣಾಭಾವದಿಂದ ನನ್ನ ಸಂಪಾದಕತ್ವ ವಹಿಸಿದ್ದ ಕೃಷ್ಣರಾಜ್ ತರ ನಾನೂ ಸಹ ತುಂಬಾ ಸಂಕೋಚಸ್ವಭಾವದವಳು.

ಜಾಕ್:  ತನಿಖಾ ಪತ್ರಿಕೋದ್ಯಮದ ಕಡೆಗೆ ಹೊರಳಿಕೊಂಡಿದ್ದರ ಬಗ್ಗೆ ನಿನಗೆ ಖುಷಿಯಿತ್ತೇ?

ರೋಸ್: ಆ ಆಲೋಚನೆಯೇ ನನ್ನಲ್ಲಿ ಹೊಸ ಉತ್ಸುಕತೆ ಮೂಡಿಸಿತ್ತು. ೧೮೭೦-೧೯೦೦ರ ಅವಧಿಯಲ್ಲಿ ಬಂಡವಾಳದ ಅತಿಯಾದ ಕೇಂದ್ರೀಕರಣ ಮತ್ತು ಸಾಂದ್ರೀಕರಣಗಳು ಅಮೆರಿಕದಲ್ಲಿ ದಿಗಿಲು ಹುಟ್ಟಿಸುವಂಥ ಅಸಮಾನತೆಗಳನ್ನು ಹುಟ್ಟುಹಾಕುತ್ತಿತ್ತಷ್ಟೇ. ಆ ಸಂದರ್ಭದ ಬಗ್ಗೆ ನಾನೇನು ಓದಿದ್ದೇನೆಂದು ಸ್ವಲ್ಪ ನೆನಪಿಸಿಕೊಳ್ಳುತ್ತೇನೆ. ಅಂದಿನ ಸರ್ಕಾರಗಳು ತಮ್ಮದೊಂದಷ್ಟು ನರಿಪಾಲನ್ನು ಪಡೆದುಕೊಳ್ಳುತ್ತಾ ಕಾನೂನು ಬಾಹಿರವಾಗಿ ದೊಡ್ಡಮಟ್ಟದಲ್ಲಿ ಖಾಸಗಿ ಸಂಪತನ್ನು ಶೇಖರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರಿಂದಲೇ ಅಮೆರಿಕದಲ್ಲಿ ಅಂಥಾ ಅಪಾರ ಅಸಮಾನತೆ ಸೃಷ್ಟಿಯಾಯಿತು.  ಲೂಟಿ-ಸುಲಿಗೆಯಂಥ  ದುರ್ಮಾರ್ಗಗಳ  ಮೂಲಕ ತಮ್ಮ ಸಂಪತನ್ನು ಹೆಚ್ಚಿಸಿಕೊಂಡವರನ್ನು ಅಮೆರಿಕದಲ್ಲಿ ರಾಬರ್ ಬ್ಯಾರನ್- ಹಗಲು ದರೋಡೆ ಹಣವಂತರೆಂದು ಕರೆಯುತ್ತಾರೆ.  ಇವರ ದುರಾಚಾರಗಳನ್ನು ಬಯಲಿಗೆಳೆಯಲೆಂದೇ ಅಮೆರಿಕದಲ್ಲಿ ಮಕ್‌ರೇಕರ್‌ಗಳು (ಹೊಲಸು ಹೊರತೆಗೆಯುವವರು ಅಥವಾ ದುರಾಚಾರವಿರೋಧಿಗಳು) ಮತ್ತು ಮಕ್‌ರೇಕರ್ ಪತ್ರಿಕೋದ್ಯಮ-ದುರಾಚಾರ ವಿರೋಧಿ ಪತ್ರಿಕೋದ್ಯಮ ಅಥವಾ ಹೊಲಸು ಹೊರತೆಗೆಯುವ ಪತ್ರಿಕೋದ್ಯಮ- ಅಸ್ಥಿತ್ವಕ್ಕೆ ಬಂದಿತು. ಈ ಸಾಹಸಿಗಳು ಸಾರ್ವಜನಿಕರ ಹಿತಾಸಕ್ತಿ ಇದ್ದ ಪ್ರತಿಯೊಂದರಲ್ಲೂ ಮೂಗು ತೂರಿಸುತ್ತಿದ್ದರು ಮತ್ತು ಅಲ್ಲಿ ಕಂಡುಬಂದದದ್ದನ್ನು ಮುಲಾಜಿಲ್ಲದೆ ಜಗಜ್ಜಾಹೀರುಗೊಳಿಸುತ್ತಿದ್ದರು. ಅವರು ಬಯಲುಗೊಳಿಸುತ್ತಿದ್ದ ಹೊಲಸಿನಲ್ಲಿ ಇರುತ್ತಿದ್ದದ್ದು ಕಾರ್ಪೊರೇಟ್ ಮೋಸ ಮತ್ತು ರಾಜಕೀಯ ಭ್ರಷ್ಟಚಾರಗಳೆಂಬ ಅವಳಿ ಅನೈತಿಕತೆಗಳು. ತಾವು ಬಯಲುಗೊಳಿಸುತ್ತಿದ್ದ ದುರಾಚಾರಗಳನ್ನು ಕಂಡು ಜಾಗೃತರಾಗುವ ಜನತೆ ಈ ಸಾಮಾಜಿಕ ಅನಿಷ್ಟಗಳನ್ನು ಕೊನೆಗಾಣಿಸಲು ಮುಂದಾಗುತ್ತಾರೆಂದು ಅವರು ಭಾವಿಸಿದ್ದರು. ೧೯೯೦ರ ನಂತರದಲ್ಲಿ ಭಾರತವೂ ಸಹ ತನ್ನದೆ ಆದ ರಾಬರ್ ಬ್ಯಾರನ್‌ಗಳ ಮತ್ತು ಪ್ರಭಾವಿ ಮತ್ತು ಭ್ರಷ್ಟ ರಾಜಕಾರಣಿಗಳ ಕೂಟದಿಂದಾಗಿ ನಲುಗುತ್ತಿದೆ. ಹೀಗಾಗಿ ಇವತ್ತಲ್ಲ ನಾಳೆ ನಮ್ಮಲ್ಲೂ ಈ ಮಕ್‌ರೇಕರ್-ಹೊಲಸು ಹೊರಹಾಕುವ- ಪತ್ರಿಕೋದ್ಯಮವು ಬರಲಿದ್ದು ಅವುಗಳ ಅತ್ಯಂತ ಅಧಿಕೃತ ಮತ್ತು ನಿಖರ ಬರಹಗಳು ನನ್ನ ಪತ್ರಿಕೆಯಲ್ಲೂ ಪ್ರಕಟಗೊಂಡು ಜನರಿಗೆ ತಲುಪಬೇಕೆಂಬುದು ನನ್ನ ಆಶಯವಾಗಿತ್ತು.

ಜಾಕ್:  ಆದರೆ ಎಲ್ಲೋ ಏನೋ ಎಡವಟ್ಟಾಗುತ್ತಿದದ್ದು ಸ್ಪಷ್ಟವಾಗಿತ್ತು ರೋಸ್. ಮೇಲಾಗಿ ನೀನು ನಿನ್ನ  ಮೂಲ ಸಾಮರ್ಥ್ಯದ ಪರಿಧಿಯಿಂದ ಪಕ್ಕಕ್ಕೆ ಸರಿಯುತ್ತಿದ್ದೆ.

ರೋಸ್: ಇಲ್ಲ. ಖಂಡಿತಾ ಇಲ್ಲ, ಜಾಕ್. ನಾವು ಮೂಲ ಸಾಮರ್ಥ್ಯ ಇತ್ಯಾದಿಗಳೆಂಬ ಆ ಕಾರ್ಪೊರೇಟ್ ಆಡಳಿತವರ್ಗದ ಭಾಷೆಯಲ್ಲಿ ಮಾತನಾಡುವುದು ಬೇಡ. ಬೋಫಾರ್ಸ್ ಹಗರಣದ ಸಂದರ್ಭದಲ್ಲೇ ನನ್ನ ಸಂಪಾದಕೀಯ ತಂಡ ಈ ಅಂಶಗಳ ಬಗ್ಗೆ ಚರ್ಚಿಸಿ ಒಂದು ನಿಲುವಿಗೆ ಬಂದಿತ್ತು. ತನಿಖಾ ಪತ್ರಿಕೋದ್ಯಮವು ವಿಷಯದ ಸತ್ಯಾಸತ್ಯತೆಗಳ ಬಗ್ಗೆ ನಿಖರತೆಯನ್ನು ನಿರೀಕ್ಷಿಸುತ್ತದೆ. ತಾನು ನಿಜಕ್ಕೂ ಪ್ರಜಾಸತ್ತೆಯ ನಾಲ್ಕನೇ ಆಧಾರ ಸ್ಥಂಭವಾಗಿ ಉತ್ಸಾಹಯುತ ಮತ್ತು ಸತ್ವಯುತ ಪತ್ರಿಕೋದ್ಯಮವನ್ನು ಮಾಡಬೇಕೆಂದು ಬಯಸಿದಲ್ಲಿ ಅದು ಸಾರ್ವಜನಿಕ ವಿಷಯಗಳ ಬಗ್ಗೆ ತಾನೇ ಮೂಲ ಸಂಶೋಧನೆಗಳಿಗೆ ಇಳಿಯಬೇಕಾಗುತ್ತದೆ. ಸಹಜವಾಗಿಯೇ ಇಂಥಾ ಒಂದು ಸಾಹಸದಲ್ಲಿ ತೊಡಗಬೇಕೆಂದರೆ ಅಂಥಾ ಜಾಣ್ಮೆ ಮತ್ತು ಅನುಭವವುಳ್ಳ ಪತ್ರಕರ್ತರೂ ಮತ್ತು ಸಾಕಷ್ಟು ಸಂಪನ್ಮೂಲಗಳು ಬೇಕಾಗುತ್ತವೆ. ಆದರೆ ಇಂದಿನ ನವ ಉದಾರವಾದಿ ಯುಗದಲ್ಲಿ ಅಂಥಾ ಪತ್ರಿಕೋದ್ಯಮದ ಗತಿಯೇನಾಗುತ್ತದೆಂಬುದು ಎಲ್ಲರೂ ಬಲ್ಲರು.  ಪ್ರಭಾವಿಗಳ ಮತ್ತು ಮತ್ತು ಶಕ್ತಿಶಾಲಿ ಕಾರ್ಪೊರೇಟ್‌ಗಳ ದುರಾಚಾರಗಳನ್ನು ಆಧಾರ ಸಹಿತ ಬಯಲುಗೊಳಿಸಿದರೂ ಅದರ ಬಗ್ಗೆ ಇದ್ದಕ್ಕಿದ್ದಂತೆ ಪತ್ರಿಕಾವಲಯದಲ್ಲಿ ಒಂದು ಸ್ಮಶಾನ ಮೌನ ಎದುರಾಗುತ್ತದೆ. ಅದರ ಬಗ್ಗೆ ಮುಖ್ಯವಾಹಿನಿ ವ್ಯಾಪಾರಿ ಪತ್ರಿಕೆಗಳಲ್ಲಿ ವರದಿಯಾಗುವುದಿಲ್ಲ. ಅಥವಾ ಅಂಥಾ ಸುದ್ದಿಯನ್ನು ಬೆಂಬತ್ತಿ ತನಿಖೆಯನ್ನೂ ಮುಂದುವರೆಸುವುದಿಲ್ಲ. ಇಲ್ಲಿ ಪತ್ರಿಕಾಧರ್ಮವೆಂಬುದು ಸೆರೆಯಲ್ಲಿದೆಯೇ ವಿನಃ ಸ್ವತಂತ್ರವಾಗಿಲ್ಲ. ಹೀಗಾಗಿ ಒಂದು ಆಧಾರ ಸಹಿತವಾದ ಅಧಿಕೃತ ತನಿಖಾ ಪತ್ರಿಕೋದ್ಯಮವು ನನ್ನ ಒಡೆಯರ ಮತ್ತು  ದೊಡ್ಡ ದೊಡ್ಡ ಪ್ರಭಾವಿಗಳ ಮತ್ತು ಸಿರಿವಂತರ ನಡುವೆ ಘರ್ಷಣೆಯನ್ನು ತಂದೊಡ್ಡುವುದಂತೂ ಖಂಡಿತಾ. ಆದರೆ ಇಲ್ಲಿ ಇನ್ನೊಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಲೇ ಬೇಕು. ಈ ಮಧ್ಯೆ ಯಾವುದು ತನಿಖಾ ಪತ್ರಿಕೋದ್ಯಮ ಎಂದು ಚಾಲ್ತಿಯಲ್ಲಿದೆಯೋ ಅದರಲ್ಲಿನ ಬಹುಪಾಲು ವಿಷಯಗಳು ಸರ್ಕಾರದಲ್ಲಿ ಅಥವಾ ಉದ್ಯಮಸಂಸ್ಥೆಯಲ್ಲಿರುವ ಮಾಹಿತಿದಾರರು ಸೋರಿಕೆ ಮಾಡಿದ ಮಾಹಿತಿಗಳ ವರದಿಗಳಷ್ಟೇ ಆಗಿರುತ್ತದೆ.  ವಿಷಯಗಳ ಸತ್ಯಾಸತ್ಯತೆಯ ಬಗ್ಗೆ ವಿವಾದವಿದ್ದಾಗ ಪತ್ರಕರ್ತರು ನಿಜದ ಆಳ ತಿಳಿಯಲು ಬೆವರು ಸುರಿಸಬೇಕಾಗುತ್ತದೆ. ಆದರೆ ಬಹಳಷ್ಟು ಪತ್ರಕರ್ತರು ಅಂಥಾ ಶ್ರಮವನ್ನೇ ತೆಗೆದುಕೊಳ್ಳುವುದಿಲ್ಲ. ಆದರೆ ನಾವು ಆಳವಾದ ತನಿಖಾ ಪತ್ರಿಕೋದ್ಯಮ ನಡೆಸಲು ಬೇಕಿರುವ ಹಣಕಾಸು ಸಂಪನ್ಮೂಲವನ್ನು ಲಾಭದ ಉದ್ದೇಶವಿಲ್ಲದ ಉದ್ಯಮಪತಿಗಳ ಒಕ್ಕೂಟ (ನಾನ್ ಪ್ರಾಫಿಟ್ ಕಾರ್ಪೊರೇಟ್ ಕಾಂಪ್ಲೆಕ್ಸ್)ವೆಂದು ಈಗ ಖ್ಯಾತವಾಗಿರುವ ಸಂಸ್ಥೆಯಿಂದ ಪಡೆದುಕೊಂಡೆವು. ಆ ಸಂಸ್ಥೆಗೆ ಬಗ್ಗೆ ಇಲ್ಲಿ ಒಂದೆರೆಡು ಮಾತುಗಳನ್ನು ಹೇಳಲೇಬೇಕು. ಇತರ ಎಲ್ಲಾ ಉದಾರವಾದಿ ಪ್ರಗತಿಪರ ಸರ್ಕಾರೇತರ ಸಂಸ್ಥೆಗಳ ರೀತಿ ನಾನೂ ಸಹ ನನ್ನ ವೆಚ್ಚದ ಒಂದಷ್ಟು ಭಾಗವನ್ನು  ಈ ಲಾಭೋದ್ದೇಶವಿಲ್ಲದ ಉದ್ಯಮಪತಿಗಳ ಒಕ್ಕೂಟದ ಅತಿ ಸಿರಿವಂತರಿಂದ ಪಡೆದುಕೊಳ್ಳುತ್ತಿದ್ದೇನೆ. ಆದರೆ ಈ ಉದ್ಯಮಪತಿಗಳ ನೆರವು ನನ್ನಲ್ಲಿ ಆಳವಾಗಿ ಬೇರೂರಿ ಮುಂದುವರೆದುಕೊಂಡುಬಂದಿರುವ ಕ್ರಾಂತಿಕಾರಿ ಧೋರಣೆಗಳನ್ನು ಕ್ರಮೇಣವಾಗಿ ಮೊಂಡುಗೊಳಿಸುತ್ತಾ ನನ್ನನ್ನು ಈ ವ್ಯವಸ್ಥೆಯೊಳಗೆ ಸೆಳೆದುಕೊಂಡುಬಿಡುತ್ತದೇನೋ ಎಂಬ ಆತಂಕವೂ ನನ್ನನ್ನು ಕಾಡುತ್ತಿದೆ. 

ಜಾಕ್: ರೋಸ್, ಭಾರತದ ನಾಗರಿಕಹಕ್ಕು ಮತ್ತು ಪ್ರಜಾತಾಂತ್ರಿಕ ಹಕ್ಕುಗಳ ಸಂಘಟನೆಗಳು ಬಹಳಷ್ಟು ಸ್ವತಂತ್ರ ತನಿಖೆಗಳನ್ನು ಸತ್ಯ ಶೋಧನೆಗಳನ್ನು ನಡೆಸುತ್ತಾ ಬಂದಿವೆ. ಅದರಲ್ಲೂ ಭಾರತದ ಪ್ರಭುತ್ವಗಳೇ  ಕ್ರೂgವಾಗಿ, ವ್ಯವಸ್ಥಿತವಾಗಿ ಮಾನವಹಕ್ಕುಗಳ ಉಲ್ಲಂಘನೆಯನ್ನು ನಡೆಸಿದಾಗ ಮತ್ತು ಅಂಥಾ ಸಂದರ್ಭಗಳಲ್ಲಿ ಅಸ್ಥಿತ್ವದಲ್ಲಿರುವ ಕಾನೂನು ವ್ಯವಸ್ಥೆಗಳು ನ್ಯಾಯವನ್ನು ಒದಗಿಸಲು ವಿಫಲವಾದಾಗ ಈ ನಾಗರಿಕ ಹಕ್ಕುಗಳ ಸಂಸ್ಥೆಗಳು ಸ್ವತಂತ್ರ ಮತ್ತು ನಿಖರವಾದ ಸಂಶೋಧನೆಗಳನ್ನು ನಡೆಸಿ ಸತ್ಯವನ್ನು ಹೊರತಂದಿವೆ. ಈ ಸತ್ಯಶೋಧನೆಗಳು ಭಾರತ ಪ್ರಭುತ್ವದ ಸ್ವೇಚ್ಚಾಚಾರ ಮತ್ತು ಕಾನೂನು ಬಾಹಿರತೆಗಳ ವಿರುದ್ಧ ಅಭಿಪ್ರಾಯವನ್ನು ಮತ್ತು ಅಂತಸ್ಸಾಕ್ಷಿಯನ್ನು ರೂಪಿಸುವ ಕೆಲಸವನ್ನು ಮಾಡಿವೆ. ಉದಾಹರಣೆಗೆ ೧೯೮೪ರ ನವಂಬರ್ ನಲ್ಲಿ ಸಿಖ್ ಸಮುದಾಯದ ಮೇಲೆ ಪ್ರಭುತ್ವದ ಬೆಂಬಲದೊಂದಿಗೆ ನಡೆದ ದಾಳಿಗಳ ಬಗ್ಗೆ ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಾಟಿಕ್ ರೈಟ್ಸ್ (ಪಿಯುಡಿಆರ್) ಮತ್ತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಸಂಸ್ಥೆಗಳು ಜಂಟಿಯಾಗಿ ಹೊರತಂದ ಹೂ ಆರ್ ದಿ ಗಿಲ್ಟಿ? (ತಪ್ಪಿತಸ್ಥರು ಯಾರು?) ಎಂಬ ವರದಿಯು ಅಂಥ ಆಳವಾದ ಮತ್ತು ನಿಖರವಾದ ಸತ್ಯಶೋಧನೆಯ ಫಲಿತವಾಗಿತ್ತು. ಅದರ ಕರಡು ನಿನ್ನ ಪತ್ರಿಕೆಯಲ್ಲೂ ಪ್ರಕಟವಾಗಿತ್ತು. ಅಂಥಾ ಪ್ರಬಲವಾದ ಮತ್ತು ಗಟ್ಟಿಯಾದ ತನಿಖಾ ವರದಿಗಳನ್ನು ನೀನು ಈಗಲೂ ಪ್ರಕಟಿಸಬೇಕೆಂದು ನಾನು ಬಯಸುತ್ತೇನೆ. ತನ್ನ ಗಟ್ಟಿಯಾದ ಸತ್ಯಶೋಧನೆ ಮತ್ತು ಸುಸಂಬದ್ಧ ಹಾಗೂ ತರ್ಕಬದ್ಧ ವಾದಗಳಿಂದಾಗಿ ಈಗಲೂ ಹೂ ಆರ್ ದಿ ಗಿಲ್ಟಿ ವರದಿಯು ಅತ್ಯುತ್ತಮ ತನಿಖಾ ವರದಿಯ ಮಾದರಿಯಾಗಿದೆ.

ರೋಸ್:  ಹೌದು ಜಾಕ್. ಖಂಡಿತಾ ನಾವದನ್ನು ಮಾಡುತ್ತೇವೆ. ಆ ವಿಷಯದಲ್ಲಿ ನಾನು ಅದೃಷ್ಟಶಾಲಿ. ಏಕೆಂದರೆ ನನ್ನ ಲೇಖಕರು ಸರ್ಕಾರದ ನೀತಿಗಳ ಬಗ್ಗೆ ವಿಮರ್ಶೆ ಮಾಡುವಾಗ ಅವು  ಅಲ್ಪಸಂಖ್ಯಾತ ಆಳುವವರ್ಗಗಗಳ ಮತ್ತು ದೊಡ್ಡ ಉದ್ಯಮಪತಿಗಳ ಆಸಕ್ತಿಗಳಿಗೆ ಎಷ್ಟು ಪ್ರಯೋಜನಕಾರಿಯಾಗಿದೆ ಎಂಬುದಕ್ಕಿಂತ ಹೆಚ್ಚಾಗಿ ಬಹುಸಂಖ್ಯಾತ ಜತೆಯ ಬದುಕಿನ ಮೇಲೆ ಏನು ಪರಿಣಾಮ ಬೀರುತ್ತಿದೆ ಎಂಬುದನ್ನು ಆಧರಿಸಿ ತೀರ್ಮಾನಕ್ಕೆ ಬರುತ್ತಾರೆ. ಆದರೆ ಅದರ ಜೊತೆಗೆ ಇಂದಿನ ನವ ಉದಾರವಾದಿ ಯುಗದಲ್ಲಿ ಆರೋಗ್ಯ ವಿಮೆ ಇಲ್ಲದೆ ಬದುಕುವುದೆಂದರೇನು ಎಂಬ ಬಗ್ಗೆ, ಸರಿಯಾದ ವಸತಿ ಸೌಲಭ್ಯಗಳಿಲ್ಲದಿರುವುದರ ಬಗ್ಗೆ, ತಮ್ಮ ಮಕ್ಕಳನ್ನು ಕೆಟ್ಟ ಶಾಲೆಗಳಿಗೆ ಕಳಿಸಬೇಕಾದ ಅನಿವಾರ್ಯತೆಯ ಕುರಿತು ಅಥವಾ ಸದಾ ಬಡತನ ಮತ್ತು ತೀವ್ರ ಸಂಕಷ್ಟದ ಭೀತಿಯಲ್ಲೇ ನಡೆಸಬೇಕಾಗಿರುವ ಬದುಕಿನ ಬಗ್ಗೆ ಆರ್ಥಿಕ ಮಾನವಶಾಸ್ತ್ರಜ್ನ (ಎಕಾನಾಮಿಕ್ ಆಂಥ್ರೋಪಾಲಜಿಸ್ಟ್) ರ ಮೊನಚಾದ ವಿಶ್ಲೇಷಣಾತ್ಮಕ ಲೇಖನಗಳನ್ನೂ ಪ್ರಕಟಿಸಬೇಕಾಗುತ್ತದೆ. ಶೋಷಕ ಮತ್ತು ದಮನಕಾರಿ ಸಾಮಾಜಿಕ ಸಂಬಂಧಗಳಿಂದಾಗಿಯೇ ಇಂಥಾ ದುರ್ಭರ ಪರಿಸ್ಥಿತಿಗಳು ಹುಟ್ಟಿಕೊಂಡಿವೆ.

ಜಾಕ್:  ರೋಸ್, ಆಗಿನಿಂದಲೂ ನಾವು ಈ ಸಾಪ್ತಾಹಿಕದ ಅರ್ಧಭಾಗವಾದ ಪತ್ರಿಕೋದ್ಯಮಕ್ಕೆ ಸಂಬಂಧಪಟ್ತ ವಿಷಯಗಳನ್ನು ಚರ್ಚಿಸುತ್ತಿದ್ದೇವೆ. ಆದರೆ ಇದರ ಮತ್ತರ್ಧ ಭಾಗವಾದ ಶೈಕ್ಷಣಿಕ ವಿದ್ವತ್ತಿನ ವಿಷಯಗಳ ಬಗ್ಗೆಯೂ ಆಷ್ಟೇ ಗಮನಕೊಡಬೇಕೆಂದು ನೀನು ಭಾವಿಸುವುದಿಲ್ಲವೇ?

ರೋಸ್: ಹೌದು ಅದು ಎಂಥಾ ಸಂಪಾದಕರಿಗೂ ದೊಡ್ಡ ಸವಾಲಿನ ವಿಷಯವೇ. ಅದೆರೀತಿ ತನಿಖಾ ಪತ್ರಿಕೋದ್ಯಮದ ಹಿನ್ನೆಲೆಯಿಂದ ಬಂದ ಸಂಪಾದಕರಿಗೂ ಇದು ಸವಾಲಿನ ವಿಷಯವೇ. ಹಾಗೆ ನೋಡಿದರೆ ಇತಿಹಾಸ, ಸಮಾಜಶಾಸ್ತ್ರ ಅಥವಾ ರಾಜಕೀಯ ಶಾಸ್ತ್ರಗಳ ವಿದ್ವತ್ತಿನ ಅಗತ್ಯಗಳನ್ನು ಪೂರೈಸಬಲ್ಲ ಸಾಮರ್ಥ್ಯವು ಅರ್ಥಶಾಸ್ತ್ರದ ಬಗ್ಗೆ ವಿದ್ವತ್ತುಳ್ಳ ಸಂಪಾದಕರಿಗೂ ಇಲ್ಲದೇ ಹೋಗಬಹುದು. ಅಂಥಾ ಸಂದರ್ಭಗಳಲ್ಲಿ ಹೊಸ ಸಂಪಾದಕರು ಏನು ಮಾಡಬಹುದೆಂದರೆ ತನ್ನ ಮಿತಿಗಳನ್ನು ಅರ್ಥಮಾಡಿಕೊಂಡು ಸಮಾಜವಿಜ್ನಾನದ ಪ್ರತಿಯೊಂದು ಶಾಖೆಗಳ ಸಂಪಾದಕೀಯ ಸಲಹೆಗಾರರ ಸಲಹೆಗಳನ್ನು ಆಧರಿಸಿ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು. ಆದರೆ ಈ ಪ್ರತಿಯೊಂದು ಶಾಖೆಗಳ ವಿದ್ವಾಂಸರ ಜೊತೆ ಸಂಪಾದಕರು ರೂಢಿಸಿಕೊಳ್ಳುವ ಭಾವನಾತ್ಮಕ ಮತ್ತು ಬೌದ್ಧಿಕ ಸಂಬಂಧಗಳು ಮಾತ್ರ ಪತ್ರಿಕೆಯ ವಿದ್ವತ್ತಿನ ಗುಣಮಟ್ಟದ ಮುಂದುವರೆಕೆಯನ್ನು ಖಾತರಿ ಪಡಿಸಬಲ್ಲದು. ಇದಲ್ಲದೆ ಸಂಪಾದಕರು ಖಂಡಿತವಾಗಿ ಭಾರತದ ಬೌದ್ಧಿಕ ವಲಯದ ಹಿನ್ನೀರಾಗಿ ಉಳಿದುಕೊಂಡಿರುವ ಯುವ ಮತ್ತು ಪ್ರತಿಭಾಶಾಲಿ ವಿದ್ವಾಂಸರನ್ನು ಗುರುತಿಸುವ, ಪ್ರೋತ್ಸಾಹಿಸುವ ಮತ್ತು ಬೆಳೆಸುವ ಕೆಲಸವನ್ನು ಮಾಡುತ್ತಾ ಅವರ ಅತ್ಯುತ್ತಮ ಬರಹಗಳನ್ನು ಪತ್ರಿಕೆಗೆ ನೀಡಲು ಮನಒಲಿಸುವ ಕೆಲಸವನ್ನೂ ಮಾಡಬೇಕಾಗುತ್ತದೆ.

ಜಾಕ್:  ರೋಸ್, ನಿನ್ನ ಮುಂದಿನ ಸಂಪಾದಕರಲ್ಲಿ ನೀನು ಏನೇನನ್ನು ನಿರೀಕ್ಷಿಸುತ್ತೀಯಾ?

ರೋಸ್:  ಅತ್ಯಂತ ಮುಖ್ಯವಾಗಿ ಲಿಬರಲ್ (ಉದಾರವಾದಿ) ಚಿಂತನೆಯುಳ್ಳವರಾಗಿರಬೇಕು. ಅದರರ್ಥ ಅವರು ಎಡಪಂಥೀಯ ಚಿಂತನೆಯುಳ್ಳವರೇ ಆಗಿರಬೇಕು ಎಂದೇನಲ್ಲ. ನನ್ನ ಮಟ್ಟಿಗೆ ಲಿಬರಲ್ ಸಂಪಾದಕರೆಂದರೆ ಒಂದು ಸಾಧಾರ ಮತ್ತು ಅಧಿಕೃತ ಇತಿಹಾಸ ಪ್ರಜ್ನೆಯ ಆಧಾರದಲ್ಲಿ ಯಾವುದೇ ಭೀತಿ ಅಥವಾ ಪ್ರೀತಿಯಿಲ್ಲದೆ ಸತ್ಯವನ್ನು ಪ್ರತಿಪಾದನೆ ಮಾಡಬಲ್ಲ ನಿಷ್ಕಳಂಕ ಬದ್ಧತೆ ಇರುವವರು; ವೈಜ್ನಾನಿಕ ವಿಧಾನಗಳನ್ನು ಎತ್ತಿಹಿಡಿಯುವವರು ಮತ್ತು ಜಗತ್ತಿನ ವಿದ್ಯಮಾನಗಳನ್ನು ಪ್ರಶ್ನಿಸುವ ಮತ್ತು ವಿಮರ್ಶಾತ್ಮಕವಾಗಿ ನೋಡುವ ಧೋರಣೆಯುಳ್ಳವರು. ನನಗೆ ನನ್ನ ಸಂಸ್ಥಾಪಕ ಸಂಪಾದಕರಾದ ಸಚಿನ್ ಚೌಧರಿಯವರ ನೆನಪು ಬರುತ್ತದೆ. ಎರಡನೆಯದಾಗಿ ಅವರು ತಮ್ಮ ಅಂತಃಸಾಕ್ಷಿಗೆ ಬದ್ಧವಾಗಿ ವರ್ತಿಸಬೇಕು ಮತ್ತು ಹಾಗೆ ಮಾಡುವಾಗ ತನ್ನ ಕ್ರಿಯೆಗಳು ತನ್ನ ಸಹವರ್ತಿಗಳ ಮೇಲೆ ಎಂಥಾ ಪರಿಣಾಮಗಳನ್ನು ಬೀರಬಹುದೆಂಬುದರ ಬಗ್ಗೆ ಸಂಪೂರ್ಣ ಎಚ್ಚರವನ್ನು ಹೊಂದಿರಬೇಕು. ಅಂದರೆ ಪ್ರತಿಯೊಬ್ಬ ವ್ಯಕ್ತಿಯೂ ಮುಖ್ಯರಾದವರೇ ಎಂಬ ಧೋರಣೆ ಉಳ್ಳವರಾಗಿರಬೇಕು...ಅಂಥ ವ್ಯಕ್ತಿಗಳು ಮಾತ್ರ ಕೃಷ್ಣರಾಜ್ ಮತ್ತು  ರಜನಿ ಎಕ್ಸ್ ದೇಸಾಯಿಯಂಥವರು ಹುಟ್ಟುಹಾಕಿ ಸಿ. ರಾಮಮನೋಹರ ರೆಡ್ಡಿಯಂಥವರು ಜೀವಂತವಾಗಿ ಮುಂದುವರೆಸಿಕೊಂಡು ಹೋಗಲು ಶ್ರಮಿಸಿದಂಥಾ ಪ್ರಜಾತಾಂತ್ರಿಕ ಮತ್ತು ಆದರ್ಶಮಯ ಶ್ರಮ ಸಂಸ್ಕೃತಿಯನ್ನು ಮತ್ತೆ ಪುನರ್‌ಸ್ಥಾಪಿಸಲು ಶಕ್ಯರಾಗುತ್ತಾರೆ. ಒಂದು ದೂರಗಾಮಿ ದೃಷ್ಟಿಯಿಂದ ನೋಡಿದರೆ ನಾನು ಒಂದು ದೊಡ್ಡ ಸಂಸ್ಥೆಯಾಗಿದ್ದೇನೆ. ಹೆಚ್ಚೆಚ್ಚು ಅಸಮಾನತೆಗಳು ಮತ್ತು ಶ್ರೇಣೀಕರಣಗಳು ಸಂಸ್ಥೆಯೊಳಗೆ ಕಾಲಿಟ್ಟಿವೆ. ಹಾಗಿದ್ದಾಗಲೂ ರಾಮಮನೋಹರ್ ಅವರು ಕೆಲಸದ ಜಾಗದಲ್ಲಿ ಪ್ರಜಾತಾಂತ್ರಿಕ ಸಂಸ್ಕೃತಿಯನ್ನು ಜೀವಂತವಾಗಿಟ್ಟಿದ್ದರು. ಒಬ್ಬ ಅಧಿಕಾರಶಾಹಿ ಮತ್ತು ಸ್ವಕೇಂದ್ರಿತ ವ್ಯಕ್ತಿತ್ವವುಳ್ಳವರು ನಾಯಕತ್ವ ವಹಿಸಿದಾಗ ಮಾತ್ರ ಅಂಥಾ ಶ್ರಮಸಂಸ್ಕೃತಿಯು  ನಾಶವಾಗುತ್ತದೆ. ಮೂರನೆಯದಾಗಿ ಇPW ನಲ್ಲಿರುವ ಎಕಾನಾಮಿಕ್ (ಆರ್ಥಿಕ) ಅಂಶವು ಪೊಲಿಟಿಕಲ್ (ರಾಜಕೀಯ) ಮತ್ತು ಸಮಾಜಶಾಸ್ತ್ರೀಯ ಅಂಶಗಳಿಂದ ಮೂಲೆಗುಂಪಾಗಿಬಿಟ್ಟಂತೆ ಕಾಣುತ್ತದೆ. ಆ ಸಮತೋಲನವನ್ನು ಮರುಸ್ಥಾಪಿಸಬೇಕೆಂದರೆ ಭಿನ್ನಶಿಸ್ತಿನ ಹಾಗೂ ಅಸಾಂಪ್ರದಾಯಿಕ (ಹೆಟೆರೋಡಾಕ್ಸ್ ) ಅರ್ಥಶಾಸ್ತ್ರಜ್ನರೊಬ್ಬರು ಸಂಪಾದಕರಾಗಬೇಕಾಗುತ್ತದೆ. (ಹೆಟೆರೋಡಾಕ್ಸ್ ಎಂದರೆ ನವ ಉದಾರವಾದಿ (ನಿಯೋ ಕ್ಲಾಸಿಕಲ್) ಯಲ್ಲದ ಇತರ ಎಲ್ಲಾ ಅರ್ಥಶಾಸ್ತ್ರದ ಧೋರಣೆಗಳನ್ನು ಸೂಚಿಸುವ ಒಂದು ಸಮಾಸ ಪದ). ಹಾಗೂ ಒಪನ್ ವೇಯ್ನ್ ಆಫ್ ಲ್ಯಾಟಿನ್ ಅಮೆರಿಕ  ಎಂಬ ಪ್ರಖ್ಯಾತ ಪುಸ್ತಕದ ಕರ್ತೃ, ಉರುಗ್ವೆಯ ಲೇಖಕ ಎಡ್ವರ್ಡ್ ಗೆಲಿಯಾನೋ ಒಮ್ಮೆ ಹೇಳಿದಂತೆ: ಬರವಣಿಗೆಯನ್ನು ಪ್ರಾಮಾಣಿಕತೆಯಿಂದ ಮಾಡಬೇಕು. ನಮ್ಮ ಮಾತುಗಳ ಮೂಲಕವೇ ನಾವು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುತ್ತೇವೆ. ನಾನಾಡುವ ಮಾತೇ ನಾನಾಗಿರುತ್ತೇನೆ. ಹೀಗಾಗಿ ಮಾತು ಕೊಟ್ಟರೆ ನನ್ನನ್ನೇ ನಾನು ಕೊಟ್ಟಂತೆ.

ಜಾಕ್:  ಓ ನನ್ನ ಪ್ರೀತಿಯ ರೋಸ್. ಅದ್ಭುತ. ನಿನ್ನನ್ನು ನೀನು ಮರುಸ್ಥಾಪಿಸಕೊಳ್ಳಲೇ ಬೇಕು. ನೀನು ಮುನ್ನುಗ್ಗಲೇ ಬೇಕು ರೋಸ್. ಈ ಕರಾಳ ಸಂದರ್ಭದಲ್ಲಿ ನಿನ್ನನ್ನು ನೀನು ಸಾಯಗೊಡಲಾರೆ ಎಂದು ನಾನು ಬಲ್ಲೆ. ನಾನು ನಿನ್ನ ಕಡೆ ಸೆಳೆಯಲ್ಪಟ್ಟದ್ದು ನನ್ನ ಜೀವನದಲ್ಲಿ ಸಂಭವಿಸಿದ ಅತ್ಯುತ್ತಮ ಘಟನೆ.  ನಾನು ಅದಕಾಗಿ ಕೃತಜ್ನನಾಗಿದ್ದೇನೆ.

ರೋಸ್:  ಜಾಕ್. ಈ ಅನಗತ್ಯ ಬೆಳವಣಿಗೆಗಳ ಮುನ್ಸೂಚನೆಗಳು ನನಗೆ ದೊರೆಯುತ್ತಿದ್ದರೂ ನಾನು ಪರಿಗಣಿಸಲಿಲ್ಲ. ಆದರೆ ಅದು ನನ್ನನ್ನು ಉಳಿಸಿ ಪೋಷಿಸುತ್ತಿದ್ದ ನನ್ನ ಅಸ್ಥಿತ್ವದ ತಳಪಾಯವನ್ನು, ತೊಲೆಗಂಬವನ್ನೂ ಮತ್ತು ಸೂರನ್ನೂ ಸಹ ನಾಶಮಾಡಲು ಪ್ರಾರಂಭಿಸಿತ್ತು. ನಿನ್ನ ಮತ್ತು ನನ್ನ ಇಡೀ ಸಂಪಾದಕೀಯ ತಂಡದ ಬೆಂಬಲವಿಲ್ಲದಿದ್ದಲ್ಲಿ ನಾನು ಸಂಪೂರ್ಣವಾಗಿ ನಾಶವಾಗುತ್ತಿದ್ದೆ. ಅದಕ್ಕಾಗಿ ನಾನು ನನ್ನ ಇಡೀ ತಂಡವನ್ನೇ ಅಭಿನಂದಿಸಬೇಕು.

ಜಾಕ್: ಖಂಡಿತಾ. ಆದರೆ ನೀನು ನನಗೆ ಒಂದು ಭರವಸೆಯನ್ನು ನೀಡಲೇ ಬೇಕು. ಸಂದರ್ಭವೂ ಎಷ್ಟೇ ನಿರಾಶಾದಾಯಕವಾಗಿದ್ದರೂ, ಎಂಥದೇ ಗಂಡಾಂತರಗಳು ಎದುರಾದರೂ ನೀನು ಕೈ ಚೆಲ್ಲದೇ ಎದುರಿಸಿ ಯಶಸ್ವಿಯಾಗಿ ಮುಂದುವರೆಯುತ್ತೇನೆ ಎಂದು ಮಾತು ಕೊಡಬೇಕು

ರೋಸ್:  ಇಲ್ಲ ಜಾಕ್. ಖಂಡಿತಾ ನಾನು ಕೈ ಚೆಲ್ಲುವುದಿಲ್ಲ. ಸಮಸ್ಯೆಯನ್ನು ಎದುರಿಸದೇ ಓಡಿ ಹೋಗುವುದಿಲ್ಲ. ಮಾತು ಕೊಡುತ್ತೇನೆ.

  (ಟೈಟಾನಿಕ್ ಚಿತ್ರಕಥೆಯ ಕೆಲವು ಭಾಗಗಳನ್ನು ಇಲ್ಲಿ ಬಳಸಿಕೊಂಡಿದ್ದೇನೆ. ಆದರೆ ಈ ಬರಹಕ್ಕೂ ಮತ್ತು ಆ ಸಿನಿಮಾಗು ಇದಕ್ಕಿಂತ ಹೆಚ್ಚಿನ ಸಾಮ್ಯತೆಗಳಿಲ್ಲ್ಲ.)

Updated On : 13th Nov, 2017

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top