ಸುಕುಮಾರ್ ಮುರಳೀಧರನ್ ಬರೆಯುತ್ತಾರೆ:
ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ನೈತಿಕತೆ ಮತ್ತು ವಿವೇಕಗಳ ಮೇಲೆ ತಮಗಿರುವ ಏಕಸ್ವಾಮ್ಯವನ್ನು ಪ್ರಶ್ನಿಸುವವರ ವಿರುದ್ಧ ಬಹಿರಂಗವಾಗಿ ಹರಿಹಾಯುವುದನ್ನು ಒಂದು ಹವ್ಯಾಸವನ್ನಾಗಿಯೇ ಬೆಳೆಸಿಕೊಂಡಿದ್ದಾರೆ. ಗಾಜಾ ಪಟ್ಟಿಯಲ್ಲಿ ಇಸ್ರೇಲಿನಿಂದ ತುಳಿತಕ್ಕೆ ಒಳಗಾಗಿರುವ ಪ್ಯಾಲೆಸ್ತೇನ್ ಜನರಿಗೆ ಐರ್‌ಲ್ಯಾಂಡ್ ಸರ್ಕಾರ ಸಹಕಾರವನ್ನು ನೀಡಿದ ಪಾಪದಿಂದಾಗಿ ಇತ್ತೀಚೆಗೆ ಆ ದೇಶದ ಪ್ರಧಾನಿ ನೇತನ್ಯಾಹು ಅವರಿಂದ ಉಪದೇಶಾಮೃತಗಳನ್ನು ಕೇಳಬೇಕಾಗಿ ಬಂತು. ಇದಕ್ಕೆ ಮುನ್ನ ಇಸ್ರೇಲ್‌ಗೆ ಭೇಟಿ ನೀಡಿದ್ದ ಜರ್ಮನಿಯ ವಿದೇಶಾಂಗ ಮಂತ್ರಿಯನ್ನು ಅವರು ಕಟುವಾಗಿ ವಿಮರ್ಶಿಸಿದ್ದು ಮಾತ್ರವಲ್ಲದೆ ಭೇಟಿಯನ್ನೂ ನಿರಾಕರಿಸಿದ್ದರು. ಅದಕ್ಕೆ ಕಾರಣವೇನೆಂದರೆ ಆಕ್ರಮಿಸಲ್ಪಟ್ಟ ಪ್ಯಾಲೆಸ್ತೀನ್ ಪ್ರದೇಶದಲ್ಲಿ ನಿರಂತರವಾಗಿ ಮುಂದುವರೆಯುತ್ತಿರುವ ಅಪರಾಧಗಳನ್ನು ಪಟ್ಟಿ ಮಾಡುತ್ತಿರುವ ಬ್ರೇಕಿಂಗ್ ಸೈಲೆನ್ಸ್ (ಮೌನ ಮುರಿಯೋಣ) ಎಂಬ ಇಸ್ರೇಲಿ ಸೈನಿಕರ ಗುಂಪೊಂದನ್ನು ಜರ್ಮನಿಯ ವಿದೇಶಾಂಗ ಮಂತ್ರಿಯು ಭೇಟಿಯಾಗಬಯಸಿದ್ದು.