ISSN (Print) - 0012-9976 | ISSN (Online) - 2349-8846

ಪ್ರತಿಕೂಲ ಪರಿಸರದಲ್ಲೇ ಬೆಳೆದ ಪತ್ರಿಕೆ

ಪ್ರತಿಕೂಲ ಪರಿಸರದ ನಡುವೆಯೂ ಅಲ್ ಜಝೀರಾ ವಾಹಿನಿಯು ಆಳುವವರು ಬಿತ್ತರಿಸುವ ಕಥನಗಳಿಗೆ ಸವಾಲೆಸೆಯುತ್ತಲೇ ಬಂದಿದೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

ಸೌದಿ ಅರೇಬಿಯಾ ನೇತೃತ್ವದ ಅರಬ್ ದೇಶಗಳ ಗುಂಪು ೨೦೧೭ರ ಜೂನ್ ೨೩ರಂದು ಖತಾರ್ ದೇಶದ ಮೇಲೆ ಆರ್ಥಿಕ ಮತ್ತು ರಾಜತಾಂತ್ರಿಕ ದಿಗ್ಭಂಧನಗಳನ್ನು ವಿಧಿಸಿತು. ಪರಿಸ್ಥಿತಿಯು ಮೊದಲಿನಂತಾಗಬೇಕೆಂದರೆ ತಾವು ವಿಧಿಸುವ ೧೩ ಶರತ್ತುಗಳನ್ನು ಪಾಲಿಸಬೇಕೆಂಬ ಕರಾರನ್ನು ಅವು  ಖತಾರ್ ದೇಶದ ಮೇಲೆ ವಿಧಿಸಿವೆ. ಅದರಲ್ಲಿ  ಅಲ್ ಜಝಿರಾ ಸುದ್ದಿ ಜಾಲ ಸಂಸ್ಥೆಯನ್ನು ಮುಚ್ಚಿಸಬೇಕೆಂಬುದೂ ಒಂದು. ಇದು ಅನಿರೀಕ್ಷಿತವಾದದ್ದೇನೂ ಆಗಿರಲಿಲ್ಲ. ಅರಬ್ ಪ್ರಪಂಚದ ಮೊದಲ ಸುದ್ದಿ ಜಾಲ ಎಂಬ ಹೆಗ್ಗಳಿಕೆಯೊಂದಿಗೆ ೧೯೯೬ರಲ್ಲಿ ಪ್ರಾರಂಭವಾದ ಅಲ್ ಜಝೀರಾ  ಸಂಸ್ಥೆಯು ಅರಬ್ ಜಗತ್ತಿನ ಸರ್ವಾಧಿಕಾರಿಗಳಿಗೆ ಮತ್ತು ರಾಜಪ್ರಭುತ್ವಗಳಿಗೆ ಮಗ್ಗಲಮುಳ್ಳಾಗಿ ಪರಿಣಮಿಸಿದೆ. ಅಲ್ ಜಝೀರಾ ಸುದ್ದಿಜಾಲವು ಕಾರ್ಯಾಚರಣೆ ನಡೆಸುವುದು ಖತಾರ್ ದೇಶದಿಂದ. ಆದರೆ ಅಮೆರಿಕ ಮೂಲದ ಫ್ರೀಡಂ ಹೌಸ್ ಸಂಸ್ಥೆಯು ೨೦೧೬ರಲ್ಲಿ ಮಾಡಿರುವ ವರ್ಗೀಕರಣದ ಪ್ರಕಾರ ಖತಾರ್ ದೇಶದ ಮಾಧ್ಯಮಗಳು ಮುಕ್ತವಲ್ಲ. ಆದರೆ ಆ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಇದೇ ಬಗೆಯ ಇತರ ಸುದ್ದಿ ಸಂಸ್ಥೆಗಳಿಗೆ ಹೋಲಿಸಿದಲ್ಲಿ ಅಲ್ ಜಝೀರಾ ಸಂಸ್ಥೆ ಹೆಚ್ಚು ಮುಕ್ತವಾಗಿ ಕೆಲಸ ಮಾಡುತ್ತಿದೆ ಎಂದೇ ಹೇಳಬೇಕು. ವಿಪರ್ಯಾಸವೆಂದರೆ ಸೌದಿ ಅರೇಬಿಯಾವು ತನ್ನ ದೇಶದಿಂದ ಕಾರ್ಯ ನಿರ್ವಹಿಸುತ್ತಿದ್ದ ಬಿಬಿಸಿ ಅರೇಬಿಕ್ ಅನ್ನು ಮುಚ್ಚಿಸಿz ನಂತರದಲ್ಲಿ  ಅಲ್ಲಿ ಕೆಲಸ ಮಾಡುತ್ತಿದ್ದ ೧೫೦ಕ್ಕೂ ಹೆಚ್ಚು ಪರಿಣಿತ ಸಿಬ್ಬಂದಿ ನೇರವಾಗಿ ಈ ಹೊಸ ಸುದ್ದಿಜಾಲವನ್ನು ಸೇರಿಕೊಳ್ಳಲು ಅನುಮತಿ ನೀಡುವ ಔದಾರ್ಯ ತೋರಿದ್ದರಿಂದಲೇ ಅಲ್ ಜಝೀರಾ ಅರೇಬಿಕ್ (ಎಜಿಎ)ಸಂಸ್ಥೆ ಹುಟ್ಟಿಕೊಂಡಿತು. 

ಅಲ್ ಜಝೀರಾ ಇಂಗ್ಲೀಷ್ (ಎಜೆಇ) ವಾಹಿನಿಯನ್ನು ಇಡೀ ಜಗತ್ತೇ ಬೆರಗಿನಿಂದ ವೀಕ್ಷಿಸುತ್ತದೆ. ಏಕೆಂದರೆ ಅಲ್ ಜಝೀರಾ ತನ್ನ ವೃತ್ತಿಪರತೆ ಮತ್ತು  ವಿಶ್ವಾಸಾರ್ಹತೆ ಗಳ ಮೂಲP ತನ್ನ ಘನತೆಯನ್ನು ಹೆಚ್ಚಿಸಿಕೊಂಡಿದೆ.  ಅರಬ್ ಜಗತ್ತಿನ ಮತ್ತು ಉತ್ತರ ಆಫ್ರಿಕಾದ ವಿದ್ಯಮಾನಗಳ ಬಗ್ಗೆ ಈವರೆಗೆ ಪಾಶ್ಚಿಮಾತ್ಯ ದೇಶಗಳ ಸ್ಥಾಪಿತ ಅಂತರರಾಷ್ಟೀಯ ಮಾಧ್ಯಮಗಳು ವರದಿ ಮಾಡುತ್ತಿದ್ದಕ್ಕಿಂತ ಭಿನ್ನವಾಗಿ ಸ್ಥಳಿಯ ಬೇರುಗಳನ್ನು ಹೊಂದಿರುವ ಮತ್ತು ಹೊಸದಾದ ದೃಷ್ತಿಕೋನವನ್ನು ಅದು ನೋಡುಗರಿಗೆ ಒದಗಿಸಿದೆ. ಆದರೆ ಅರಬ್ ಜಗತ್ತಿನ ಸರ್ವಾಧಿಕಾರಿಗಳಿಗೆ ನಿದ್ದೆಗೆಡಿಸುತ್ತಿರುವುದು ಅಲ್ ಜಝೀರಾದ ಅರಬ್ಬಿ ವಾಹಿನಿ.  ಮಾಧ್ಯಮಗಳ ಅತಿ ಹೆಚ್ಚಿನ ನಿಯಂತ್ರಣ ಇರುವ ದೇಶಗಳಲ್ಲಿ  ಭಿನ್ನಧ್ವನಿಗಳಿಗೆ ಸಿಗುವುದಕ್ಕಿಂತ ಅತಿ ಹೆಚ್ಚಿನ ಅವಕಾಶವನ್ನು ಈ ಎಜೆಎ ಕೊಡುತ್ತಾ ಬಂದಿದೆ. ಅರಬ್ ಸ್ಪ್ರಿಂಗ್ (ಅರಬ್ ವಸಂತ)  ಎಂದು ಕರೆಸಿಕೊಳ್ಳಲ್ಪಟ್ಟ ತುನಿಸಿಯಾ ಮತ್ತು ಈಜಿಪ್ಟ್ ಗಳ ಜನದಂಗೆಗಳನ್ನು ವಿಸ್ತೃತವಾಗಿ ಬಿತ್ತರಿಸಿದ ಕೀರ್ತಿ ಈ ಎಜೆಎ ಗೆ ಸೇರಬೇಕು. ಹಾಗೂ ಸೆಪ್ಟೆಂಬರ್ ೧೧ರ ದಾಳಿಯ ನಂತರದಲ್ಲಿ ಒಸಾಮಾ ಬಿನ್ ಲಾಡೆನ್ ಸಂದರ್ಶನ ನೀಡಿದ ಏಕೈಕ ವಾಹಿನಿ ಈ ಎಜೆಎ ಆಗಿತ್ತು. ಇವೆಲ್ಲದರಿಂದಾಗಿ ಅದರ ನೋಡುಗರ ಸಂಖ್ಯೆ ಹೆಚ್ಚಾದರೂ ನೆರೆಹೊರೆಯ ದೇಶಗಳಲ್ಲಿ ಇದರ ಬಗ್ಗೆ ಆತಂಕ-ಸಂದೇಹಗಳು  ಹೆಚ್ಚಾದವು. ಏಕೆಂದರೆ ಏಕೆಂದರೆ ಖತಾರಿನ ರಾಜಕುಟುಂಬವು ಈ ವಾಹಿನಿಯನ್ನು ಉತ್ತೇಜಿಸಿದ್ದು ಮಾತ್ರವಲ್ಲದೆ ಪಾಕ್ಷಿಕವಾಗಿ ಅದರ ಒಡೆತನವನ್ನೂ ಹೊಂದಿದೆ. ಈ ವಾಹಿನಿಯು ಮುಸ್ಲಿಂ ಬ್ರದರ್‌ಹುಡ್ ಮತ್ತಿತರ ತೀವ್ರಗಾಮಿ ಸಂಘಟನೆಗಳ ಬಗ್ಗೆ ಮೃದು ಧೋರಣೆಯನ್ನು ಹೊಂದಿದೆಯೆಂದೂ, ಕೈರೋದ ತಾಹಿರ್ ಚೌಕದಲ್ಲಿ ನಡೆದ ಪ್ರತಿಭಟನೆಗಳಿಗೆ ಸಕ್ರಿಯ ಬೆಂಬಲವನ್ನು ನೀಡಿತೆಂದೂ ಆರೋಪಗಳನ್ನು ಹೇರಲಾಗಿದೆ. ಆದರೆ ಇವೆಲ್ಲವನ್ನು ಜಝೀರಾ ಬಲವಾಗಿ ನಿರಾಕರಿಸಿದೆ. ತೀವ್ರಗಾಮಿ ಇಸ್ಲಾಮಿಕ್ ಗುಂಪುಗಳ ಅಭಿಪ್ರಾಯಗಳಿಗೂ ಅವಕಾಶವನ್ನು ಕಲ್ಪಿಸುವುದು ತನ್ನ ವೃತ್ತಿಧರ್ಮವೆಂದು ಅಲ್ ಜಝೀರಾ ವಾದಿಸುತ್ತದೆ. ಆದರೆ ಸೌದಿ ನೇತೃತ್ವದ ಗುಂಪು ಈ ವಾದವನ್ನು ಒಪ್ಪಲು ತಯಾರಿಲ್ಲ. ಬದಲಿಗೆ ಅದು ಉದ್ದೇಶಪೂರ್ವಕವಾಗಿ ನೀಡುತ್ತಿರುವ ಪ್ರಚೋದನೆಯೆಂದು ಅವರ ಭಾವಿಸುತ್ತಾರೆ.

ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತಾ ಎಲ್-ಸಿಸಿಯನ್ನು ಟೀಕಿಸುತ್ತಿದ್ದ ಕಾರಣದಿಂದಾಗಿ ೨೦೧೩ರಲ್ಲಿ ಅಲ್ ಜಝೀರಾ ವಾಹಿನಿಯು ತನ್ನ ಈಜಿಪ್ಟ್ ಶಾಖೆಯಾಗಿದ್ದ ಚಾನೆಲ್ ಲೈವ್ ಈಜಿಪ್ಟ್ ಅನ್ನು ಮುಚ್ಚಬೇಕಾಯಿತು. ಆದರೂ ಅದು ದೋಹಾ ದಿಂದ ಪ್ರಸಾರ ಮುಂದುವರೆಸಿತು. ಆದರೆ ಈಜಿಪ್ಟ್ ಸರ್ಕಾರದ ಒತ್ತಡಕ್ಕೆ ಮಣಿದು ೨೦೧೪ರಲ್ಲಿ ಖತಾರ್ ಸರ್ಕಾರ ಅದನ್ನು ಕೂಡಾ ಮುಚ್ಚಿಸಿತು. ಹೀಗಾಗಿ ಈ ಸ್ವತಂತ್ರ ಸುದ್ದಿ ವಾಹಿನಿಯ ವಿಷಯಕ್ಕೆ ಬರುವುದಾದರೆ ಖತಾರ್ ಕೂಡಾ ಸಂಪೂರ್ಣವಾಗಿ ದೋಷಮುಕ್ತವೇನಲ್ಲ. ಖತಾರ್ ಸಂವಿಧಾನದ ೪೭ನೇ ಕಲಮು ಸಂದರ್ಭ ಮತ್ತು ಪರಿಸ್ಥಿತಿಗೆ ಒಳಪಟ್ಟು ಅಭಿವ್ಯಕ್ತಿ ಸ್ವಾತಂತ್ರವನ್ನು ಖಾತರಿಪಡಿಸುತ್ತದೆ. ಈ ಸಂದರ್ಭ ಮತ್ತು ಪರಿಸ್ಥಿತಿಗಳಲ್ಲಿ ರಾಜಪ್ರಭುತ್ವವನ್ನು ಹಾಗೂ ಖತಾರ್ ದೇಶದ ಪರಿಸ್ಥಿಗಳನ್ನು ಟೀಕಿಸುವುದೂ ಸಹ ಸೇರ್ಪಡೆಯಾಗಿದೆ. ಆ ಕಾರಣದಿಂದಾಗಿಯೇ ೨೦೧೩ರಲ್ಲಿ ದೋಹಾ ಮಾಧ್ಯಮ ಸ್ವಾತಂತ್ರ್ಯ ಕೇಂದ್ರದ ನಿರ್ದೇಶಕ ಜಾನ್ ಕ್ಯುಲೆನ್ ಅವರನ್ನು ಅವರ ಸ್ಥಾನದಿಂದ ಪದಚ್ಯುತಿಗೊಳಿಸಲಾಯಿತು. ಏಕೆಂದರೆ ಆ ಕೇಂದ್ರವು ಗಲ್ಫ್ ಕೋಆಪರೇಷನ್ ಕೌನ್ಸಿಲ್ (ಗಲ್ಫ್ ಸಹಕಾರ ಪರಷತ್ತು)ನ ಆರು ದೇಶಗಳಲ್ಲಿ ಯಾವ ರೀತಿ ಮಾಧ್ಯಮಗಳನು ದಮನ ಮಾಡುವ ನೀತಿಗಳಿವೆಯೆಂದು ಬಯಲುಗೊಳಿಸಿತ್ತಲ್ಲದೆ ಖತಾರ್ ದೇಶದಲ್ಲಾದರೂ ಹೆಚ್ಚಿನ ಮಾಧ್ಯಮ ಸ್ವಾತಂತ್ರ್ಯವಿರಬೇಕೆಂದು ಆಗ್ರಹಿಸಿತ್ತು. ಅಷ್ಟು ಮಾತ್ರವಲ್ಲ. ಖತಾರ್ ದೇಶದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಲ್ಲಿ ಶೇ.೯೪ರಷ್ಟು ಜನ ದಕ್ಷಿಣ ಏಷಿಯಾ ದೇಶಗಳಿಂದ ವಲಸೆ ಬಂದವರಾಗಿದ್ದು, ಅವರ ಕೆಲಸದ ಪರಿಸ್ಥಿತಿಗಳನ್ನು ಟೀಕಿಸಿ ಮಾಡುವ ವರದಿಗಳನ್ನೂ ಸಹ ಖತಾರ್ ಸಹಿಸಿಕೊಳ್ಳುವುದಿಲ್ಲ.

ಹಾಗೆ ನೋಡಿದರೆ ಮತ್ತೊಂದು ದೇಶದಿಂದ ಒತ್ತಡವನ್ನು ಅನುಭವಿಸುತ್ತಿರುವ ಸುದ್ದಿ ಜಾಲಗಳಲ್ಲಿ ಅಲ್ ಜಝೀರಾ ಮೊದಲನೆಯದೇನಲ್ಲ. ೨೦೦೭ರಲ್ಲಿ ಪಾಕಿಸ್ತಾನದ ಜಿಯೋ ಮತ್ತು ಎಆರ್‌ವೈ ಒನ್ ವರ್ಲ್ಡ್ ಎಂಬ ಎರಡು ಸುದ್ದಿ ವಾಹಿನಿಗಳು ದುಬೈ ಮೀಡಿಯಾ ಸಿಟಿ ಇಂದ ಕೆಲಸ ನಿರ್ವಹಿಸುತ್ತಿದ್ದವು. ಸರ್ಕಾರವು ಈ ವಾಹಿನಿಗಳ ಸುದ್ದಿ ಸ್ವಾತಂತ್ರ್ಯದಲ್ಲಿ ಯಾವುದೇ ರೀತಿ ಮಧ್ಯಪ್ರವೇಶ ಮಾಡುವುದಿಲ್ಲವೆಂಬ ಭರವಸೆಯನ್ನೂ ನೀಡಿತ್ತು. ಆದರೂ ಅವುಗಳನ್ನು ಮುಚ್ಚಿಸಬೇಕೆಂದು ಪಾಕಿಸ್ತಾನದ ಅಂದಿನ ಅಧ್ಯಕ್ಷ ಪರ್ವೇಜ್ ಮುಷರಫ್ ಹೇರಿದ ಒತ್ತಡಕ್ಕೆ ಮಣಿದು ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ಸರ್ಕಾರ ಆ ವಾಹಿನಿಗಳ ಪಸ್ರಾವನ್ನು ಬಂದ್ ಮಾಡಿಸಿತು. ಅಂತಿಮವಾಗಿ ಒಂದು ರಾಜಿ ಒಪ್ಪಂದ ಮಾಡಿಕೊಂಡು ಆ ವಾಹಿನಿಗಳಿಗೆ ಕೇವಲ ಮನರಂಜನಾತ್ಮಕ ಕಾರ್ಯಕ್ರಮಗಳನ್ನು  ಮಾತ್ರ ಪ್ರಸಾರ ಮಾಡಲು ಅನುಮತಿ ನೀಡಲಾಯಿತು.

ಇದೀಗ ಅಲ್‌ಜಝೀರಾ ಇಂಗ್ಲಿಷ ವಾಹಿನಿಗೆ ವಿವಿಧ ಅಂತರರಾಷ್ಟ್ರೀಯ ಪತ್ರಕರ್ತರ ಸಂಘಟನೆಗಳಿಂದ ಬೆಂಬಲದ ಮಹಾಪೂರವೇ ಹರಿದು ಬರುತ್ತಿವೆ. ಆದರೂ ಈ ವಾಹಿನಿಯನ್ನು ಮುಚ್ಚಿಸಲು ನಡೆಯುತ್ತಿರುವ ದಮನವನ್ನು ಕೇವಲ ಅಭಿವ್ಯಕ್ಟಿ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ದಮನವೆಂದು ಮಾತ್ರ ವಿವರಿಸಿಕೊಳ್ಳಲು ಸಾಧ್ಯವಿಲ್ಲ. ಅಭಿವ್ಯಕ್ತಿ ಅಥವಾ ಮಾಧ್ಯಮ ಸ್ವಾತಂತ್ರ್ಯಗಳ ಪರಿಕಲ್ಪನೆಗಳ  ಗಂಧ ಗಾಳಿ ತಿಳಿಯದ ಪ್ರದೇಶವೊಂದರಲ್ಲಿ ಅಲ್ ಜಝೀರಾ ಸಂಸ್ಥೆಯನ್ನು ಕೃತಕ ನರ್ಸರಿಯಲ್ಲಿ ಸಸಿಗಳನ್ನು ಪೋಷಿಸಿ ಬೆಳೆಸುವಂತೆ ಜತನದಿಂದ ಬೆಳೆಸಿಕೊಂಡು ಬರಲಾಗಿತ್ತು. ಆ ಪ್ರದೇಶದ ಪ್ರತಿಯೊಂದು ದೇಶವೂ ಸಹ ಒಂದೋ ಸರ್ವಾಧಿಕಾರಿ ಅಥವಾ ಸಂಪೂರ್ಣ ರಾಜಪ್ರಭುತ್ವವುಳ್ಳ ರಾಷ್ಟ್ರಗಳಾಗಿವೆ. ಇಲ್ಲಿನ ಬಹುಪಾಲು ಸರ್ಕಾರಗಳು ಮಾಧ್ಯಮವನ್ನು ತಮ್ಮ ಪ್ರಚಾರದ ಸಾಧನಗಳೆಂದೇ ಪರಿಗಣಿಸಿದ್ದು ಅವೂ ಸಹ ಸರ್ಕಾರಗಳು ಹಾಕಿಕೊಟ್ಟ ಚೌಕಟ್ಟನ್ನು ದಾಟುವುದಿಲ್ಲ. ಈ ಚೌಕಟ್ಟನ್ನು ಮೀರಲು ಯತ್ನಿಸಿದ ಪತ್ರಕರ್ತರು ಬೆದರಿಕೆಗೊಳಗಾಗುವುದು ಅಥವಾ ಜೈಲುಪಾಲಾಗುವುದು ಇಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಖತಾರ್ ದೇಶದ ಅಂತರಿಕ ರಾಜಕಾರಣಕ್ಕೆ ಸಂಬಂಧಟ್ಟಂತೆ ಅಲ್ ಜಝೀರಾ ಸಹ ತನಗೆ ಹಾಕಿದ್ದ ಗಡಿ ರೇಖೆಯನ್ನು ಮೀರಿರಲಿಲ್ಲವಾದ್ದರಿಂದ ಅದಕ್ಕೆ ರಾಜಾನುಗ್ರಹ ಮುಂದುವರೆದಿತ್ತು.

ಈವರೆಗಂತೂ ಸೌದಿ ನೇತೃತ್ವದ ಗುಂಪಿನ ಶರತ್ತುಗಳಿಗೆ ಖತಾರ್ ಮಣಿಯುವಂತೆ ಕಂಡಿಲ್ಲ. ಒಂದು ವೇಳೆ ಅದು ರಾಜಿ ಮಾಡಿಕೊಂಡು ಅಲ್ ಜಝೀರಾವನ್ನು ಮುಚ್ಚಿಸಲು ಅಥವಾ ಅದರ ಪ್ರಸಾರದ ಪ್ರಮಾಣವನ್ನು ಕಡಿಮೆ ಮಾಡಲು ಮುಂದಾದದಲ್ಲಿ ಅದಕ್ಕಿಂತ ಶೋಚನೀಯ ಸಂಗತಿ ಮತ್ತೊಂದಿರುವುದಿಲ್ಲ. ಏಕೆಂದರೆ ಅದು ಆ ಪ್ರದೇಶಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೇ ಆಗುವ ನಷ್ಟವಾಗಿರುತ್ತದೆ. ಏಕೆಂದರೆ ಸಾಕಷ್ಟು ಅಡೆತಡೆಗಳ ನಡುವೆಯೂ ಹೇಗೆ ಭಿನ್ನ ಭಿನ್ನ ಧ್ವನಿಗಳಿಗೆ ಅವಕಾಶ ಮಾಡಿಕೊಡುತ್ತಾ ಯಾಜಮಾನಿಕ ಕಥನಗಳಿಗೆ ಸವಾಲೆಸೆಯಬಹುದೆಂಬುದನ್ನು ಅಲ್ ಜಝೀರಾ ಸಾಬೀತು ಪಡಿಸಿದೆ. 

Updated On : 13th Nov, 2017
Back to Top