ISSN (Print) - 0012-9976 | ISSN (Online) - 2349-8846

ಗೋವು ಪವಿತ್ರವೆಂಬ ರಾಜಕಾರಣ

ಕೊಲ್ಲುವ ಸಲುವಾಗಿ ಜಾನುವಾರುಗಳನ್ನು ಮಾರುಕಟ್ಟೆಯಲ್ಲಿ ಮಾರುವುದನ್ನು ನಿಷೇಧಿಸುವ ಹೊಸ ನಿಯಮಗಳು ಸಂವಿಧಾನಕ್ಕೆ ಮಾತ್ರವಲ್ಲದೆ ಹಿಂದೂಧರ್ಮಕ್ಕೂ ವಿರುದ್ಧವಾಗಿದೆ..

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

ಗುಜರಾತ್, ಹಿಮಾಚಲ್ ಪ್ರದೇಶ, ರಾಜಾಸ್ಥಾನ, ಹರ್ಯಾಣ ಮತ್ತು ಪಂಜಾಬು ರಾಜ್ಯಗಳಲ್ಲಿ ಹಸುಗಳನ್ನು ಕೊಲ್ಲುವುದನ್ನು ನಿಷೇಧಿಸುವ ಅತ್ಯಂತ ಕರಾಳ ಕಾನೂನುಗಳಿವೆ. ಆದರೆ ಪಶ್ಚಿಮ ಬಂಗಾಳ, ಕೇರಳ, ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾಗಳು ಹಸುಗಳನ್ನು ಕೊಲ್ಲುವುದನ್ನು ನಿಷೇಧಿಸುವುದಿಲ್ಲ. ಮತ್ತು ಒಡಿಷಾ, ಅಸ್ಸಾಂ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡುಗಳಲ್ಲಿ ಕೆಲವು ಶರತ್ತುಗಳಿಗೆ ಬದ್ಧವಾದ ನಿಷೇಧಗಳು ಮಾತ್ರ ಅಸ್ಥಿತ್ವದಲ್ಲಿವೆ. ಈ ರಾಜ್ಯಗಳಲ್ಲಿ ಗೊಡ್ಡು ಹಸುಗಳನ್ನೂ ಮತ್ತು ಗೇಯ್ಮೆ ಮಾಡದ ಎತ್ತುಗಳನ್ನು ಕೊಲ್ಲಬಹುದು.

ಕಳೆದ ಮೂರು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷಕ್ಕೆ ಒಂದು ವಿಷಯವಂತೂ ಸ್ಪಷ್ಟವಾಗಿ ಗೊತ್ತಿದೆ. ೧೯೮೦ರಿಂದ ಅದು ಸಾಧಿಸುತ್ತಿರುವ ಅಸಾಧಾರಣ ಏಳಿಗೆಗೆ ಮುಖ್ಯ ಕಾರಣ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಪ್ರಣೀತವಾದ ಆಕ್ರಮಣಶೀಲ ಹಿಂದೂತ್ವವಾದಿ ರಾಷ್ಟ್ರವಾದದ ರಾಜಕೀಯ ಪ್ರದರ್ಶನವನ್ನು ನಿರಂತರವಾಗಿ ಮಾಡಿಕೊಂಡುಬರುತ್ತಿರುವುದೇ ಆಗಿದೆ. ಇದೀಗ ತಾನು ಅಷ್ಟು ಪ್ರಬಲವಲ್ಲದ ರಾಜ್ಯಗಳಲ್ಲೂ ಅಧಿಕಾರವನ್ನು ಪಡೆದುಕೊಳ್ಳುವ ತಂತ್ರದ ಭಾಗವಾಗಿಯೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಉದ್ದಗಲಕ್ಕೂ ಜಾನುವಾರು ಹತ್ಯೆಯನ್ನು ನಿಷೇಧಿಸುವ ಕ್ರಮಕ್ಕೆ ಮುಂದಾಗಿದೆ. ಇದನ್ನದು ಪ್ರಿವೆನ್ಷನ್ ಆಫ್ ಕ್ರುಯೆಲ್ಟಿ ಟು ಅನಿಮಲ್ಸ್ ಆಕ್ಟ್ (ಪಿಸಿಎಎ) (ಪ್ರಾಣಿಗಳಮೇಲಿನ ಕ್ರೌರ್ಯವನ್ನು ನಿಷೇಧಿಸುವ ಕಾಯಿದೆ) ಗೆ ತಿದ್ದುಪಡಿಯನ್ನು ತರುವುದರ ಮೂಲಕ ಮಾಡುತ್ತಿದೆ. ಈ ಹೊಸ ತಿದ್ದುಪಡಿಗಳು ಜಾನುವಾರುಗಳನ್ನು ಕೊಲ್ಲುವ ಉದ್ದೇಶದಿಂದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದನ್ನು ದೇಶಾದ್ಯಂತ ನಿಷೇಧಿಸುತ್ತದೆ. ಮತ್ತು ಅದರ ಪರಿಣಾಮವಾಗಿ  ಇಡೀ ದೇಶದಲ್ಲಿ ಜಾನುವಾರು ಹತ್ಯೆಗಳನ್ನು ನಿಷೇಧಿಸುವ ಪ್ರಯತ್ನವನ್ನು ಮಾಡುತ್ತಿದೆ.

ಇದಲ್ಲದೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸ್ವಯಂಘೋಷಿತ ಗೋ ರಕ್ಷಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರಿಂದಲೂ ಬೆಂಬಲ ಪಡೆದುಕೊಂಡು ಹೊಸ ಬಗೆಯ ಆತಂಕವಾದವನ್ನೇ ಸೃಷ್ಟಿಸುತ್ತಿದ್ದಾರೆ. ಮುಸ್ಲಿಮರು ಮತ್ತು ದಲಿತರ ಮೇಲೆ ವಿಧವಿಧವಾದ ಬೆದರಿಕೆ ಮತ್ತು ಹಿಂಸಾಚಾರಗಳನ್ನು ಎಸಗುತ್ತಿದ್ದಾರೆ. ಚತ್ತೀಸ್‌ಘಡದ ಬಿಜೆಪಿ ಮುಖ್ಯಮಂತ್ರಿಯಾದ ರಮಣ್‌ಸಿಂಗ್‌ರಂತೂ ಹಸುವಿಗೆ ಉಪದ್ರವ ಕೊಡುವವರನ್ನು ನೇಣಿಗೇರಿಸುವುದಾಗಿ ಬೆದರಿಸಿದ್ದಾರೆ. ಗುಜರಾತಿನ ಬಿಜೆಪಿ ಮುಖ್ಯಮಂತ್ರಿಯವರು ಹಸುವಿನ ರಕ್ಷಣೆಯ ಮೂಲಕ ಜಗತ್ತನ್ನೇ ನೈತಿಕ ಆಧ್ಯಾತ್ಮಿಕ ಅವನತಿಯಿಂದ ರಕ್ಷಿಸಬಹುದೆಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಏಪ್ರಿಲ್‌ನಲ್ಲಿ ರಾಜಾಸ್ಥಾನದಲ್ಲಿ ದನಗಳನ್ನು ಜಾನುವಾರು ಮಾರುಕಟ್ಟೆಗೆ ಸಾಗಾಟ ಮಾಡುತ್ತಿದ್ದ ಪೆಹ್ಲೂ ಖಾನ್‌ನನ್ನು ಗೋ ರಕ್ಷಕ ಗೂಂಡಾಗಳು ಮಾರಣಾಂತಿಕವಾಗಿ ಬಡಿದು ಬಿಸಾಡಿದಾಗ ಆ ರಾಜ್ಯದ ಮಂತ್ರಿಯೊಬ್ಬರು ಪೊಲೀಸರು ಪಹ್ಲೂ ಖಾನ್ ಮೇಲೆ ಹಲ್ಲೆ ಮಾಡಿದವರನ್ನು ಹಿಡಿಯುವುದಕ್ಕಿಂತ ಜಾನುವಾರುಗಳನ್ನು ಹತ್ಯೆ ಮಾಡುವವರನ್ನು ಹಿಡಿಯಬೇಕೆಂದು ನಿರ್ದೇಶನ ನೀಡಿದ್ದರು. ಹಲ್ಲೆಯಲ್ಲಿ ಗಾಯಗೊಂಡಿದ್ದ  ಪಹ್ಲೂ ಖಾನ್ ಅದರಿಂದಾಗಿಯೇ ನಂತರದಲ್ಲಿ ಮರಣವನ್ನಪ್ಪಿದರು. ಪ್ರಾಯಶಃ ಜಾನುವಾರುಗಳನ್ನು ಕೊಲ್ಲುವುದಕ್ಕೆ ಸಹಕರಿಸುವುದು ಮನುಷ್ಯರ ಮೇಲೆ  ಮಾರಣಾಂತಿಕವಾಗಿ ಹಲ್ಲೆ ಮಾಡುವುದಕ್ಕಿಂತ ಮತ್ತು ಸಾವಿಗೆ ಕಾರಣವಾಗುವುದಕ್ಕಿಂತ ದೊಡ್ಡ ಅಪರಾಧವಾಗಿಬಿಟ್ಟಿದೆ.

ಸಂವಿಧಾನವು ಧಾರ್ಮಿಕ ಆಧಾರದಲ್ಲಿ ಹಸುವನ್ನು ರಕ್ಷಿಸುವುದಿಲ್ಲ ಎಂದು ಚೆನ್ನಾಗಿಬಲ್ಲ ನ್ಯಾಯಾಂಗವೂ ಸಹ ೨೦೦೫ರಲ್ಲಿ ಹಸು ಮತ್ತದರ ಸಂತತಿಯಯನ್ನು ಕೊಲ್ಲುವುದರ ಮೇಲೆ ಸಂಪೂರ್ಣ ನಿಷೇಧ ಹೇರಿದೆ. (ಪ್ರಭುತ್ವ ನಿರ್ದೇಶನಾ ತತ್ವದ ೪೮ನೇ ಕಲಮು ಕೃಷಿ ಮತ್ತು ಪಶುಸಂಗೋಪನೆಯ ಉದ್ದೇಶಗಳಿಗೆ ವ್ಯತಿರಿಕ್ತವಾದಲ್ಲಿ ಮಾತ್ರ ಹಸುಗಳನ್ನು ಕೊಲ್ಲುವುದನ್ನು ನಿಷೇಧಿಸುತ್ತದೆ). ಹಸುಗಳು ಮತ್ತು ದನಗಳು ಗೊಡ್ಡಾದರೂ, ಕೆಲಸ ಮಾಡಲು ಅನರ್ಹವಾದರೂ ಅವುಗಳ ಗಂಜಲ ಮತ್ತು ಸಗಣಿಯಿಂದ ಜೈವಿಕ ಅನಿಲವನ್ನು ಮತ್ತು ಹಲವು ಬಗೆಯ ಔಷಧಗಳನ್ನು ಉತ್ಪಾದಿಸಬಹುದೆಂದು ಏಳು ನ್ಯಾಯಾಧೀಶರ ಪೀಠವು ಅಭಿಪ್ರಾಯಪಟ್ಟಿದೆ. ಇಂಥಾ ಒಂದು ನ್ಯಾಯಾದೇಶದ ಹಿಂದೆ ಮುದಿಯಾದರೂ ಗೋ-ಮಾತೆಯನ್ನು ಪೂಜಾರ್ಹಳೆಂಬ ಹಿಂದೂ ಮನೋಧರ್ಮ ಕೆಲಸ ಮಾಡಿಲ್ಲ ಎಂದು ಹೇಳಲು ಸಾಧ್ಯವೇ?

ಗೊಡ್ಡು ಮತ್ತು ಗೇಯ್ಮೆ ಮಾಡದ ಜಾನುವಾರುಗಳನ್ನು ಕೊಲ್ಲುವುದನ್ನೂ ನಿಷೇಧಿಸುವ ಮೂಲಕ ಸಂಪನ್ಮೂಲಗಳು (ಮೇವು ಇತ್ಯಾದಿ) ವ್ಯರ್ಥವಾಗುವುದಿಲ್ಲವೇ? ಹಾಗೆಯೇ ಅವುಗಳನ್ನು ನಿಧಾನವಾಗಿ ಸಾಯಲು ಬಿಡುವುದರ ಮೂಲಕ ಹಲವಾರು ಜನರ ಆಹಾರವನ್ನು ಮತ್ತು ಜೀವನೋಪಾಯವನ್ನು ಕಸಿದುಕೊಂಡಂತಾಗುವುದಿಲ್ಲವೇ? ಈ ರೀತಿ ಜಾನುವಾರು ಹತ್ಯಾ ನಿಷೇಧವನ್ನು ಹೇರುವ ಮೂಲಕ ದಲಿತರು, ಆದಿವಾಸಿಗಳು, ಮುಸ್ಲಿಮರು, ಕ್ರೀಶ್ಚಿಯನ್ನರು, ಸಿಖ್ಕರು ಮತ್ತು ಹಲವಾರು ಹಿಂದೂಗಳೂ ಸಹ ತಮಗಿರುವ ಸೀಮಿತ ಸಂಪನ್ಮೂಲಗಳ ಮಿತಿಗಳಲ್ಲಿ ವಾರಕ್ಕೊಮ್ಮೆ ಅಥವಾ ಎರಡು ಬಾರಿ ದಕ್ಕಿಸಿಕೊಳ್ಳುತ್ತಿದ್ದ ಪ್ರಾಣಿ ಜನ್ಯ ಪ್ರೋಟೀನ್ ಆಹಾರದಿಂದ ವಂಚಿಸಿದಂತಾಗುವುದಿಲ್ಲವೇ?

ಮತ್ತೊಂದು ವಿಷಯವೆಂದರೆ ಪಿಸಿಎಎ ಕೆಳಗೆ ಮಾಡಿರುವ ಈ ನಿಯಮಗಳು ೪೮ನೇ ಕಲಮಿನಿಂದ ಮಾರ್ಗದರ್ಶನ ಪಡೆದ ಕಾಯಿದೆಯಿಂದ ಪ್ರೇರಣೆ ಪಡೆದಿಲ್ಲ.

ಆಧ್ಯಾತ್ಮಿಕವಾಗಿ ಮೋಕ್ಷವನ್ನು ಪಡೆದುಕೊಳ್ಳುವ ಗುರಿಯುಳ್ಳ ಹತ್ತು ಹಲವು ಬಗೆಯ  ಶ್ರದ್ಧೆ ಮತ್ತು ನಂಬಿಕೆಗಳ ಸಮಿಳಿತವಾಗಿರುವ ಹಿಂದೂ ಧರ್ಮಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ಸರ್ಕಾರದ ಸಿದ್ಧಾಂತವು ಹಿಂದೂತ್ವವಾಗಿದೆ. ಅದು ಸಂಪೂರ್ಣ ರಾಜಕೀಯ ಸರ್ವಾಧಿಕಾರವನ್ನು ಪಡೆಯುವ ಮತ್ತು ತನ್ನ ಮಾದರಿ ಹಿಂದೂಧರ್ಮವನ್ನು ಹೇರುವ ಉದ್ದೇಶವನ್ನು ಹೊಂದಿದೆ. ಪಿಸಿಎಎಗೆ ತಂದಿರುವ ಹೊಸ ತಿದ್ದುಪಡಿಗಳು ಬಿಜೆಪಿ ವ್ಯಾಖ್ಯಾನದ ಹಿಂದೂ ಧರ್ಮವನ್ನು ಒಪ್ಪದವರ ಜೀವನ ವಿಧಾನಗಳನ್ನೂ ಮತ್ತು ಜೀವನೋಪಾಯಗಳನ್ನು ನಿರಾಕರಿಸುತ್ತದೆ. ಹಾಗೆಯೇ ಈ ಕ್ರಮಗಳ ಮೂಲಕ ಹಿಂದೂ ಧರ್ಮೀಯರ ಧಾರ್ಮಿಕ ಮನೋಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು ಬಹುಸಂಖ್ಯಾತರ ಜನಾಭಿಪ್ರಾಯವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಮೂಲಕ ಬರಲಿರುವ ವಿಧಾನ ಸಭಾ ಚುನಾವಣೆಗಳಲ್ಲೂ ಮತ್ತು ೨೦೧೯ರ ಸಾರ್ವತ್ರಿಕ ಚುನಾವಣೆಗಳಲ್ಲೂ ಮೇಲುಗೈ ಪಡೆಯುವ ಉದ್ದೇಶವನ್ನೂ ಹೊಂದಿದೆ.

ಪಿಸಿಎಎಗೆ ತಂದಿರುವ ಹೊಸ ತಿದ್ದುಪಡಿಗಳನ್ನು ಅನಿವಾರ್ಯವಾಗಿ ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗುವುದು ಮತ್ತು ನ್ಯಾಯಾಲಯಗಳು ಈ ನಿಯಮಗಳನ್ನು ರದ್ದು ಕೂಡಾ ಮಾಡಬಹುದು. ಹಾಗಾಗುವುದೂ ಸಹ ಬಿಜೆಪಿಗೆ ಅನೂಕೂಲವೇ..ಆಗ ಅವರು ತಾವು ವೈದಿಕ ಸಂಸ್ಕೃತಿಯ ವೈಭವವನ್ನು ಜಾರಿಗೆತರಲು ಪ್ರಯತ್ನಿಸುತ್ತಿದ್ದರೂ ನ್ಯಾಯಾಲಯಗಳು ತಮ್ಮ ದಾರಿಗೆ ಅಡ್ಡವಾಗಿವೆಯೆಂದು ಬಹುಸಂಖ್ಯಾತ ಹಿಂದೂ ಮತದಾರರಿಗೆ ಮನವರಿಕೆ ಮಾಡಿಕೊಡಬಹುದು. ಆದರೆ ಅಸಲಿ ವಿಷಯವೆಂದರೆ ವೇದಕಾಲದಲ್ಲಾಗಲೀ, ವೇದೋತ್ತರ ಕಾಲದಲ್ಲಾಗಲೀ ಎಂದೂ ಹಸುವನ್ನು ಪವಿತ್ರ ಎಂದೇನೂ ಪರಿಗಣಿಸಿರಲಿಲ್ಲ. ಜಾನುವಾರುಗಳನ್ನು ಕೊಲ್ಲುವುದಾಗಲೀ, ಹಸುವಿನ ಮಾಂಸವನ್ನು ತಿನ್ನುವುದಾಗಲೀ ನೈತಿಕ ಉಲ್ಲಂಘನೆಯೂ ಆಗಿರಲಿಲ್ಲ. ಯಾವುದೇ ಕಾನೂನುಗಳ ಉಲ್ಲಂಘನೆಯೂ ಆಗಿರಲಿಲ್ಲ. ಮೇಲಾಗಿ ಕ್ರಿ.ಪೂ. ೧೫೦೦ ರಿಂದ ಕ್ರಿ.ಪೂ. ೬೦೦ ರ ತನಕ ಹಸುವಿನ ಮಾಂಸವನ್ನು ತಿನ್ನುವುದು ಭಾರತದಲ್ಲಿ ಅತ್ಯಂತ ಸಾಮಾನ್ಯವಾದ ಸಂಗತಿಯಾಗಿತ್ತು. ಆದರೆ ಇಂಥಾ ಸತ್ಯ ಸಂಗತಿಗಳನ್ನು ಜೀರ್ಣಿಸಿಕೊಳ್ಳಲಾಗದ ಹಿಂದೂತ್ವವಾದಿಗಳು ಹಿಂದೂಧರ್ಮದ ಇತಿಹಾಸದ ಈ ಭಾಗವನ್ನೇ ತಮ್ಮ ಅನುಕೂಲಕ್ಕೆ ತಕ್ಕಂತೆ ಕತ್ತರಿಸಿ ಹಾಕಲು ಯತ್ನಿಸುತ್ತಿದ್ದಾರೆ. ವಾಸ್ತವವಾಗಿ ಈ ಹೊಸ ಪಿಸಿಎಎ ತಿದ್ದುಪಡಿ ನಿಯಮಗಳು ಅಸಾಂವಿಧಾನಿಕ ಮಾತ್ರವಲ್ಲ ಅಹಿಂದೂ ಕೂಡ ಆಗಿದೆ. 

Updated On : 13th Nov, 2017
Back to Top