ISSN (Print) - 0012-9976 | ISSN (Online) - 2349-8846

ಪ್ರಜಾತಂತ್ರವಿಲ್ಲದ ಸಂಸತ್ತು

೨೦೧೭ರ ಧನ ಮಸೂದೆಯು (ಫೈನಾನ್ಸ್ ಬಿಲ್) ನಮ್ಮ ಪ್ರಜಾಸತ್ತೆಯ ಮೂಲಗುಣಲಕ್ಷಣಗಳ ಮೇಲೆ ದೊಡ್ಡ ಪ್ರಹಾರ ಮಾಡಿದೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

ಇತ್ತೀಚೆಗೆ ಮುಕ್ತಾಯವಾದ ಸಂಸತ್ ಅಧಿವೇಶನದ ಕೊನೆಯ ಕ್ಷಣಗಳಲ್ಲಿ ಕೇಂದ್ರ ಸರ್ಕಾರವು ತಾನು ಮಂಡಿಸಿದ್ದ ೨೦೧೭ರ ಧನ ಮಸೂದೆ(ಫೈನಾನ್ಸ್ ಬಿಲ್‌ಗೆ) ಹಲವಾರು ತಿದ್ದುಪಡಿಗಳನ್ನು ಸೇರಿಸಿಬಿಟ್ಟಿತು. ಇದರಿಂದಾಗಿ  ಕೇಂದ್ರದ  ೪೦ ಕಾನೂನುಗಳು ಯಾವುದೇ ಚರ್ಚೆ/ಸಮಾಲೋಚನೆ ಇಲ್ಲದೆ ಮಾರ್ಪಾಡಾಗಿಬಿಟ್ಟಿವೆ.  ಈ ಕ್ರಮದ ಮೂಲಕ ಸರ್ಕಾರವು ಒಂದು ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಈ ಸರ್ಕಾರಕ್ಕೆ  ರಾಜಕೀಯ ಎದುರಾಳಿಗಳ ಜೊತೆಗ ಸಮಾಲೋಚನೆ ಮಾಡುವ ಪದ್ಧತಿಯ ಬಗ್ಗೆ ವಿಶ್ವಾಸವಿಲ್ಲ. ಸರ್ಕಾರದ ಕಾಯಿದೆಗಳನ್ನು ನ್ಯಾಯಾಂಗವು ಸ್ವತಂತ್ರವಾಗಿ ಪರಿವೀಕ್ಷಣೆ ಮಾಡುವುದರ ಬಗ್ಗೆ ಸಮ್ಮತಿಯಿಲ್ಲ.

ಅಷ್ಟು ಮಾತ್ರವಲ್ಲ. ತನ್ನ ಹಿಂದಿನ ಸರ್ಕಾರದ ಮೇಲೆ "ತೆರಿಗೆ ಭಯೋತ್ಪಾದನೆ"ಯ ಆರೋಪ ಮಾಡಿದ್ದವರು ಇದೀಗ ತೆರಿಗೆ ಅಧಿಕಾರಿಗಳಿಗೆ ನೀಡುತ್ತಿರುವ ಅಪರಿಮಿತ ಅಧಿಕಾರಗಳ ಬಗ್ಗೆ ಚರ್ಚೆ ಕೂಡಾ  ಮಾಡಲೂ ಸಿದ್ಧರಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ರಾಜಕೀಯ ಪಕ್ಷಗಳಿಗೆ ನೀಡಲ್ಪಡುವ ದೇಣಿUಯ ಪದ್ಧತಿಯು ಪಾರದರ್ಶಕವಾಗಿರಬೇಕೆಂಬ ಬಗ್ಗೆ ಪುಂಖಾನುಪುಂಖವಾಗಿ ಭಾಷಣಗಳ ಮಳೆಗೆರೆದ ಈ ಸರ್ಕಾರ ಈಗ ಅದಕ್ಕೆ ತದ್ವಿರುದ್ಧವಾದುದನ್ನೇ ಮಾಡಿzಯಲ್ಲದೆ ಭಾರತದ ಪ್ರಜಾತಂತ್ರವನ್ನು ಕಾರ್ಪೊರೇಟ್ ಆಸಕ್ತಿಗಳಿಗೆ ಹೆಚ್ಚಿನ ಅಡಿಯಳಾಗಿಸಿದೆ.

೨೦೧೭ರ ಧನ ಮಸೂದೆಯನ್ನು ಲೋಕಸಭೆಯಲ್ಲಿ ಒಂದು ಹಣಕಾಸು ಮಸೂದೆ (ಮನಿ ಬಿಲ್) ಯಾಗಿ ಮಂಡಿಸಲಾಯಿತು. ನಮ್ಮ ಎರಡು ಸದನಗಳ ಆಡಳಿತ ಪದ್ಧತಿಯಲ್ಲಿ ಹಣಕಾಸು ಮಸೂದೆಯ ಮೇಲೆ ಕೆಳಮನೆಗೆ (ಲೋಕಸಭೆಗೆ) ಪರಮೋಚ್ಚ ಅಧಿಕಾರವಿರುತ್ತದೆ. ಹಾಗಿದ್ದರೂ ಹಲವಾರು ಕಾನುಗಳಿಗೆ ತಾನು ತರಬಯಸಿದ್ದ  ಸಾರರೂಪದ ಮತ್ತು ದೂರಗಾಮಿ ಪರಿಣಾಮ ಬೀರಬಲ್ಲ ಬದಲಾವಣೆಗಳನ್ನು ಸರ್ಕಾರವು ಈ ಹಣಕಾಸು ಮಸೂದೆಯ ರೂಪದಲ್ಲಿ ತಂದುಬಿಟ್ಟಿದೆ. ಅಷ್ಟು ಮಾತ್ರವಲ್ಲ. ಆಧಾರ್ ಮಸೂದೆ-೨೦೧೬ ಅನ್ನು (ಈಗ ಆಧಾರ್ ಕಾಯಿದೆ-೨೦೧೬) ಲೋಕಸಭೆಯೆ ಸಭಾದ್ಯಕ್ಷರು ಒಂದು ಹಣಕಾಸು ಮಸೂದೆಯೆಂದು ವರ್ಗೀಕರಿಸಿ ಮಂಡನೆಗೆ ಅವಕಾಶ ಕೊಟ್ಟಿರುವುದನ್ನು ಆಕ್ಷೇಪಿಸಿ ರಾಜ್ಯಸಭೆಯ ಸದಸ್ಯರಾದ ಜೈರಾಂ ರಮೇಶ್ ಅವರು ಸಲ್ಲಿಸಿರುವ ಅಹವಾಲೊಂದು  ಸುಪ್ರಿಂಕೋರ್ಟಿನ ಮುಂದಿದೆ. ಹಾಗಿದ್ದರೂ ಸರ್ಕಾರ ಅದನ್ನು ಹಣಕಾಸು ಮಸೂದೆಯಾಗಿಯೇ ಲೋಕಸಭೆಯೆಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡುಬಿಟ್ಟಿದೆ. ಸಂವಿಧಾನದ ೧೧೦ (೩)ನೇ ಕಲಮು ಯಾವೆಲ್ಲಾ ಮಸೂದೆಗಳು ಹಣಕಾಸು ಮಸೂದೆಗೆ ಸೇರುತ್ತವೆ ಎಂಬ ಬಗ್ಗೆ ಅಂತಿಮ ತೀರ್ಮಾನ ಮಾಡುವ ಅಧಿಕಾರವನ್ನು ಲೋಕಸಭೆಯ ಸಭಾಪತಿಗಳಿ ಬಿಟ್ಟುಕೊಟ್ಟಿದ್ದರೂ, ಸಂವಿಧಾನದ ೨೦೧೭ರ ಧನ ಮಸೂದೆಯನ್ನು ಒಂದು ಹಣಕಾಸು ಮಸೂದೆಯನ್ನಾಗಿ ವರ್ಗೀಕರಿಸಿರುವುದನ್ನು ಸಮರ್ಥಿಸಿಕೊಳ್ಳುವುದು ಕಷ್ಟದ ಕೆಲಸ. ಸಂವಿಧಾನದ ೧೧೦ (೧) ನೇ ಕಲಮಿನ ಪ್ರಕಾರ ತೆರಿಗೆ ವ್ಯವಹಾರ, ಸರ್ಕಾರದ ಸಾಗಳು ಮತ್ತು ಖಾತ್ರಿಗಳು (ಗ್ಯಾರಂಟಿಗಳು), ಸರ್ಕಾರದ ವೆಚ್ಚ  ಅಥವಾ ಅಂಥಾ ವಿಷಯಗಳನ್ನು ಮಾತ್ರ ಹಣಕಾಸು ಮಸೂದೆಯಲ್ಲಿ ಪರಿಗಣಿಸಬಹುದು.  ಸಾಮಾನ್ಯವಾಗಿ, ಪ್ರತಿವರ್ಷವೂ ನಡೆಯುವ ಬಜೆಟ್ ಕಸರತ್ತುಗಳು ಹಣಕಾಸು ಮಸೂದೆಯಾಗಿ ಅನುಮೋದಿಸಲ್ಪಡುತ್ತವೆ. ಆದರೆ ೨೦೧೭ರ ಧನ ಮಸೂದೆಯು ಹಲವಾರು ರೀತಿಯಲ್ಲಿ ಆ ಚೌಕಟ್ಟನ್ನು ಮೀರಿದ ಮಸೂದೆಯಾಗಿದೆ.

ಮೊದಲನೆಯದಾಗಿ ಈ ಹಣಕಾಸು ಮಸೂದೆಯ ಭಾಗವಾಗಿ ೨೦೧೩ರ ಕಂಪನಿ ಕಾಯಿದೆಯ ಸೆಕ್ಷನ್ ೧೮೨ಕ್ಕೆ ತಿಡ್ಡುಪಡಿ ಮಾಡಲಾಗಿದೆ. ಈ ಮೊದಲು ಸರ್ಕಾರೇತರ ಕಂಪನಿಗಳು ತಮ್ಮ ಮೂರುವರ್ಷಗಳ ಸರಾಸರಿ ಲಾಭದ ಶೇ.೭.೫ರಷ್ಟನ್ನು ಮಾತ್ರ ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ಕೊಡಬಹುದಿತ್ತು. ಈಗ ತಂದಿರುವ ಹೊಸ ತಿದ್ದುಪಡಿಯ ಪ್ರಕಾರ ಕಂಪನಿಗಳು ಎಷ್ಟು ಹಣವನ್ನು ಬೇಕಾದರೂ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಹುದು. ಈ ಹಿಂದಿನ ಕಾನೂನಿನ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ನೀಡಲಾಗಿದೆಯೆಂಬುದನ್ನು ಸ್ಪಷ್ಟಪಡಿಸಬೇಕಿತ್ತು. ಈಗ ತಂದಿರುವ ತಿದ್ದುಪಡಿಗಳು ದೇಣಿಗೆಯ ಮೊತ್ತದ ಮೇಲಿದ್ದ ಮಿತಿಯನ್ನು ತೆಗೆದುಹಾಕಿರುವುದು ಮಾತ್ರವಲ್ಲದೆ ದೇಣಿಗೆಕೊಟ್ಟ ಪಕ್ಷದ ಹೆಸರನ್ನು ಬಹಿರಂಗಗೊಳಿಸಬೇಕಿಲ್ಲವೆಂದು ಹೇಳುತ್ತದೆ.

೧೯೮೫ರಲ್ಲಿ ೧೯೫೬ರ ಕಂಪನಿ ಕಾಯಿದೆಗೆ ತಿದ್ದುಪಡಿ ತರುವ ತನಕ ಕಂಪನಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆಯನ್ನೇ ಕೊಡುವಂತಿರಲಿಲ್ಲ. ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆಯನ್ನು ಪಡೆಯಲು ಅವಕಾಶ ಕೊಟ್ಟರೆ ಕಾರ್ಪೊರೇಟ್ ಸಂಸ್ಥೆಗಳು ಅವನ್ನು  ಭವಿಷ್ಯದಲ್ಲಿ "ಲಾಭವನ್ನು" ತರುವ ಒಂದು "ಹೂಡಿಕೆ" ಯೆಂದು ಭಾವಿಸುತ್ತಾರೆಂದು ಚುನಾವಣಾ ಸುಧಾರಣೆಯ ಬಗ್ಗೆ ರಚಿಸಲಾದ ಹಲವಾರು ಸಮಿತಿಗಳು ಅಭಿಪ್ರಾಯ ಪಟ್ಟಿದ್ದವು. ಸರ್ಕಾರದ ನೀತಿಗಳು ಅಂಥ ದೇಣಿಗೆಗಳನ್ನು ಕೊಟ್ಟ ಕಂಪನಿಗಳ ಪರವಾಗಿ ರೂಪಿತವಾಗುವಂತೆ ಪ್ರಭಾವ ಬೀರುತ್ತದೆಂಬುದು ಅವರ ಪ್ರತಿಪಾದನೆಯಾಗಿತ್ತು.

ಪ್ರಸ್ತುತ ಜಾರಿಯಾಗಿರುವ ತಿದ್ದುಪಡಿಗಳು ದೇಶವನ್ನು ತದ್ವಿರುದ್ಧ ದಿಕ್ಕಿಗೆ ಎಳೆದೊಯ್ಯುವುದಲ್ಲದೆ ರಾಜಕೀಯ ಮತ್ತು ಉದ್ಯಮಗಳ ನಡುವಿನ ಒಳಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ದೇಣಿಗೆಯನ್ನು ಕೊಟ್ಟವರು  ಅನಾಮಧೇಯರಾಗಿ ಉಳಿಯಲು ಅವಕಾಶಕೊಡುವ ಮೂಲಕ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ಸಂಸ್ಥೆಗಳು ನೀಡುವ ದೇಣಿಗೆಗಳು ಇನ್ನಷ್ಟು ಅಪಾರದರ್ಶಕವಾಗುತ್ತದೆ. ಮತ್ತು ಯಾವುದೇ ಉತ್ತರದಾಯಿತ್ವ ಮತ್ತು ಲೆಕ್ಕಪರಿಶೀಲನೆಯಿಂದ ಮುಕ್ತವಾಗುತ್ತವೆ.  ಲೋಕಸಭೆಯು ೨೦೧೩ರ ಕಂಪನಿ ಕಾಯಿದೆಗೆ ಮಾಡಿದ ಈ ತಿದ್ದುಪಡಿUಳಿಂದ ಉಂಟಾಗಬಹುದಾದ ಅಪಾಯಗಳನ್ನು ತಡೆಗಟ್ಟಲು  ರಾಜ್ಯಸಭೆಯು ಹಲವಾರು ತಿದ್ದುಪಡಿಗಳನ್ನು ಅನುಮೋದಿಸಿದರೂ ಅವನ್ನು ಲೋಕಸಭೆಯು ತಿರಸ್ಕರಿಸಿತು. ಈ ಹಿಂದೆಯೂ ಸರ್ಕಾರವು ಕಾರ್ಪೊರೇಟ್ ದೇಣಿಗೆಯ ಕುರಿತು ಈ ಬಗೆಯ ಅಪ್ರಜಾತಾಂತ್ರಿಕ ದಾರಿಯನ್ನೇ ಹಿಡಿದಿತ್ತು. ಲಂಡನ್ ಮೂಲದ ವೇದಾಂತ ಕಂಪನಿಯಿಂದ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ದೇಣಿಗೆಯನ್ನು ಸ್ವೀಕರಿಸಿರುವುದು ಕಾನೂನುಬಾಹಿರವೆಂದು ಇತ್ತೀಚೆಗೆ ಸುಪ್ರೀಂ ಕೋರ್ಟು ಆದೇಶ ನೀಡಿತ್ತು. ಅದರಿಂದ ತಪ್ಪಿಸಿಕೊಳ್ಳಲು ಸರ್ಕಾರವು ಯಾವುದು ವಿದೇಶಿ ಕಂಪನಿ ಎಂಬ ನಿರ್ವಚನವನ್ನೇ ಬದಲಾಯಿಸುವ ತಿದ್ದುಪಡಿಯನ್ನು ಧನ ಮಸೂದೆ ೨೦೧೬ರಲ್ಲಿ ಅಳವಡಿಸಿ ಅನುಮೋದನೆ ಪಡೆದುಕೊಂಡಿತ್ತು. 

ಹಾಗೆಯೇ ಕೆಲವು ನ್ಯಾಯಮಂಡಳಿಗಳನ್ನು (ಟ್ರಿಬ್ಯುನಲ್) ಇತರ ನ್ಯಾಯಮಂಡಳಿಗಳೊಂದಿಗೆ ಸೇರ್ಪಡೆ ಮಾಡುವ ತಿದ್ದುಪಡಿಗಳು ಸಹ ಕಳವಳಕಾರಿಯಾಗಿದೆ. ಈ ತಿದ್ದುಪಡಿಗಳು ನಿರ್ದಿಷ್ಟ ವಿಷಯ ಪರಿಣಿತಿಯುಳ್ಳ ನ್ಯಾಯಮಂಡಳಿಗಳ ಪ್ರಸ್ತುತತೆಯನ್ನೇ ಅಲ್ಲಗೆಳೆಯುತ್ತಾ ಸಂಬಂಧವಿಲ್ಲದ ನ್ಯಾಯಮಂಡಳಿಗಳನ್ನು ಒಂದಾಗಿ ವಿಲೀನಗೊಳಿಸುವುದಲ್ಲದೆ ಈಗಾಗಲೇ ಅಸ್ತಿತ್ವದಲ್ಲಿರುವ ನ್ಯಾಯಮಂಡಳಿಗಳ ಹೊರೆಯನ್ನೂ ಹೆಚ್ಚಿಸುತ್ತದೆ. ಅತ್ಯಂತ ಮುಖ್ಯವಾಗಿ ಈಗ ನ್ಯಾಯಮಂಡಳಿಗಳ ಸದಸ್ಯರ ನೇಮಕಾತಿಯಲ್ಲಿ, ಸೇವಾ ನಿಯಮಗಳನ್ನು ರೂಪಿಸುವಲ್ಲಿ, ಮತ್ತು ಅವರನ್ನು ವಜಾಗೊಳಿಸುವಲ್ಲಿ ಸರ್ಕಾರವು ತನಗೆ ಹೆಚ್ಚಿನ ಪಾತ್ರವನ್ನು ಕಲ್ಪಿಸಿಕೊಂಡಿದೆ. ಒಂದು ಅರೆ-ನ್ಯಾಯಿಕ ಸಂಸ್ಥೆಗಳಾಗಿ ಉಚ್ಚನ್ಯಾಯಾಲಯಗಳಿಗೆ ಸರಿಸಮಾನದ ಕಾರ್ಯಭಾರ ಮತ್ತು ಅಧಿಕಾರವನ್ನು ಹೊಂದಿರುವ ನ್ಯಾಯಮಂಡಳಿಗಳ ಸ್ವಾಯತ್ತತೆಯನ್ನೇ ಈ ತಿದ್ದುಪಡಿಗಳು ಮುಕ್ಕಾಗಿಸುತ್ತದೆ. ೨೦೧೪ರಲ್ಲಿ ಸುಪ್ರಿಂ ಕೋರ್ಟೇ ಸೂಚಿಸಿದದಂತೆ ಇಂಥಾ ಮಂಡಳಿಗಳ ನೇಮಕಾತಿಯಲ್ಲಿ ಕಾರ್ಯಾಂಗದ ಹಸ್ತಕ್ಷೇಪವಿರಬಾರದು. ಸರ್ಕಾರವೇ ಕೆಲವೊಮ್ಮೆ ಅಂಥಾ ನ್ಯಾಯಮಂಡಳಿಗಳಲ್ಲಿ ದೂರುದಾರನಾಗಿರುತ್ತದೆ. ಹೀಗಾಗಿ ನೇಮಕಾತಿಗಳಲ್ಲಿ ಸರ್ಕಾರದ ಹಸ್ತಕ್ಷೇಪದಿಂದಾಗಿ ಉಂಟಾಗುವ "ಹಿತಾಸಕ್ತಿಗಳ ನಡುವಿನ ಸಂಘರ್ಷವನು" ಸರ್ಕಾರವು ನಿರಾಕರಿಸುತ್ತಿರುವುದು ದಿಗ್ಭ್ರಾಂತಿ ಮೂಡಿಸುತ್ತದೆ. ಸರ್ಕಾರವು ಈ ವಿಷಯಗಳಲ್ಲಿ ನ್ಯಾಯಾಂಗದ ಜೊತೆ ಸಮಾಲೋಚಿಸುವುದಾಗಿ ರಾಜ್ಯಸಭೆಯಲ್ಲಿ ಭರವಸೆ ನೀಡಿದೆ. ಆದರೆ ಅಷ್ಟು ಸಾಲುವುದಿಲ್ಲ. 

ಧನ ಮಸೂದೆಗೆ ಮಾಡಿರುವ ತಿದ್ದುಪಡಿಗಳ ಮತ್ತೊಂದು ಕಳವಳಕಾರಿ ಅಂಶವೆಂದರೆ  ಆದಾಯ ತೆರಿಗೆ ಕಾಯಿದೆ-೧೯೬೧ಕ್ಕೆ ತಿದ್ದುಪಡಿ ತಂದು ಆದಾಯ ತೆರಿಗೆ ಅಧಿಕಾರಿಗಳ ಅಧಿಕಾರವನ್ನು ಹಿಗ್ಗಿಸಿ ಅಪರಿಮಿತ ಅಧಿಕಾರವನ್ನು ನೀಡಿರುವುದು. ಕೇವಲ "ನಂಬಲರ್ಹ ಕಾರಣವಿದ್ದರೆ" ಸಾಕು, ಅನುಮಾನಿತರ ಮೇಲೆ ದಾಳಿ ನಡೆಸಿ ಆಸ್ತಿಪಾಸ್ತಿಯನ್ನು ವಶಪಡಿಸಿಕೊಳ್ಳಬಹುದಾದ ಅಧಿಕಾರವನ್ನು ತೆರಿಗೆ ಅಧಿಕಾರಿಗಳಿಗೆ ಈ ತಿದ್ದುಪಡಿಯು ಕೊಡುತ್ತದೆ. ಮತ್ತು ಈ ತಿದ್ದುಪಡಿಗಳು ೧೯೬೨ರಷ್ಟು ಹಿಂದಿನ ಪ್ರಕರಣಗಳಿಗೂ ಪೂರ್ವಾನ್ವಯವಾಗುತ್ತದೆ. ಇದನ್ನು ದಾಳಿಗೊಳಗಾದವರು ಪ್ರಶ್ನಿಸಬಹುದು. ಆದರೆ ದಾಳಿ ಮಾಡಿದ ಕಾರಣವನ್ನು ಅಧಿಕಾರಿಗಳು ಯಾವುದೇ ಪ್ರಾಧಿಕಾರಕ್ಕಾಗಲೀ, ನ್ಯಾಯಮಂಡಳಿಗಾಗಲೀ ಬಹಿರಂಗಪಡಿಸಬೇಕಿಲ್ಲ. ಸಾರಾಂಶದಲ್ಲಿ ಇದೊಂದು ಕರಾಳ ಕ್ರಮವಾಗಿದ್ದು ತಮಗೆ ಬೇಡವಾದವರಿಗೆ ಕಿರುಕುಳ ನೀಡುವಂಥ ಮತ್ತು ಬೆದರಿಸುವಂಥಾ ಅಧಿಕಾರವನ್ನು ತೆರಿಗೆ ಅಧಿಕಾರಿಗಳಿಗೆ ನೀಡುತ್ತದೆ. ಇಂಥಾ ಕ್ರಮಗಳನ್ನು ತಡೆಗಟ್ಟಬಹುದಾದ  ತಿದ್ದುಪಡಿಗಳನ್ನು  ರಾಜ್ಯಸಭೆಯು ಸೂಚಿಸಿದರೂ ಲೋಕಸಭೆಯು ಅದನ್ನು ಸಾರಸಗಟು ತಿರಸ್ಕರಿಸಿದೆ. 

ಈ ತಿದ್ದುಪಡಿಗಳ ಇತರ ಸೂಕ್ಷ ಅಂಶಗಳನ್ನೂ ಸಹ ಚರ್ಚಿಸಬಹುದು. ಆದರೆ ಎಲ್ಲಕ್ಕಿಂತ ಮುಖ್ಯವಾದ ವಿಚಾರವೆಂದರೆ ನಮ್ಮ ಉಭಯ ಸದನಗಳ ಆಡಳಿತ ಪದ್ಧತಿಯನ್ನು ಮತ್ತು ಸಂವಿಧಾನದಲ್ಲಿ ಮೇಲ್ಮನೆಗೆ  (ರಾಜ್ಯಸಭೆ) ಕಲ್ಪಿಸಲಾದ ಪಾತ್ರವನ್ನೇ ಈ ತಿದ್ದುಪಡಿಗಳು ಬುಡಮೇಲು ಮಾಡಿದೆ. ರಾಜ್ಯಸಭೆಯಲ್ಲಿ ಆಡಳಿತರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ)ಗೆ ಇನ್ನೂ ಬಹುಮತವಿಲ್ಲವಾದ್ದರಿಂದ ತಮಗೆ ಬೇಕಾದ ಕಾನೂನುಗಳನ್ನು ರಾಜ್ಯಸಭೆಯ ಒಪ್ಪಿಗೆಯ ಅಗತ್ಯವೇ ಇಲ್ಲದ ರೀತಿ ಹಣಕಾಸು ಮಸೂದೆಯ ರೂಪದಲ್ಲಿ ಜಾರಿಗೆ ತಂದುಬಿಡುವುದು ಈ ಸರ್ಕಾರವು ಪದೇಪದೇ ಅನುಸರಿಸುತ್ತಿರುವ ಪದ್ಧತಿಯಾಗುತ್ತಿದೆ. ಸಾರಾಂಶದಲ್ಲಿ, ಇದು ಲೋಕಸಭೆಯಲ್ಲಿ ಪ್ರಚಂಡ ಬಹುಮತ ಉಳ್ಳ ಸರ್ಕಾರವೊಂದು ತನ್ನನ್ನು ನಿಯಂತ್ರಿಸಬಹುದಾದ ರಾಜ್ಯಸಭೆಯ ಅಧಿಕಾರವನ್ನೇ ಮೊಟಕುಗೊಳಿಬಿಡುವಂಥ  ವ್ಯೂಹತಂತ್ರವಾಗಿದೆ. ತನ್ನ ಗುರಿಗಳನ್ನು ಈಡೇರಿಸಿಕೊಳ್ಳಲು ಎಂಥಾ ಮಾರ್ಗವನ್ನಾದರೂ ಅನುಸರಿಸುತ್ತಿರುವ ಈ ಸರ್ಕಾರ ಪ್ರತಾಂತ್ರಿಕ ಪದ್ಧತಿಗಳನ್ನು ಮಾತ್ರವಲ್ಲದೆ ಸಂವಿಧಾನದ ಗುಣಲಕ್ಷಣಕ್ಕೇ ಭಂಗ ತರುತ್ತಿದೆ. 

Updated On : 13th Nov, 2017
Back to Top